ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕು : ಸಚಿವ ಕೋಟ ಶ್ರೀನಿವಾಸ

Social Share

ಬೆಂಗಳೂರು,ಜ.7- ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಕ್ರಿಯಾಶೀಲವಾಗಿದೆ, ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ನಾವೆಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಮನವಿ ಸ್ವೀಕರಿಸಿ ಮಾತಾಡಿದ ಅವರು, ವೇದಿಕೆಯ ಮನವಿಯಂತೆ ಸುಮಾರು 73 ಅತಿ ಹಿಂದುಳಿದ ಜಾತಿಗಳನ್ನು ಗುರುತಿಸಿ ಒಬಿಸಿ ಪಟ್ಟಿಯಲ್ಲಿ ಸೇರಿಸಲು ಕೇಂದ್ರಕ್ಕೆ ಶಿಫಾರಸು ಮಾಡುತ್ತೇವೆ. ದೇವರಾಜು ಅರಸು ಸಂಶೋಧನಾ ಪೀಠಕ್ಕೆ ಅನುಧಾನ ನೀಡಲಾಗುತ್ತದೆ ಎಂದು ಹೇಳಿದರು.
ಬಲಾಡ್ಯ ಸಮುದಾಯಗಳೂ ಸಹ ಆರ್ಥಿಕವಾಗಿ ಹಿಂದುಳಿದಿರುವುದಾಗಿ ಅಹವಾಲನ್ನು ಕೊಡುತ್ತವೆ, ಆದರೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಹಿಂದುಳಿದಿರುವ ಸಮುದಾಯಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಇನ್ನು ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳ ಕುರಿತಾಗಿ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವಿದೆ. ದೇವರಾಜ ಅರಸು ಅವರ ಇಲ್ಲದವರಿಗೆ ಭೂಸುಧಾರಣೆ ಯೋಜನೆಯ ಫಲಾನುಭವಿ ನಾನು, ಅವತ್ತು ನನಗೆ 2 ಎಕರೆ ಭೂಮಿ ಸಿಕ್ಕಿತ್ತು ಎಂದು ಪೂಜಾರಿ ಸ್ಮರಿಸಿಕೊಂಡರು.
ಅತಿ ಹಿಂದುಳಿದ ವರ್ಗಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೀಸಲಾತಿ ವಿಚಾರವಾಗಿ ಯಾರಿಗೂ ಅನ್ಯಾಯವಾಗದಂತೆ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈಗಾಗಲೇ ಹಿಂದುಳಿದ ಆಯೋಗದ ಅಧ್ಯಕ್ಷರು ಹಲವು ಸಮುದಾಯಗಳ ಪ್ರಸ್ತಾಪವನ್ನು ಪರಿಶೀಲಿಸುತ್ತಿದ್ದಾರೆ.
ನಮ್ಮ ಸಮಾಜ ಇನ್ನೂ ಹೆಸರೇ ಕೇಳದ, ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಅದೆಷ್ಟೋ ಸಮುದಾಯಗಳ ಬದುಕು ಬದುಕು ದಾರುಣವಾಗಿದೆ. ಸ್ಥಳೀಯ ಸಂಸ್ಥೆಗಳ ಆಡಳಿತದಲ್ಲಿ ಮೀಸಲಾತಿ ವಿಚಾರದಲ್ಲಿ ಮುಂದಿನ 15 ದಿನಗಳಲ್ಲಿ ಸಭೆ ಕರೆದು ಚರ್ಚೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆಯ ಅಧ್ಯಕ್ಷರಾದ ಎಂ ಸಿ ವೇಣುಗೋಪಾಲ ಮಾತನಾಡಿ ಒಂದು ವೇಳೆ ವೀರಶೈವ ಲಿಂಗಾಯಿತದ ಉಪಜಾತಿಯಾದ ಪಂಚಮಸಾಲಿ ಸಮುದಾಯವನ್ನು ಪ್ರವರ್ಗ-2ಎ ಪಟ್ಟಿಗೆ ಸೇರಿಸಿದರೆ ಹಿಂದುಳಿದ ಸಮುದಾಯಗಳು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.
ಇದೇ ವೇಳೆ ಸಚಿವರಿಗೆ ಕರ್ನಾಟಕ ರಾಜ್ಯ ಅತಿ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ವತಿಯಿಂದ ಸರ್ಕಾರದ ಗಮನ ಸೆಳೆಯುವಂತೆ ಒತ್ತಾಯಿಸಿ, ಪ್ರಮುಖ ಬೇಡಿಕೆಗಳ ಮನವಿ ಪತ್ರ ನೀಡಲಾಯಿತು.
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಮೊಮ್ಮಗ ಸೂರಜ್, ನಿವೃತ್ತ ಐಎಎಸ್ ಅಧಿಕಾರಿ ಶ್ರೀನಿವಾಸ ಆಚಾರಿ, ನಿವೃತ್ತ ಐಎಎಸ್ ಅಧಿಕಾರಿ ಎಸ್ ಪುಟ್ಟಸ್ವಾಮಿ, ಕೆಎಎಸ್ ಅಧಿಕಾರಿ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಕೆಎನ್ ಲಿಂಗಪ್ಪ, ವಿಧಾನ ಪರಿಷತ್ ಮಾಜಿ ಶಾಸಕ ತಿಪ್ಪಣ್ಣ, ಉಪಸ್ಥಿತರಿದ್ದರು.

Articles You Might Like

Share This Article