ಬಿಜೆಪಿಯನ್ನು ಪದೇ ಪದೇ ಇಕ್ಕಟ್ಟಿಗೆ ಸಿಲುಕಿಸುತ್ತಿರುವ ಈಶ್ವರಪ್ಪ ವಿವಾದಿತ ಹೇಳಿಕೆಗಳು

Social Share

ಬೆಂಗಳೂರು,ಫೆ.18- ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಆಗಾಗ ನಾಲಿಗೆ ಹರಿಬಿಟ್ಟು ಸುದ್ದಿಯಾಗುತ್ತಿದ್ದು, ಇವರ ಹೇಳಿಕೆ ಖಂಡಿಸಲೂ ಆಗದೆ, ಸಮರ್ಥಿಸಿಕೊಳ್ಳಲೂ ಆಗದೆ ಬಿಜೆಪಿ ಸಂದಿಗ್ಧ ಸ್ಥಿತಿ ಎದುರಿಸುವಂತಾಗಿದೆ. ಪ್ರತಿಪಕ್ಷ ನಾಯಕರ ವಿರುದ್ಧ ಟೀಕಾ ಪ್ರಹಾರ ನಡೆಸುವ ಭರದಲ್ಲಿ ನಾಲಿಗೆಯನ್ನೇ ಕತ್ತಿಯಂತೆ ಪ್ರಯೋಗಿಸುತ್ತಿದ್ದಾರೆ. ಸಂಘ ಪರಿವಾರದ ಬೆಂಬಲವಿರುವ ಕಾರಣಕ್ಕೆ ಈಶ್ವರಪ್ಪ ಹೇಳಿದ್ದು ತಪ್ಪು ಎಂದು ಹೇಳುವ ಧೈರ್ಯವನ್ನು ತೋರುತ್ತಿಲ್ಲ, ಕಳೆದ ಮೂರು ವರ್ಷಗಳಿಂದ ಈಶ್ವರಪ್ಪ ನೀಡಿರುವ ವಿವಾದಿತ ಹೇಳಿಕೆಗಳೇ ಬಿಜೆಪಿ ನಾಯಕರ ನಿದ್ದೆಗೆಡುವಂತೆ ಮಾಡಿದೆ ಎಂದರೆ ತಪ್ಪಾಗಲಾರದು.
ವಿವಾದಿತ ಹೇಳಿಕೆಗಳು: ಮುಸ್ಲಿಂ ಸಮುದಾಯದವರಿಗೆ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡದ ಕಾರಣ ಕುರಿತು ಈಶ್ವರಪ್ಪ ಹೇಳಿಕೆ ಸಾಕಷ್ಟು ವಿವಾದ ಸೃಷ್ಟಿಸಿತ್ತು. ಬಿಜೆಪಿ ಕಚೇರಿಯಲ್ಲಿ ಮುಸ್ಲಿಂ ಸಮುದಾಯದವರು ಬಂದು ಕಸ ಗುಡಿಸಿದರೆ ನಂತರ ಅವರಿಗೆ ವಿಧಾನಸಭಾ ಟಿಕೆಟ್ ನೀಡಲಾಗುತ್ತದೆ ಎಂದು 2017 ರ ಮಾರ್ಚ್‍ನಲ್ಲಿ ಪರಿಷತ್ ಪ್ರತಿಪಕ್ಷ ನಾಯಕರಾಗಿದ್ದ ವೇಳೆ ಈಶ್ವರಪ್ಪ ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದರು.
ಕಲಾಪದಲ್ಲಿ ಮುಸ್ಲಿಂ ಸಮುದಾಯಕ್ಕೆ ಎಷ್ಟು ಟಿಕೆಟ್ ನೀಡಿದ್ದೀರಿ ಎಂಬ ಕಾಂಗ್ರೆಸ್ ಪ್ರಶ್ನೆಗೆ ಈಶ್ವರಪ್ಪ ಈ ರೀತಿಯ ಉತ್ತರ ನೀಡಿದ್ದರು. ಅಲ್ಲದೆ ಹೇಳಿಕೆಯನ್ನು ಸದನದಲ್ಲಿ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದರು. ಇದಕ್ಕೆ ಕಾಂಗ್ರೆಸ್‍ನಿಂದ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಅಲ್ಪಸಂಖ್ಯಾತರನ್ನು ಬಿಜೆಪಿ ನಡೆಸಿಕೊಳ್ಳುವ ಪರಿ ಇದು ಎಂದು ಟೀಕಿಸಿತ್ತು. ಇದು ಬಿಜೆಪಿ ನಾಯಕರನ್ನು ಮುಜುಗರಕ್ಕೆ ಸಿಲುಕುವಂತೆ ಮಾಡಿತು.
ಇದನ್ನು ಸರಿಪಡಿಸಿಕೊಳ್ಳಲು ಬಿಜೆಪಿ ನಾಯಕರು ಹರಸಾಹಸ ಪಡಬೇಕಾಯಿತು. ಕಸ ಗುಡಿಸಲಿ ಎಂದರೆ ಪಕ್ಷದಲ್ಲಿ ಕೆಲಸ ಮಾಡಿದರೆ ನಂತರ ಅವಕಾಶ ಸಿಗುತ್ತದೆ ಎಂಬ ಅರ್ಥದಲ್ಲಿ ಹೇಳಿದ್ದಾರೆಂದು ಬಿಜೆಪಿ ನಾಯಕರು ಈಶ್ವರಪ್ಪ ಹೇಳಿಕೆಯನ್ನು ಸಮರ್ಥಿಸಿಕೊಳ್ಳಬೇಕಾಯಿತು.
ಕೆಂಪುಕೋಟೆ ವಿವಾದದ ಕಿಡಿ: ಇನ್ನು 100 – 200 ವರ್ಷದಲ್ಲಿ ದೆಹಲಿಯ ಕೆಂಪುಕೋಟೆ ಮೇಲೆ ಭಗವಾಧ್ವಜ ಹಾರಾಡುವ ಕಾಲ ಬರಲಿದೆ ಎಂದು ಈಶ್ವರಪ್ಪ ನೀಡಿರುವ ಹೇಳಿಕೆ ಈಗ ದೊಡ್ಡ ವಿವಾದವಾಗಿದೆ. ರಾಷ್ಟ್ರಧ್ವಜಕ್ಕೆ ಈಶ್ವರಪ್ಪ ಅಪಮಾನ ಮಾಡಿದ್ದಾರೆ. ದೇಶದ್ರೋಹದ ಕೇಸ್ ದಾಖಲಿಸಬೇಕು, ಸಂಪುಟದಿಂದ ಈಶ್ವರಪ್ಪರನ್ನು ವಜಾಗೊಳಿಸಬೇಕು ಎಂದು ಕಾಂಗ್ರೆಸ್ ಪಟ್ಟುಹಿಡಿದು ಉಭಯ ಸದನದಲ್ಲಿ ಹೋರಾಟ ನಡೆಸುತ್ತಿದೆ.
ಆದರೂ ಈಶ್ವರಪ್ಪ ಪರ ಬಿಜೆಪಿ ನಾಯಕರು ಬ್ಯಾಟಿಂಗ್ ಮಾಡುತ್ತಿದ್ದಾರೆ. ಈಶ್ವರಪ್ಪ ಹೇಳಿಕೆ ನೀಡಿರುವ ಅರ್ಥ ಬೇರೆ, ಅವರು ರಾಷ್ಟ್ರಧ್ವಜ ತೆರವು ಮಾಡುವ ಹೇಳಿಕೆ ನೀಡಿಲ್ಲ ಎಂದು ಸ್ಪಷ್ಟೀಕರಣ ನೀಡುತ್ತಿದ್ದಾರೆ.ರಾಷ್ಟ್ರಧ್ವಜದ ಕೆಳಗೆ ಭಗವಾಧ್ವ ಹಾರಿಸುವ ಹೇಳಿಕೆ ನೀಡಿದ್ದಾರೆ, ರಾಷ್ಟ್ರಧ್ವಜ ಕೆಳಗಿಳಿಸಿ ಅಲ್ಲ, ಕಾಶ್ಮೀರದಲ್ಲಿ ಎರಡು ಧ್ಚಜ ಹಾರಿಸುತ್ತಿದ್ದಾಗ ಸುಮ್ಮನಿದ್ದರು, ಲಾಲ್‍ಚೌಕ್‍ನಲ್ಲಿ ಇವರಿಗೆ ರಾಷ್ಟ್ರಧ್ವಜ ಹಾರಿಸಲಾಗಲಿಲ್ಲ ಇಂತವರಿಗೆ ಈಗ ರಾಷ್ಟ್ರಧ್ವಜದ ಬಗ್ಗೆ ಎಲ್ಲಿಲ್ಲದ ಪ್ರೀತಿ ಬಂದಿದೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿರುವ ಈಶ್ವರಪ್ಪನವರ ಬೆನ್ನಿಗೆ ಪಕ್ಷದ ನಾಯಕರು ನಿಲ್ಲುತ್ತಿದ್ದಾರೆ.

Articles You Might Like

Share This Article