ಯಾವುದೇ ಕಾರಣಕ್ಕೂ ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲ್ಲ : ಈಶ್ವರಪ್ಪ

Social Share

ಬೆಂಗಳೂರು,ಫೆ.17- ಪ್ರತಿ ಪಕ್ಷ ಕಾಂಗ್ರೆಸ್‍ನವರು ನನ್ನ ವಿರುದ್ಧ ಎಷ್ಟೇ ಹೋರಾಟ, ಪ್ರತಿಭಟನೆ ನಡೆಸಿದರೂ ನಾನು ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರಧ್ವಜಕ್ಕೆ ನಾನು ಎಲ್ಲಿಯೂ ಅಪಮಾನ ಮಾಡಿಲ್ಲ. ನಾನು ಅಪ್ಪಟ ದೇಶಭಕ್ತ. ತ್ರಿವರ್ಣ ಧ್ವಜದ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಕಾಂಗ್ರೆಸ್‍ನವರು ರಾಜೀನಾಮೆ ಕೊಡು ಎಂದು ಕೇಳಿದ ತಕ್ಷಣ ನಾನೇಕೆ ಕೊಡಲಿ ಎಂದು ಪ್ರಶ್ನಿಸಿದರು.
ನನ್ನ ವಿರುದ್ಧ ಕಾಂಗ್ರೆಸ್‍ನವರು ಪ್ರತಿಭಟನೆಯನ್ನಾದರೂ ಮಾಡಲಿ, ಇನ್ನೇನಾದರೂ ಮಾಡಲಿ. ಅದಕ್ಕೆ ನಾನು ಜಗ್ಗುವುದಿಲ್ಲ, ಬಗ್ಗುವುದಿಲ್ಲ. ಇವರಿಗೆ ಹೆದರಿ ನಾನು ರಾಜೀನಾಮೆ ಕೊಡಲು ಸಾಧ್ಯವಿಲ್ಲ. ಏನಾಗುತ್ತದೆಯೋ ಹಾಗೆಯೇ ಬಿಡಲಿ ಎಂದು ಸವಾಲು ಹಾಕಿದರು.
ವಾಸ್ತವವಾಗಿ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿರುವುದು ಕಾಂಗ್ರೆಸ್ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್. ಸದನದಲ್ಲಿ ತ್ರಿವರ್ಣ ಧ್ವಜ ಹಿಡಿದು ಪ್ರತಿಭಟನೆ ಮಾಡಿದ್ದು ಅವರ ಪಕ್ಷದ ಸದಸ್ಯರು. ಮೊದಲು ಶಿವಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ತಿರುಗೇಟು ನೀಡಿದರು.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಅದನ್ನು ವಿರೋಸಿ ಜೈಲಿಗೆ ಹೋಗಿ ಬಂದವರು ನಾವು. ನಮ್ಮ ರಕ್ತದ ಕಣಕಣದಲ್ಲೂ ದೇಶ ಭಕ್ತಿ ಇದೆ. ನಾನು ಎಲ್ಲಿಯೂ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿಲ್ಲ. ನನ್ನ ಹೇಳಿಕೆಗೆ ಈಗಲೂ ನಾನು ಬದ್ಧನಾಗಿದ್ದೇನೆ ಎಂದು ಈಶ್ವರಪ್ಪ ಸಮರ್ಥಿಸಿಕೊಂಡರು.
ಮಾಡಬಾರದ್ದನ್ನೆಲ್ಲಾ ಮಾಡಿ ಜೈಲಿಗೆ ಹೋಗಿ ಬೇಲ್‍ಮೇಲೆ ಈಚಿಗೆ ಬಂದವರು ನನ್ನ ಬಗ್ಗೆ ಮಾತನಾಡುತ್ತಿದ್ದಾರೆ. ನಾನೇನು ಭ್ರಷ್ಟಾಚಾರ ಮಾಡಿಲ್ಲ. ಕಂಡ ಕಂಡ ಕಡೆ ಲೂಟಿ ಹೊಡೆದಿಲ್ಲ. ನಾನೇಕೆ ರಾಜೀನಾಮೆ ಕೊಡಲಿ ಎಂದು ಹರಿಹಾಯ್ದರು.
ಕಾಂಗ್ರೆಸ್‍ನವರಿಗೆ ಮಾಡಲು ಕೆಲಸವಿಲ್ಲ. ಹೀಗಾಗಿ ನಮ್ಮ ಸರ್ಕಾರದ ವಿರುದ್ಧ ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಹೆದರಿ ನಾನು ಸುಮ್ಮನೆ ಕೂರುವ ವ್ಯಕ್ತಿಯಲ್ಲ. ನಾನೂ ಕೂಡ ಎಲ್ಲದಕ್ಕೂ ಸಿದ್ದನಿದ್ದೇನೆ ಎಂದು ಈಶ್ವರಪ್ಪ ಗುಡಿಗಿದರು.
ರಾಷ್ಟ್ರಧ್ವಜನದ ಬಗ್ಗೆ ಮಾತನಾಡುವ ಕಾಂಗ್ರೆಸ್ ನಾಯಕರು ಹಿಜಾಬ್ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಶಾಲಾ- ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿಕೊಂಡೇ ಹೋಗಬೇಕೆಂದು ಕುಮ್ಮಕ್ಕು ನೀಡಿದವರು ಯಾರು? ಇದರ ಹಿಂದೆ ಯಾರ ಕೈವಾಡವಿದೆ ಎಂದು ಪ್ರಶ್ನಿಸಿದರು.
ವಿಷಯವನ್ನು ಮರೆಮಾಚಲು ಪ್ರತಿಪಕ್ಷದವರಿಗೆ ಒಂದು ಯಾವುದಾದರು ಒಂದು ಕುಂಟು ನೆಪ ಬೇಕಾಗಿತ್ತು. ಹೀಗಾಗಿ ನನ್ನ ವಿರುದ್ಧ ಪ್ರತಿಭಟನೆ ನಡೆಸಿ ಕಲಾಪವನ್ನು ಹಾಳು ಮಾಡಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್‍ನ ಈ ನಡವಳಿಕೆಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

Articles You Might Like

Share This Article