ಎಂಇಎಸ್‍ಗೆ ಆದ್ಯತೆ ನೀಡುವುದು ಅನಗತ್ಯ : ಈಶ್ವರಪ್ಪ

ಗದಗ,ಡಿ.19-ಎಂಇಎಸ್ ಮತ್ತು ಶಿವಸೇನೆ ಸಂಘಟನೆಗಳು ಕರ್ನಾಟಕದಲ್ಲಿ ಅಷ್ಟೇನೂ ಪ್ರಬಲವಾಗಿಲ್ಲ. ಅವುಗಳಿಗೆ ಹೆಚ್ಚಿನ ಮಹತ್ವ ನೀಡುವ ಅಗತ್ಯವೂ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಇಎಸ್ ಎಲ್ಲಿದೆ? ರಾಷ್ಟ್ರದ್ರೋಹಿ ಕೆಲಸ ಮಾಡುವ ಎಸ್‍ಡಿಪಿಐನಂತಹ ಸಂಘಟನೆಗಳ ಬಗ್ಗೆ ನಿಷೇಧದ ಮಾತು ಕೇಳಿಬಂದರೆ ಸಮಂಜಸ.

ಅಷ್ಟೇನೂ ಪ್ರಬಲವಾಗಿಲ್ಲದ, ಶಕ್ತಿಯೇ ಇಲ್ಲದ ಎಂಇಎಸ್ ಬಗ್ಗೆ ನಾವು ಅನಗತ್ಯವಾಗಿ ಏಕೆ ಮಹತ್ವ ನೀಡಬೇಕು ಎಂದು ಪ್ರಶ್ನಿಸಿದರು. ಸಂಗೊಳ್ಳಿ ರಾಯಣ್ಣ ಪ್ರತಿಮೆ ವಿರೂಪಗೊಳಿಸಿದ್ದಕ್ಕೆ ಸಂಬಂಧಪಟ್ಟಂತೆ ಈಗಾಗಲೇ 25ರಿಂದ 30 ಮಂದಿಯನ್ನು ಬಂಧಿಸಲಾಗಿದೆ.

ಈ ಮೊದಲು ಇದೇ ರೀತಿ ಪುಂಡಾಟಿಕೆ ಮಾಡಿದ್ದವರನ್ನು ಒದ್ದು ಒಳಗೆ ಹಾಕಿದ್ದೆವು. ಈಗಲೂ ಒಂದಷ್ಟು ಮಂದಿಯನ್ನು ಬಂಧಿಸಿದ್ದೇವೆ. ಮುಂದೆ ಇದೇ ರೀತಿ ಪುನಾರವರ್ತನೆಯಾದರೆ ಕಾನೂನು ಪ್ರಕಾರ ಸೂಕ್ತ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಾವು ಒಂದು ಪಕ್ಷದ ಅಧ್ಯಕ್ಷ ಎಂಬ ಪ್ರಜ್ಞೆಯನ್ನು ಮೈಮೇಲಿಟ್ಟುಕೊಂಡು ಮಾತನಾಡಬೇಕು. ಎಂಇಎಸ್‍ನವರು ನಮ್ಮವರು ಎಂದು ಹೇಳಿಕೆ ನೀಡಿದರೆ ಏನರ್ಥ?, ಗೂಂಡಾ ವರ್ತನೆ ಮಾಡುವ ಕಾರಣಕ್ಕೆ ಎಂಇಎಸ್‍ನವರನ್ನು ಡಿ.ಕೆ.ಶಿವಕುಮಾರ್ ನಮ್ಮವರು ಎಂದೇ ಹೇಳಿದ್ದಾರೆಯೇ? ಗೂಂಡಾಗಿರಿ ಮಾಡುವವರೆಲ್ಲರೂ ಅವರ ಕಡೆಯವರೇ. ಅವರು ಕೂಡ ಗೂಂಡಾಗಿರಿ ಮಾಡುತ್ತಾರೆ ಎಂದು ಲೇವಡಿ ಮಾಡಿದರು.

ನಮ್ಮ ಸರ್ಕಾರ ನಾಡುನುಡಿ, ಜಲ, ನೆಲದ ವಿಷಯದಲ್ಲಿ ಬದ್ದತೆ ಹೊಂದಿದೆ. ಇದಕ್ಕೆ ಧಕ್ಕೆ ತರುವ ಯಾರೇ ಆಗಿದ್ದರೂ ಬುದ್ದಿ ಕಲಿಸುತ್ತೇವೆ. ಯಾವುದೇ ರಾಜೀ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.