ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ ದೇವೇಗೌಡರು-ಮಾಧುಸ್ವಾಮಿ ಭೇಟಿ

Social Share

ತುಮಕೂರು, ನ.17- ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಮಂತ್ರಿ ಹೆಚ್.ಡಿ. ದೇವೇಗೌಡ ಅವರನ್ನು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಮತ್ತು ಮಾಜಿ ಸಚಿವ ಸೊಗಡು ಶಿವಣ್ಣ ಭೇಟಿ ಮಾಡಿ ಉಭಯ ಕುಶ ಲೋಪರಿ ವಿಚಾರಿಸಿದ್ದಾರೆ.

ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಮಗಳ ಮದುವೆಗೆ
ದೇವೇಗೌಡರಿಗೆ ಆಹ್ವಾನ ನೀಡಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಸೋಲಿಗೆ ಪ್ರಮುಖ ಕಾರಣರಾಗಿದ್ದ ಮಾಧುಸ್ವಾಮಿ ಅವರು ಮಗಳ ಮದುವೆ ಆಮಂತ್ರಣ ನೀಡುವ ಮೂಲಕ ಹಳೇ ವೈಮನಸ್ಸನ್ನು ಮರೆಯಲು ಮುಂದಾಗಿರುವುದು ಜಿಲ್ಲೆಯ ರಾಜಕಾರಣದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ಇತ್ತಿಚೆಗೆ ಬಿಜೆಪಿ ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಅವರು ಸಿಎಲ್ಪಿ ನಾಯಕ ಸಿದ್ದರಾಮಯ್ಯ ಆಪ್ತ, ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಸಂಸದ ಜಿ.ಎಸ್.ಬಸವರಾಜು ಮತ್ತು ಮಾಧುಸ್ವಾಮಿ ನಡುವಿನ ಸಂಬಂಧ ಹಳಸಿದ್ದು ದೇವೇಗೌಡರೊಂದಿಗಿನ ಸ್ನೇಹ ಸಂಬಂಧಕ್ಕೆ ಕೈ ಚಾಚಿರುವುದು ಈಗ ಚರ್ಚೆಗೆ ಕಾರಣವಾಗಿದೆ.

ಜಿಲ್ಲಾ ಬಿಜೆಪಿಯಲ್ಲಿ ಜಿಎಸ್ಬಿ ಬಣ ಕಾನೂನು ಸಂಸದೀಯ ಸಚಿವ ಮಾಧುಸ್ವಾಮಿಗೆ ವಿರುದ್ಧವಾಗಿದ್ದು, ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಹುಟ್ಟುಹಬ್ಬದಲ್ಲಿ ಭಾಗವಹಿಸಿ ಬೆಂಬಲ ವ್ಯಕ್ತಪಡಿಸುವ ಮೂಲಕ ಚಿಕ್ಕನಾಯಕನ ಹಳ್ಳಿಯಲ್ಲಿ ಪರ್ಯಾಯ ಅಭ್ಯರ್ಥಿ ಯನ್ನು ಹುಟ್ಟುಹಾಕುವ ಮೂಲಕ ರಾಜಕೀಯ ಮೇಲಾಟಕ್ಕೆ ಕಾರಣವಾಗಿದ್ದು ಗುಟ್ಟಾಗಿಲ್ಲ.

ಈಗ ಸಂಸದ ಜಿಎಸ್ಬಿ ಹಾಗೂ ಮಾಜಿ ಶಾಸಕ ಕೆಎನ್ಆರ್ ಭೇಟಿ ಮಾಡಿರುವುದು ಕಾಂಗ್ರೆಸ್ನತ್ತ ಜಿಎಸ್ ಬಿ ಹಾಗೂ ಶಾಸಕ ಜ್ಯೋತಿಗಣೇಶ್ ಬರುತ್ತಾರೆಂಬ ಊಹಾಪೊೀಹಗಳಿಗೆ ಮತ್ತಷ್ಟು ಹುರುಪು ಕೊಟ್ಟಂತಾಗಿದೆ.
ಜಿಲ್ಲಾ ಬಿಜೆಪಿಯಲ್ಲಿ ಉಂಟಾಗಿರುವ ಎರಡು ಬಣಗಳಲ್ಲಿ ಸಚಿವ ಮಾಧುಸ್ವಾಮಿ ಅವರಿಗೆ ಕಟ್ಟಾ ಬಿಜೆಪಿಗರು ಬೆಂಬಲ ನೀಡುತ್ತಿದ್ದು, ಪಕ್ಷದೊಳಗಿನ ಆಂತರಿಕ ಕಚ್ಚಾಟ ಚುನಾವಣೆ ಸಂದರ್ಭದಲ್ಲಿ ಭುಗಿಲೆಳುವ ಸಾಧ್ಯತೆ ದಟ್ಟವಾಗಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

#MinisterMadhuswami, #Meet, #HDDevegowda, #SogaduShivanna,

Articles You Might Like

Share This Article