ಕಾಂಗ್ರೆಸ್‍ನತ್ತ ಸಚಿವ ಮಾಧುಸ್ವಾಮಿ ಚಿತ್ತ

Social Share

ಬೆಂಗಳೂರು,ಆ.20- ಸರ್ಕಾರ ನಡೆಯುತ್ತಿಲ್ಲ ತಳ್ಳುತ್ತಿದ್ದೇವೆ ಎಂದು ಹೇಳಿಕೆ ನೀಡಿ ವಿವಾದದ ಅಲೆ ಎಬ್ಬಿಸಿರುವ ಸಚಿವ ಜೆ.ಸಿ.ಮಾಧುಸ್ವಾಮಿ ಕಾಂಗ್ರೆಸ್‍ನತ್ತ ಮುಖ ಮಾಡಿದ್ದಾರೆಯೇ ಎಂಬ ಚರ್ಚೆಗಳು ಹರಿದಾಡಲಾರಂಭಿಸಿವೆ. ಸಾಮಾಜಿಕ ಕಾರ್ಯಕರ್ತರೊಬ್ಬರ ಜೊತೆ ಮಾತನಾಡುವ ಸಂದರ್ಭದಲ್ಲಿ ಮಾಧುಸ್ವಾಮಿ ನೀಡಿರುವ ಹೇಳಿಕೆಗಳು ಬಿಜೆಪಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಸಂಪುಟದಲ್ಲಿ ಬಹಳಷ್ಟು ಸಚಿವರು ಮಾಧುಸ್ವಾಮಿ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವರ ಹೇಳಿಕೆಯಲ್ಲಿ ವಿಪರೀತ ಅರ್ಥ ಹುಡುಕುವುದು ಬೇಡ ಎಂದು ಸಮರ್ಥನೆ ನೀಡಿದ್ದರು.
ಇದೆಲ್ಲದರ ಬಳಿಕವೂ ಮಾಧುಸ್ವಾಮಿ ನನ್ನ ಹೇಳಿಕೆ ನಿಜ ಎಂದು ಸಡ್ಡು ಹೊಡೆದಿದ್ದಲ್ಲದೆ ಸಂಪುಟದಿಂದ ತೆಗೆದು ಹಾಕಿ ಎಂಬರ್ಥದಲ್ಲಿ ಸವಾಲು ಎಸೆದಿದ್ದರು ಎನ್ನಲಾಗಿದೆ.

ತುಮಕೂರಿನಲ್ಲಿ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಹೇಳಿಕೆ ವಿವಾದಕ್ಕೆ ಹೊಸ ಸ್ವರೂಪ ನೀಡಿದೆ. ತಿಪಟೂರಿನ ಕಾರ್ಯಕ್ರಮವೊಂದರಲ್ಲಿ ಜೆ.ಸಿ.ಮಾಧುಸ್ವಾಮಿ ಅವರು ನನ್ನೊಂದಿಗೆ ಮಾತುಕತೆ ನಡೆಸುವಾಗ ಕಾಂಗ್ರೆಸ್ ಸೇರುವ ಇಂಗಿತ ವ್ಯಕ್ತಪಡಿಸಿದರು ಎನ್ನಲಾಗಿದೆ.

ಇದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಮಾಧುಸ್ವಾಮಿ ಅವರು ಈ ಮೊದಲು ಜನತಾ ಪರಿವಾರ, ಜನತಾದಳ ಮತ್ತು ಸಂಯುಕ್ತ ಜನತಾದಳದಲ್ಲಿ ಕೆಲಸ ಮಾಡಿದ್ದರು. ಆನಂತರ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಸೇರಿದ ಅವರು ಸಂಪುಟದಲ್ಲಿ ಪ್ರಭಾವಿ ಸಚಿವರಾಗಿದ್ದಾರೆ. ಶಾಸನ ಸಭೆಗಳಲ್ಲಿ ಯಾವುದೇ ಕಾಯ್ದೆಯನ್ನು ವಿಶ್ಲೇಷಣೆ ಮಾಡಿ ಅಂಗೀಕಾರ ಪಡೆಯಬೇಕಾದರೆ ಮಾಧುಸ್ವಾಮಿ ಅವರ ವಾಕ್ ಚಾತುರ್ಯ ನೆರವಿಗೆ ಬರುತ್ತದೆ.

ವಿವಾದದ ವಿಷಯಗಳಲ್ಲಿ ಮಾಧುಸ್ವಾಮಿ ಅವರು ಮಧ್ಯಪ್ರವೇಶ ಮಾಡಿದರೆಂದರೆ ಎದುರಾಳಿಗಳು ತಣ್ಣಗಾಗಬೇಕು. ಆ ರೀತಿಯ ಪ್ರಕರ ವಾಗ್ಬಾಣಗಳನ್ನು ಕಾನೂನಾತ್ಮಕವಾಗಿ ಮತ್ತು ರಾಜಕೀಯವಾಗಿ ಮಾಧುಸ್ವಾಮಿ ಬಳಕೆ ಮಾಡುತ್ತಾರೆ.

ಒಂದಿಷ್ಟು ವಿವಾದಾತ್ಮಕ ಹೇಳಿಕೆಗಳಿಂದ ಅವರು ಪ್ರತಿಭಟನೆಗಳನ್ನೂ ಎದುರಿಸಿದ್ದಾರೆ. ರಾಜ್ಯ ಕಾಂಗ್ರೆಸ್‍ನಲ್ಲಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರೊಂದಿಗೆ ಒಳ್ಳೆಯ ಒಡನಾಟವಿದೆ. ಜಿಲ್ಲಾ ಕಾಂಗ್ರೆಸ್‍ಮಟ್ಟಿಗೂ ಮಾಧುಸ್ವಾಮಿ ಪ್ರತಿನಿಧಿಸುವ ಚಿಕ್ಕನಾಯಕನಹಳ್ಳಿ ಕ್ಷೇತ್ರ ಕಾಂಗ್ರೆಸ್‍ಗೆ ಹಲವು ದಶಕಗಳಿಂದ ನಿಲುಕದಾಗಿದೆ.

ಜೆಡಿಎಸ್ ಸಿ.ಬಿ.ಸುರೇಶ್ ಬಾಬು ಅವರ ಪ್ರಬಲ ಕೋಟೆಯನ್ನು ಬೇಸಿ ಮಾಧುಸ್ವಾಮಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‍ಗೆ ಚಿಕ್ಕನಾಯಕನಹಳ್ಳಿಯಲ್ಲಿ ಅಭ್ಯರ್ಥಿಗಳ ಕೊರತೆ ಕಾಡುತ್ತಿದೆ. ಈ ಹಂತದಲ್ಲಿ ಮಾಧುಸ್ವಾಮಿ ಪಕ್ಷಕ್ಕೆ ಬಂದರೆ ಜಿಲ್ಲೆಗಷ್ಟೆ ಅಲ್ಲ ರಾಜ್ಯಮಟ್ಟದಲ್ಲೂ ದೊಡ್ಡ ಶಕ್ತಿ ಬಂದಂತಾಗುತ್ತದೆ ಎಂದು ವಿಶ್ಲೇಷಿಸಿದ್ದಾರೆ. ಆದರೆ ಮಾಧುಸ್ವಾಮಿ ಕಾಂಗ್ರೆಸ್‍ನತ್ತ ಬರಲು ಸಂಪೂರ್ಣ ಒಲವು ಹೊಂದಿದ್ದಾರೆಯೇ ಇಲ್ಲವೇ ಎಂಬುದು ಪ್ರಶ್ನಾರ್ಥಕವಾಗಿದೆ.

Articles You Might Like

Share This Article