ತುಮಕೂರು,ಜ.6- ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ದಕ್ಷಿಣ ಕೊರಿಯಾದ ಸರ್ವಾಕಾರಿ ಕಿಂಮ್‍ಜಾಂಗ್‍ಉನ್ ಇದ್ದಂತೆ. ನಮ್ಮ ಜಿಲ್ಲೆಯನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಒಂದು ಸ್ಥಾನವೂ ಬರುವುದಿಲ್ಲ…. ಹೀಗೆಂದು ಬಿಜೆಪಿ ಸಂಸದ ಜಿ.ಎಸ್.ಬಸವರಾಜು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರ ನಡುವಿನ ಮುಸುಕಿನ ಗುದ್ದಾಟ ಬೆಳಕಿಗೆ ಬಂದಿದೆ. ತುಮಕೂರಿನಲ್ಲಿಂದು ನಗರಾಭಿವೃದ್ಧಿ ಇಲಾಖೆ ವತಿಯಿಂದ ಮಹಾನಗರ ಪಾಲಿಕೆ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಆಡಳಿತ ಕಚೇರಿ ಕಟ್ಟಡ ಉದ್ಘಾಟನೆ, ಸ್ಮಾರ್ಟ್ ಸಿಟಿ ಯೋಜನೆಯಡಿ ಕೊಳಗೇರಿ ನಿವಾಸಿಗಳಿಗೆ ಪುನರ್ ವಸತಿ ಕಾರ್ಯಕ್ರಮ, ಎಂಪ್ರೆಸ್ ಶಾಲೆಯ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಸಭಾಂಗಣ,
ಪ್ರಯೋಗಾಲ ಮತ್ತು ಗ್ರಂಥಾಲಯ ಕಟ್ಟಡಗಳ ಉದ್ಘಾಟನಾ ಸಮಾರಂಭದಲ್ಲಿ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಸಂಸದ ಜಿ.ಎಸ್.ಬಸವರಾಜು, ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ, ಶಾಸಕ ಜ್ಯೋತಿ ಗಣೇಶ್, ಮೇಯರ್ ಕೃಷ್ಣಪ್ಪ, ನಗರಾಭಿವೃದ್ಧಿ ಪ್ರಾಕಾರದ ಅಧ್ಯಕ್ಷ ಬಾವಿಕಟ್ಟೆ ನಾಗೇಶ್, ಜಿಲ್ಲಾಕಾರಿ ವೈ.ಎಸ್.ಪಾಟೀಲ್ ಮತ್ತಿತರರು ಭಾಗವಹಿಸಿದ್ದರು.
ವೇದಿಕೆಯಲ್ಲಿ ಸಚಿವ ಬೈರತಿ ಬಸವರಾಜು ಮತ್ತು ಸಂಸದರ ನಡುವೆ ಗುಸುಗುಸು ಮಾತುಕತೆ ಆಗಿರುವುದು ಮಾಧ್ಯಮಗಳ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸಂಸದರು ಜಿಲ್ಲಾ ಉಸ್ತುವಾರಿ ಸಚಿವ ಹೆಂಗೆ ಗೊತ್ತಾ ದಕ್ಷಿಣ ಕೊರೊಯಾದ ಕಿಂಗ್‍ಪಿನ್ ಇದ್ದಾನಲ್ಲಾ ಆ ರೀತಿ. ಕೆಟ್ಟ…… ಮಗ ಎಂದು ಹೇಳಲಾರಂಭಿಸಿದಾಗ, ಮಾಧ್ಯಮಗಳ ಮೈಕ್‍ಗಳು ನಮ್ಮ ಮುಂದಿವೆ. ಆ ಮೇಲೆ ಮಾತನಾಡೋಣ ಸುಮ್ಮನಿರಿ ಎಂದು ಸಚಿವ ಬೈರತಿ ಬಸವರಾಜು ತಡೆಯಲೆತ್ನಿಸಿದ್ದಾರೆ.
ಆದರೂ, ಸಂಸದರು ಮಾತು ಮುಂದುವರೆಸಿದ್ದು, ನಮ್ಮ ಜಿಲ್ಲೆಯನ್ನು ಹಾಳುಮಾಡಿಬಿಟ್ಟಿದ್ದಾನೆ. ಒಂದು ಸೀಟು ಬರಲ್ಲ. ಮಾತೆತ್ತಿದ್ದರೆ ಹೊಡಿ, ಬಡಿ, ಕಡಿ ಅಂತಾನೆ. ಅವನ್ಯಾರೋ ಇಂಜನಿಯರ್‍ಗೆ ಹೆಂಡತಿ ಸೀರೆ ಹೊಗೆಯೋಕೆ ಲಾಯಕ್ಕು ಎಂದು ಬೈಯ್ತಾನೆ. ಒಂದು ಹ್ಯಾಂಡ್ ಬಿಲ್ ಕೂಡ ಪ್ರಿಂಟ್ ಮಾಡಿಸಲ್ಲ. ಮೊನ್ನೆ ಸಾವಿರ ಕೋಟಿ ಡಿಕ್ಲೇರ್ ಮಾಡಿಕೊಂಡು ಬಂದಿದ್ದಾನೆ. ನಮಗ್ಯಾರಿಗೂ ಇನ್ವಟೇಷನ್ನೂ ಇರೊಲ್ಲ.
ಕರೆಯುವುದೂ ಇಲ್ಲ. ನಿಮ್ಮ ಇಲಾಖೆಗೆ ಬಂದು ಕೇಳಿದರೆ ಒಂದು ಕೆಲಸವನ್ನೂ ಮಾಡಿಕೊಡಬೇಡಿ ಎಂದು ಮಾಧುಸ್ವಾಮಿ ಅವರ ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ಜಿಲ್ಲೆಯಲ್ಲಿ ಬಿಜೆಪಿ ನಾಯಕರ ನಡುವೆಯೇ ಮುಸುಕಿನ ಗುದ್ದಾಟ ನಡೆದಿರುವುದು ಮತ್ತೊಮ್ಮೆ ಬಹಿರಂಗವಾಗಿದೆ. ಇದಕ್ಕೂ ಮುನ್ನ ಮಾಧುಸ್ವಾಮಿ ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂಬಂಧಪಟ್ಟಂತೆ ಅಕಾರಿಗಳ ಜತೆ ಸಿಡಿಮಿಡಿಗೊಂಡಿರುವ ವಿಡಿಯೋ ಕೂಡ ವೈರಲ್ ಆಗಿದೆ.
