ಕಲಬುರಗಿ,ಜ.26-ನನಗೆ ನಾಡಿನ ಎಲ್ಲ ಮಠಾಧೀಶರು ಮತ್ತು ಧಾರ್ಮಿಕ ಕೇಂದ್ರಗಳ ಬಗ್ಗೆ ಅಪಾರವಾದ ಗೌರವವಿದೆ. ಯಾವುದೇ ಸಂದರ್ಭದಲ್ಲೂ ನಾವು ಯಾರ ಬಗ್ಗೆಯೂ ಅಗೌರವವಾಗಿ ನಡೆದುಕೊಂಡಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊದಲಿನಿಂದಲೂ ನಾನು ಮಠಾೀಶರು ಮತ್ತು ಮಠಗಳ ಬಗ್ಗೆ ಅಪಾರವಾದ ಗೌರವವನ್ನು ಇಟ್ಟುಕೊಂಡಿದ್ದೇನೆ. ಎಂದಿಗೂ ಯಾರ ಬಗ್ಗೆಯೂ ಲಘುವಾಗಿ ಮಾತನಾಡಿಲ್ಲ. ಪಂಚಮಸಾಲಿ ಮಾತ್ರವಲ್ಲದೆ ಎಲ್ಲ ಮಠಗಳ ಬಗ್ಗೆಯೂ ಅದೇ ಗೌರವವಿದೆ ಎಂದು ಪುನರುಚ್ಚರಿಸಿದರು.
ಪಂಚಮಸಾಲಿ ಪೀಠದ ಬಗ್ಗೆಯೂ ನನಗೆ ಅಪಾರ ಭಕ್ತಿ, ಗೌರವವಿದೆ ಕೂಡಲಸಂಗಮ ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿಯವರು ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಅವರ ಬಗ್ಗೆ ನಾನು ಎಂಥ ಸಂದರ್ಭದಲ್ಲೂ ಕೂಡ ಅಗೌರವವಾಗಿ ನಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಸಂಪುಟ ವಿಸ್ತರಣೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಪಕ್ಷದ ವರಿಷ್ಠರು ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಕ್ತ ಸಂದರ್ಭದಲ್ಲಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಅವರಿಗೆ ಯಾವಾಗ ಏನು ಮಾಡಬೇಕು ಎಂಬುದು ಗೊತ್ತಿದೆ ಎಂದು ಹೇಳಿದರು.
ಸಂಪುಟ ವಿಸ್ತರಣೆ ಬಗ್ಗೆ ನಾನು ಮಾತನಾಡುವಷ್ಟು ದೊಡ್ಡವನಲ್ಲ. ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ. ಪಕ್ಷ ಏನು ಹೇಳುತ್ತದೆಯೋ ಅದನ್ನು ಪಾಲಿಸಿಕೊಂಡು ಬಂದಿದ್ದೇನೆ. ಮುಂದೆಯೂ ಕೂಡ ಪಕ್ಷದ ತೀರ್ಮಾನಕ್ಕೆ ಬದ್ದನಾಗಿರುತ್ತೇನೆ. ಪಕ್ಷದ ತೀರ್ಮಾನವನ್ನು ಯಾವುದೇ ಸಂದರ್ಭದಲ್ಲೂ ಪ್ರಶ್ನೆ ಮಾಡುವುದಿಲ್ಲ ಎಂದರು.
ಸಂಪುಟದಲ್ಲಿ ಎಲ್ಲರಿಗೂ ಸಮಾಜನ ಅವಕಾಶ ಸಿಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಕೆಲವು ಕಾರಣಗಳಿಂದ ಬೇರೆ ಜಿಲ್ಲೆಗಳಿಗೆ ಅವಕಾಶ ಸಿಗದಿರಬಹುದು. ಯಾರಿಗೆ ಯಾವ ಜಿಲ್ಲೆಗಳು ಕೈ ತಪ್ಪಿ ಹೋಗಿವೆಯೋ ಅಂತಹ ಜಿಲ್ಲೆಗಳಿಗೆ ಆದ್ಯತೆ ನೀಡಬೇಕೆಂದು ನಾನು ಮುಖ್ಯಮಂತ್ರಿಗೆ ಮನವಿ ಮಾಡುತ್ತೇನೆ ಎಂದು ಹೇಳಿದರು.
ಕೆಲವು ಸಚಿವರು ಅಸಮಾಧಾನಗೊಂಡಿರುವ ಬಗ್ಗೆ ಮುಖ್ಯಮಂತ್ರಿಯವರು ಕರೆದು ಮಾತನಾಡಿ ಬಗೆಹರಿಸಿಕೊಳ್ಳುತ್ತಾರೆ. ರಾಜಕಾರಣದಲ್ಲಿ ಇವೆಲ್ಲವೂ ಸರ್ವೆ ಸಾಮಾನ್ಯ. ನಮ್ಮಲ್ಲಿ ಅಭಿಪ್ರಾಯ ಬೇಧ ಇರಬಹುದೇ ಹೊರತು ಭಿನ್ನಾಭಿಪ್ರಾಯವಿಲ್ಲ. ಸಚಿವ ಸ್ಥಾನ ಸಿಗದಿದ್ದಾಗ ಇಂಥ ಬೆಳವಣಿಗೆಗಳು ನಡೆಯುವುದು ಸರ್ವೆ ಸಾಮಾನ್ಯ ಎಂದು ಅಭಿಪ್ರಾಯಪಟ್ಟರು. ಬಿಜೆಪಿಯಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯವಿಲ್ಲ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಪ್ರತಿಯೊಬ್ಬರು ಸ್ವಾವಲಂಬಿಯಾಗಲು ಉತ್ತಮ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. 2023ರ ಚುನಾವಣೆಯಲ್ಲಿ ಪಕ್ಷವನ್ನು ಅಕಾರಕ್ಕೆ ತರುವುದೇ ನಮ್ಮ ಮುಂದಿರುವ ಗುರಿ ಎಂದರು.
ನನಗೆ ಪುನಃ ಕಲಬುರಗಿ ಜಿಲ್ಲಾ ಉಸ್ತುವಾರಿ ಸ್ಥಾನ ನೀಡಿರುವುದಕ್ಕೆ ತುಂಬ ಸಂತೋಷವಾಗಿದೆ. ನನಗೆ ಮೊದಲಿನಿಂದಲೂ ಈ ಜಿಲ್ಲೆ ಎಂದರೆ ಎಲ್ಲಿಲ್ಲದ ಪ್ರೀತಿ. ನಾನು ಇಂಥದೇ ಜಿಲ್ಲೆ ಬೇಕು ಎಂದು ಕೇಳಿರಲಿಲ್ಲ. ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ ಅವರು ಕಲಬುರಗಿ ಉಸ್ತುವಾರಿ ನೀಡಿದ್ದರು.
ಒಂದು ಮತ್ತು 2ನೇ ಕೋವಿಡ್ ಸಂದರ್ಭದಲ್ಲಿ ಜಿಲ್ಲಾಡಳಿತ, ಜನಪ್ರತಿನಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಕೋವಿಡ್ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದ್ದಾರೆ. ನನ್ನ ಮೇಲೆ ನಂಬಿಕೆ ಇಟ್ಟು ಮತ್ತೆ ಜಿಲ್ಲಾ ಉಸ್ತುವಾರಿಯನ್ನು ನೀಡಿದ್ದಾರೆ. ಮುಖ್ಯಮಂತ್ರಿಗಳ ವಿಶ್ವಾಸಕ್ಕೆ ಚ್ಯುತಿಯಾಗದಂತೆ ಕೆಲಸ ಮಾಡುತ್ತೇನೆ ಎಂದರು.
