ಮಂಡ್ಯ : ಮಂಡ್ಯ ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯಲ್ಲಿ ಈಗಾಗಲೇ ಗುರುತಿಸಲ್ಪಟ್ಟಿರುವ 86 ಜನ ಜೀತ ವಿಮುಕ್ತರಿಗೆ ಸರ್ಕಾರದ ಮಹತ್ವದ 13 ವಿವಿಧ ಗುರುತಿನ ಚೀಟಿ ಅಥವಾ ದಾಖಲೆಗಳನ್ನು ಒದಗಿಸುವ ಮೂಲಕ ಸಮಾಜದ ಮುಖ್ಯ ವಾಹಿನಿಗೆ ಕರೆತರಲಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅವರು ತಿಳಿಸಿದರು. ಅವರು ಇಂದು ಮದ್ದೂರು ತಾಲ್ಲೂಕಿನಲ್ಲಿ ಜೀತ ವಿಮುಕ್ತ ಕುಟುಂಬದವರಿಗೆ ಗುರುತಿನ ಚೀಟಿ ಹಾಗೂ ಆರೋಗ್ಯ ತಪಾಸಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಜೀತ ಪದ್ಧತಿ ಕಾನೂನು ಬಾಹಿರ ಎಂದು ತಿಳಿದಿದ್ದರೂ ಸಹ ಮುಗ್ದ ಜನರು ಜೀತ ಪದ್ಧತಿಗೆ ಬಲಿಯಾಗುತ್ತಾರೆ. ಜೀತ ಪದ್ಧತಿಯನ್ನು ಸಂಪೂರ್ಣವಾಗಿ ಹೋಗಲಾಡಿಸಲು ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ ಅವುಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಜೀತ ಪದ್ಧತಿ ಕಾನೂನು ಬಾಹಿರ ಎಂದು ತಿಳಿದಿದ್ದರೂ ಕೆಲವರು ಬಡತನದಿಂದ ಜೀತದಾಳಾಗಿ ಕೆಲಸ ಮಾಡುತ್ತಾರೆ. ಜಿಲ್ಲೆಯಲ್ಲಿ ಒಟ್ಟು 86 ಅವರಲ್ಲಿ ಹೆಣ್ಣು-04. ಗಂಡು-82 ಜನರನ್ನು ಜೀತ ವಿಮುಕ್ತರನ್ನಾಗಿ ಮಾಡಿ ಸಮಾಜದ ಮುಖ್ಯವಾಹಿನಿಗೆ ತರಲು ಜೀತವಿಮುಕ್ತರು ಹಾಗೂ ಅವರ ಅವಲಂಬಿತರ ಬಳಿ ಸರ್ಕಾರಿ ದಾಖಲೆಗಳಿಲ್ಲದಿರುವುದು ತಿಳಿದುಬಂತು. ಎಲ್ಲಾ ಇಲಾಖೆಗಳ ಸೌಲಭ್ಯ ಪಡೆಯಲು ಕೆಲವು ದಾಖಲೆಗಳು ಅಗತ್ಯವಾಗಿ ಬೇಕಿರುವುದರಿಂದ. ಮೊದಲಿಗೆ ಜಿಲ್ಲೆಯ ಎಲ್ಲಾ ಜೀತವಿಮುಕ್ತರಿಗೂ ಸರ್ಕಾರದ ’13’ ದಾಖಲೆಗಳನ್ನು ನೀಡಲಾಗುತ್ತಿದೆ ಇದರೊಂದಿಗೆ ಅವರ ಆರೋಗ್ಯ ತಪಾಸಣೆ ಸಹ ನಡೆಸಲಾಗುತ್ತಿದೆ ಎಂದರು.
ಆಧಾರ್ ಕಾಡ್೯ ಸೇರಿದಂತೆ ವಿವಿಧ ಗುರುತಿನ ಚೀಟಿ ನೀಡಲಾಗುತ್ತಿದ್ದು,ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಪಡೆದು ಇನ್ನೂ ಮುಂದೆ ಸ್ವಾವಲಂಭಿಗಳಾಗಿ ಘನತೆಯುಕ್ತ ಜೀವನ ನಡೆಸಬಹುದು ಎಂದರು. ಮದ್ದೂರು ತಹಶೀಲ್ದಾರ್ ಕೆ.ಎಂ.ಉದಯ್ ಅವರು ಮಾತನಾಡಿ ಜೀತ ವಿಮುಕ್ತರಿಗೆ . ಆಧಾರ್ ಕಾರ್ಡ್, ಜನನ-ಮರಣ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ-ಆದಾಯ ಪ್ರಮಾಣ ಪತ್ರ, ಪಡಿತರ ಗುರುತಿನ ಚೀಟಿ, ಚುನಾವಣಾ ಗುರುತಿನ ಚೀಟಿ, ವೈಯಕ್ತಿಕ ಬ್ಯಾಂಕ್ ಉಳಿತಾಯ ಖಾತೆ, ವಿವಿಧ ಯೋಜನೆಗಳಡಿ ಪಿಂಚಣಿ, ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್, ಆರೋಗ್ಯ ವಿಮೆಗಳು (PMJJBY, PMSBY), ಇ ಶ್ರಮ್ ಗುರುತಿನ ಕಾರ್ಡ್, UDID ಗುರುತಿನ ಚೀಟಿ, ಭಾಗ್ಯಲಕ್ಷ್ಮಿ ಯೋಜನೆ, ಮನರೇಗಾ ಉದ್ಯೋಗ ಚೀಟಿ ನೀಡಲಾಗುತ್ತಿದೆ. ಇದರಿಂದ ಅವರುಗಳು ಸ್ವಾವಲಂಬಿ ಜೀವನ ನಡೆಸಬಹುದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್. ನಂದಿನಿ ಅವರು ಮಾತನಾಡಿ ಜೀತವಿಮುಕ್ತರ ಬಾಳಿನಲ್ಲಿ ಸಂಜೀವಿನಿಯ ಬೆಳಕು ಅಭಿಯಾನದಡಿ ಜೀತವಿಮುಕ್ತರ ಕುಟುಂಬದ ಅರ್ಹ ಮಹಿಳೆಯರನ್ನು NRLM ಯೋಜನೆಯ ‘ಸಂಜೀವಿನಿ’ ಯಡಿಯಲ್ಲಿ ಸ್ವ-ಸಹಾಯ ಸಂಘಗಳಿಗೆ ಸೇರ್ಪಡೆ ಮಾಡುವ ಕಾರ್ಯವನ್ನು ಮಾಡಲಾಗಿದೆ. ಸಂಜೀವಿನಿಯಡಿ ದೊರೆಯುವ ಅರ್ಹ ಸೌಲಭ್ಯಗಳನ್ನು ಪಡೆದು ಸ್ವಾವಲಂಬಿ ಜೀವನ ನಡೆಸಲು ಅನುವಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. “Rseti’ ವತಿಯಿಂದ ಜೀತವಿಮುಕ್ತರ ಕುಟುಂಬದ ಅರ್ಹ ಯುವಕ, ಯುವತಿಯರಿಗೆ ಇತರೇ ವೃತ್ತಿಕೌಶಲ್ಯ ತರಬೇತಿ ನೀಡಲು ಕ್ರಮವಹಿಸಲಾಗುತ್ತಿದೆ ಎಂದರು.
*ಇ-ಸ್ವತ್ತು ಅಭಿಯಾನ- ನನ್ನ ಗುರುತು ಅಭಿಯಾನದಲ್ಲಿ ಮತ್ತೊಂದು ಮೈಲಿಗಲ್ಲು ಜೀತವಿಮುಕ್ತರ ಸ್ವಂತ ಸೂರಿಗೆ ದಾಖಲೆ ಒದಗಿಸುವ ಕಾರ್ಯ. ಈಗಾಗಲೇ 49ಕ್ಕೂ ಹೆಚ್ಚು ಇ-ಸ್ವತ್ತುಗಳು, ಅರ್ಹ ವಯಸ್ಸಿನ ಜೀತವಿಮುಕ್ತರ ಕುಟುಂಬದವರಿಗೆ 172 – ಇ-ಶ್ರಮ್ ಕಾರ್ಡ್‌ಗಳು, 180 ಕ್ಕೂ ಹೆಚ್ಚು ಸ್ವ-ಸಹಾಯ ನೋಂದಣಿ, 10 ಜಾತಿ ಆದಾಯ ಪ್ರಮಾಣ ಪತ್ರ, 180ಕ್ಕೂ ಹೆಚ್ಚು PMJJBY/PMSBY, UDID ಗುರುತಿನ ಚೀಟಿ, ನರೇಗಾ ಇತ್ಯಾದಿ ಸವಲತ್ತುಗಳನ್ನು ಒದಗಿಸಿ, ಜೀತವಿಮುಕ್ತರ ಸ್ವಾಭಿಮಾನದ ಬದುಕಿನ ಚುಕ್ಕಾಣಿ ಹಿಡಿಯಲು ಜಿಲ್ಲಾ ಪಂಚಾಯತ್ ನೆರವಾಗಿದೆ ಎಂದರು.
ಜೀತವಿಮುಕ್ತರ ಕುಟುಂಬಗಳಿಗೆ ಭಾರತಿನಗರ ‘ಗ್ರಾಮ ಪಂಚಾಯತ್ ವತಿಯಿಂದ ಸೋಲಾರ್ ಲೈಟ್ ಮತ್ತು ಹೊಲಿಗೆ ಯಂತ್ರಗಳನ್ನು ಉಚಿತವಾಗಿ ವಿತರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಮದ್ದೂರು ತಾಲ್ಲೂಕು ತಹಶೀಲ್ದಾರ್ ಪರಶುರಾಮ್ ಸತ್ತಿಗೇರಿ, ಕಾರ್ಯನಿರ್ವಾಹಕ ಅಧಿಕಾರಿ ರಾಮಲಿಂಗಯ್ಯ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.