ಬೆಂಗಳೂರು,ಜ.16- ಶಿಸ್ತಿನ ಪಕ್ಷ ನಾವು ಇತರರಿಗಿಂತಲೂ ಭಿನ್ನ ಎಂದು ಹೇಳಿಕೊಳ್ಳುತ್ತಿದ್ದ ಬಿಜೆಪಿಯಲ್ಲಿ ಶಾಸಕರು ಮತ್ತು ಸಚಿವರ ನಡುವೆ ಹಾದಿಬೀದಿಯಲ್ಲೇ ಆರೋಪ-ಪ್ರತ್ಯಾರೋಪ ನಡೆಯುತ್ತಿದ್ದರೂ ಪಕ್ಷದ ಮುಖಂಡರು ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆ ಕಾರಣವಾಗಿದೆ.
ಕಳೆದ ಮೂರ್ನಾಲ್ಕು ದಿನಗ ಳಿಂದ ಸಚಿವ ಮುರುಗೇಶ್ ನಿರಾಣಿ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಜಿದ್ದಿಗೆ ಬಿದ್ದವರಂತೆ ಪರಸ್ಪರ ಸೊಂಟದ ಕೆಳಗಿನ ಭಾಷೆ ಬಳಿಸಿ ಟೀಕೆ ಮಾಡುತ್ತಿದ್ದರೂ ಬಲಿಷ್ಠ ಹೈಕಮಾಂಡ್ ಹೊಂದಿರುವ ಬಿಜೆಪಿ ಮೌನಕ್ಕೆ ಶರಣಾಗಿದೆ.
ಪಂಚಮಸಾಲಿ 2ಎ ಮೀಸಲಾತಿ ಬೇಡಿಕೆ ವಿಚಾರವಾಗಿ ಪಂಚಮಸಾಲಿ ಸಮುದಾಯದ ಮುರುಗೇಶ್ ನಿರಾಣಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ಆರಂಭದಲ್ಲೇ ಭಿನ್ನಾಭಿಪ್ರಾಯ ತಲೆದೋರಿತ್ತು. ಇಬ್ಬರು ಆರಂಭಿಕ ಹೋರಾಟದಲ್ಲಿ ಜೊತೆಗಿದ್ದರೂ ಸಚಿವ ಸ್ಥಾನ ಸಿಕ್ಕ ಬಳಿಕ ನಿರಾಣಿ ತಮ್ಮ ವರಸೆ ಬದಲಾಯಿಸಿದ್ದಾರೆ ಎಂಬ ಆರೋಪ ಯತ್ನಾಳ್ ಅವರದ್ದು. ಈ ನಿಟ್ಟಿನಲ್ಲಿ ನಿರಾಣಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸುತ್ತಾ ಬಂದ ಯತ್ನಾಳ್ ಅವರನ್ನು ಪಿಂಪ್ ಸಚಿವ ಎಂದು ಪದ ಪ್ರಯೋಗ ಮಾಡಿದ್ದರು.
ಸ್ಯಾಂಟ್ರೋ ರವಿ ಆಮಿಷಕ್ಕೆ ಒಳಗಾಗುವಂತ ಪ್ರಸಂಗ ಬಂದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ
ಯತ್ನಾಳ್ ಟೀಕೆಗೆ ಪ್ರತ್ಯುತ್ತರ ನೀಡಿದ್ದ ನಿರಾಣಿ, ಯತ್ನಾಳ್ ಜೊತೆಗಿದ್ದ ಕಾರು ಚಾಲಕನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಬಹಿರಂಗ ಹೇಳಿಕೆ ನೀಡಿದ್ದರು. ಪರಿಣಾಮ ಇಬ್ಬರು ನಾಯಕರ ಬಹಿರಂಗ ಕಿತ್ತಾಟ ಬಿಜೆಪಿಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿ ಮಾಡಿತ್ತು.
ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿ ಆಗಿದ್ದಾಗಿಂದಲೂ ಹೈಕಮಾಂಡ್ಗೆ ಯತ್ನಾಳ್ ದೊಡ್ಡ ತಲೆನೋವಾಗಿದ್ದಾರೆ. ಇದೀಗ ತಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲು ಆಗಲ್ಲ, ತಮ್ಮನ್ನು ತುಳಿಯಲು ಆಗಲ್ಲ ಎಂದು ಬಹಿರಂಗ ಮಾಡಿದ್ದರೂ ಹೈಕಮಾಂಡ್ ಮೌನವಾಗಿರುವುದು ಪಕ್ಷದೊಳಗೆ ಚರ್ಚೆಗೆ ಗ್ರಾಸವಾಗಿದೆ.
ಯಾರ ಹಿಡಿತಕ್ಕೂ ಸಿಗದ ಯತ್ನಾಳ್ಗೆ ಮೂಗುದಾರ ಕಟ್ಟಲಾಗದೇ ವರಿಷ್ಠರು ಒದ್ದಾಡುತ್ತಿದ್ದಾರೆ. ಪಕ್ಷದ ಶಿಸ್ತು ಮೀರಿದ ಶಾಸಕನ ವಿರುದ್ಧ ಇದುವರೆಗೂ ಯಾವುದೇ ಶಿಸ್ತು ಕ್ರಮ ಆಗಿಲ್ಲ. ಯತ್ನಾಳ್ ವಿರುದ್ಧ ಯಾವುದೇ ಶಿಸ್ತು ಕ್ರಮಕ್ಕಾಗಲೀ ಅಥವಾ ಅವರ ಬಾಯಿಗೆ ಕಡಿವಾಣ ಹಾಕುವುದಕ್ಕಾಗಲಿ ವರಿಷ್ಠರು ಮುಂದಾಗದಿರುವುದು ಅನುಮಾನ ಮೂಡಿಸಿದೆ.
ಯತ್ನಾಳರ ಚಾಲಕನ ಕೊಲೆ ವಿಚಾರ ಬಿಜೆಪಿ ನಾಯಕರಿಗೆ ತಿಳಿದಿದ್ದರೂ ಇಷ್ಟು ದಿನ ಮುಚ್ಚಿಟ್ಟಿದ್ದೇಕೆ? ಬಸವರಾಜ ಬೊಮ್ಮಾಯಿ ಅವರೇ, ಏನದು ಕೊಲೆ ರಹಸ್ಯ? ತನಿಖೆ ಮಾಡಿಲ್ಲವೇಕೆ? ಯತ್ನಾಳರನ್ನು ಕಂಡರೆ ತಮಗೆ ಏಕಿಷ್ಟು ಭಯ? ಯತ್ನಾಳ್ ಹೇಳುತ್ತಿರುವ ಸಿಡಿ ರಹಸ್ಯ, ನಿರಾಣಿ ಹೇಳುತ್ತಿರುವ ಕೊಲೆ ರಹಸ್ಯ ಏನೆಂದು ಬಿಜೆಪಿ ಬಹಿರಂಗಪಡಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ. ಇದು ಬಿಜೆಪಿಗೆ ಇನ್ನಷ್ಟು ಮುಜುಗರ ಸೃಷ್ಟಿಸಿದೆ.
ರಾಜ್ಯಕ್ಕೆ ಪ್ರಿಯಾಂಕ ಆಗಮನ, ಕಾಂಗ್ರೆಸ್ನಲ್ಲಿ ಸಂಚಲನ
ವರಿಷ್ಠರಿಂದ ಬುಲಾವ್:
ಇಬ್ಬರು ನಾಯಕರ ನಡುವಿನ ತಿಕ್ಕಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ವರಿಷ್ಠರಿಂದ ಬುಲಾವ್ ಬಂದಿದೆ. ಯಾವುದೇ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಚುನಾವಣಾ ಸಂದರ್ಭದಲ್ಲೇ ಬಹಿರಂಗವಾಗಿ ನಡೆಯುತ್ತಿರುವ ಈ ವಾಕ್ಸಮರ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟು ಮಾಡುತ್ತಿದೆ. ಈ ನಿಟ್ಟಿನಲ್ಲಿ ವರಿಷ್ಠರು ಸೂಕ್ತ ಸೂಚನೆಗಳನ್ನು ನೀಡುವ ಸಾಧ್ಯತೆ ಇದೆ.
ಈ ಹಿಂದೆಯೂ ಯತ್ನಾಳ್ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ವಿರುದ್ಧ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದರು. ಈ ಸಂದರ್ಭದಲ್ಲಿ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ ಯಾವುದೇ ಕ್ರಮ ಆಗಿರಲಿಲ್ಲ.
ಇದೀಗ ಮತ್ತೊಂದು ಬಾರಿ ವರಿಷ್ಠರಿಂದ ಬುಲಾವ್ ಬಂದಿದ್ದು ಏನು ಕ್ರಮ ಕೈಗೊಳ್ಳಲಾಗುತ್ತದೆ ಎಂಬುವುದು ಸದ್ಯದ ಕುತೂಹಲ.
minister, nirani, MLA Yatnal, BJP, High Command,