ಮೈಸೂರು, ಫೆ.4- ರಾಜ್ಯದಲ್ಲಿ ಪಂಚಮಶಾಲಿ ಮೂರನೇ ಪೀಠ ಸ್ಥಾಪನೆಯನ್ನು ಸಚಿವ ಮುರುಗೇಶ್ ನಿರಾಣಿ ಸಮರ್ಥಿಸಿಕೊಂಡರು.
ನಗರದಲ್ಲಿಂದು ಮಾತನಾಡಿದ ಅವರು, ಪೀಠಗಳ ಸ್ವಾಮೀಜಿಗಳ ಒತ್ತಡ ಕಡಿಮೆ ಮಾಡಲು ಈ ಪೀಠದ ಅಗತ್ಯ ಇದೆ. ಆದರೆ ಈ ಪೀಠದ ಸ್ಥಾಪನೆ ಹಿಂದೆ ನಾನಿಲ್ಲ. ಆದರೆ ನನ್ನ ಸಂಪೂರ್ಣ ಬೆಂಬಲ ಇದಕ್ಕೆ ಇದೆ. ವಚನಾನಂದ ಸ್ವಾಮೀಜಿ ಸೇರಿ ಹಲವರು ಇದರ ಬೆಂಬಲಕ್ಕೆ ಇದ್ದಾರೆ. ಪೀಠ ಸ್ಥಾಪನೆಯ ಹಿಂದೆ ದುರುದ್ದೇಶದ ಪ್ರಶ್ನೆಯೇ ಇಲ್ಲ ಎಂದರು.
ಸಮುದಾಯದ ಜನಸಂಖ್ಯೆ ಹೆಚ್ಚಿರುವ ಕಾರಣ ಮೂರನೇ ಪೀಠ ಅವಶ್ಯಕತೆ ಇದೆ. ಧಾರ್ಮಿಕ ಕಾರ್ಯಕ್ರಮ ಮದುವೆ ಸಮಾರಂಭದಲ್ಲಿ ಭಾಗಿಯಾಗಲು ಮೂರನೇ ಪೀಠ ಸ್ಥಾಪನೆ ಮಾಡಲಾಗಿದೆ. ಪೀಠ ಸ್ಥಾಪನೆಯ ಯಾವುದೇ ಸಭೆ ಸಮಾರಂಭಕ್ಕೆ ನಾನು ಹೋಗಿಲ್ಲ ಎಂದು ಹೇಳಿದರು.
ಮೂರನೇ ಪೀಠದ ಸ್ಥಾಪನೆ ವಿವಾದ ಸಂಬಂಧ ಈ ಬಗ್ಗೆ ನಾನೇ ಖುದ್ದಾಗಿ ಸ್ವಾಮೀಜಿಯನ್ನು ಭೇಟಿ ಮಾಡುವುದಿಲ್ಲ. ಅವರು ಕರೆದರೆ ನಾನು ಹೋಗಿ ಮಾತನಾಡುತ್ತೇನೆ ಎಂದು ತಿಳಿಸಿದರು.
ಮಠಕ್ಕೆ ಕೊಟ್ಟಿರುವ ಕಾಣಿಕೆ ವಾಪಸ್ಸು ನೀಡುವ ವಿಚಾರ ಕುರಿತು ಪ್ರತಿಕ್ರಿಯಿಸಿ ನಾನು ಕಾಣಿಕೆಯನ್ನು ಸ್ವಾಮೀಜಿಗೆ ಕೊಟ್ಟಿಲ್ಲ. ನಾನು ಕೊಟ್ಟಿರುವುದು ಪೀಠಕ್ಕೆ. ಕೊಟ್ಟಿರುವುದನ್ನು ವಾಪಸ್ಸು ಕೇಳುವಷ್ಟು ಸಣ್ಣವನು ನಾನಲ್ಲ. ಇಂತಹ ಮನಸ್ಥಿತಿ ನನಗೆ ಇಲ್ಲ. ಬಲಗೈಯಲ್ಲಿ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು. ಅದೇ ರೀತಿ ನಾನು ಪೀಠಕ್ಕೆ ನನ್ನ ಕೈಲಾದುದನ್ನು ನೀಡಿದ್ದೇನೆ. ನಾನು ವಾಪಸ್ಸು ಕೇಳಿದ್ದೇನೆ ಎಂಬುದು ಸುಳ್ಳು. ಸ್ವಾಮೀಜಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ದೂರವಾಣಿ ಮೂಲಕ ಮಾತನಾಡಿದರೂ ನಾನು ಸ್ಪಷ್ಟನೆ ನೀಡುತ್ತೇನೆ ಎಂದರು.
ನಿರಾಣಿ ಸಹೋದರನಿಂದ ಧಮ್ಕಿ ವಿಚಾರ ಸಂಬಂಧ ಇದು ಸತ್ಯಕ್ಕೆ ದೂರವಾದ ಆರೋಪ. ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆಗೆ ತೋರಿಸುವ ಗಾಂ ತತ್ವ ನಮ್ಮ ಮನೆಯ ಸಂಸ್ಕಾರ. ಇದರಲ್ಲಿ ಧಮ್ಕಿ ಹಾಕು ಪ್ರಶ್ನೆಯೇ ಇಲ್ಲ ಎಂದರು.
ಸಚಿವ ಸಂಪುಟ ವಿಸ್ತರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಚಿವರು ಅದು ಸಿಎಂ ಪರಮಾಕಾರ ಅದರಲ್ಲಿ ನಮ್ಮ ಪಾತ್ರ ಇಲ್ಲ. ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಶ್ನೆ ಇಲ್ಲ. ಬೊಮ್ಮಾಯಿ ಅವರು ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ರಾಷ್ಟ್ರೀಯ ನಾಯಕರು ಇದನ್ನು ಸ್ಪಷ್ಟಪಡಿಸಿದ್ದಾರೆ. ಈಗಾಗಿ ಸಿಎಂ ಬದಲಾವಣೆ ವಿಚಾರ ಕೇವಲ ಊಹಾಪೋಹ. ಮುಂದಿನ ಚುನಾವಣೆಯಲ್ಲಿ 130 ಸ್ಥಾನ ಪಡೆದು ಮತ್ತೆ ಬಿಜೆಪಿ ಅಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
