ಸಿದ್ದು-ಎಚ್‍ಡಿಕೆ ಒಳಜಗಳದಿಂದ ಕಾಂಗ್ರೆಸ್ ಜೆಡಿಎಸ್ ಫುಟ್‌ಪಾತ್‌ಗೆ ಬಂದಿವೆ: ಸಚಿವ ಅಶೋಕ್

ಬೆಂಗಳೂರು.ಫೆ.8-ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರ ಒಳಜಗಳದಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಫುಟ್‍ಪಾತ್ ಸ್ಥಿತಿಗೆ ಬಂದಿವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಲೇವಡಿ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಕುಮಾರಸ್ವಾಮಿ ಹೇಳುತ್ತಾರೆ.

ಕುಮಾರಸ್ವಾಮಿ ಮತ್ತೆ ಸಿಎಂ ಆಗುವುದೇ ಇಲ್ಲ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಇಬ್ಬರ ಜಗಳದಲ್ಲಿ ಎರಡೂ ಪಕ್ಷಗಳು ಬೀದಿಗೆ ಬಿದ್ದಿವೆ ಎಂದು ವ್ಯಂಗ್ಯವಾಡಿದರು.  ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಹೇಳುತ್ತಿರುವುದು ನೂರಕ್ಕೆ ನೂರರಷ್ಟು ಸತ್ಯ. ಏಕೆಂದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಮುಗಿದ ಅಧ್ಯಾಯವಾಗಿವೆ. ದೇಶದ ಜನತೆ ಈ ಎರಡೂ ಪಕ್ಷಗಳನ್ನು ಎಲ್ಲಿಡಬೇಕೊ ಅಲ್ಲಿಯೇ ಇಟ್ಟಿದ್ದಾರೆ.

ಹೀಗಾಗಿ ಈ ಇಬ್ಬರು ಪುನಃ ಮುಖ್ಯಮಂತ್ರಿಯಾಗುವುದಿಲ್ಲ ಎಂದು ಭವಿಷ್ಯ ನುಡಿದರು. ಬಿಜೆಪಿ ಇಂದು ಎಲ್ಲೆಡೆ ಬಲಿಷ್ಠವಾಗಿದೆ. ದೇಶದ ಜನತೆ ನಮ್ಮ ಪಕ್ಷವನ್ನು ಒಪ್ಪಿ ಅಧಿಕಾರ ನೀಡಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಯಾರಿಗೂ ಬೇಡವಾದ ಪಕ್ಷಗಳು. ಮುಂದಿನ ದಿನಗಳಲ್ಲಿ ಆಪಕ್ಷಗಳಲ್ಲಿರುವವರೇ ಖಾಲಿ ಮಾಡುತ್ತಾರೆ ಎಂದು ಹೇಳಿದರು.

ಖಾತೆ ಹಂಚಿಕೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಶೋಕ್, ಮುಖ್ಯಮಂತ್ರಿಗಳು ಯಾರಿಗೆ ಯಾವ ಖಾತೆ ನೀಡಬೇಕೆಂದು ತೀರ್ಮಾನಿಸುತ್ತಾರೆ. ಅದು ಅವರಿಗಿರುವ ಪರಮಾಧಿಕಾರ. ಸೂಕ್ತ ಕಾಲದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳುತ್ತಾರೆ ಎಂದು ತಿಳಿಸಿದರು.