ಬೆಂಗಳೂರು,ಜ.10- ಸಚಿವ ಎಸ್.ಟಿ. ಸೋಮಶೇಖರ್ ಪುತ್ರ ನಿಶಾಂತ್‍ಗೆ ಬ್ಲಾಕ್‍ಮೇಲ್ ಮಾಡಿ ಬೆದರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರು ಮತ್ತೆ ಮೂವರನ್ನು ವಶಕ್ಕೆ ಪಡೆದಿದ್ದಾರೆ. ಈಗಾಗಲೇ ಪ್ರಮುಖ ಆರೋಪಿ ರಾಹುಲ್ ಭಟ್ ಎಂಬುವನನ್ನು ಬಂಧಿಸಿರುವ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು , ದಿನೇ ದಿನೇ ಪ್ರಕರಣ ತಿರುವು ಪಡೆದುಕೊಳ್ಳುತ್ತಿದೆ.
ಪ್ರಕರಣದ ಸೂತ್ರಧಾರ ಯಾರು? ಪಾತ್ರಧಾರಿಗಳು ಯಾರು? ಈ ಪ್ರಕರಣದಲ್ಲಿ ಎಷ್ಟು ಮಂದಿ ಇದ್ದಾರೆ ಎಂಬ ಬಗ್ಗೆ ಸಿಸಿಬಿ ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಇಂಡಿ ಶಾಸಕ ಯಶವಂತ ರಾಯಗೌಡ ಪಾಟೀಲ್ ಅವರ ಮಗಳ ಹೆಸರಿನಲ್ಲಿರುವ ಸಿಮ್ ಕಾರ್ಡ್‍ನಿಂದ ಆರೋಪಿಯು ನಿಶಾಂತ್‍ಗೆ ಕರೆ ಮಾಡಿದ್ದರು ಎಂದು ಅಧಿಕಾರಿಗಳು ಹೇಳಿದ್ದು, ಈ ಬಗ್ಗೆ ಶಾಸಕರು ಪ್ರಕರಣಕ್ಕೂ ನಮಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಪ್ರಕರಣ ಸಂಬಂಧ ಅಧಿಕಾರಿಗಳು ಇಂಡಿ ಶಾಸಕ ಹಾಗೂ ಅವರ ಪುತ್ರಿಯಿಂದ ಹೇಳಿಕೆಯನ್ನು ಪಡೆದುಕೊಂಡಿದ್ದಾರೆ. ನನ್ನ ಮಗಳು ಉನ್ನತ ವ್ಯಾಸಂಗಕ್ಕಾಗಿ ಕಳೆದ 10 ತಿಂಗಳಿನಿಂದ ವಿದೇಶದಲ್ಲಿದ್ದಾಳೆ. ಆಕೆಗೆ ರಾಕೇಶ್ ಅಣ್ಣಪ್ಪ ಎಂಬ ಯುವಕನ ಪರಿಚಯವಿತ್ತು. ಆತನಿಗೆ ಸಿಎಂ ಕಾರ್ಡ್ ಕೊಟ್ಟಿದ್ದಾಳೆ. ಅದನ್ನು ಆತ ದುರುಪಯೋಗಪಡಿಸಿಕೊಂಡಿದ್ದಾನೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಇಂಡಿ ಶಾಸಕರು ಸಿಸಿಬಿ ಪೊಲೀಸರಲ್ಲಿ ಮನವಿ ಮಾಡಿದ್ದಾರೆ.
ಪ್ರಕರಣದಲ್ಲಿ ಎಸ್.ಟಿ.ಸೋಮಶೇಖರ್ ಅವರ ಈ ಹಿಂದೆ ಗನ್‍ಮ್ಯಾನ್ ಆಗಿದ್ದ ಅವರ ವಿಚಾರಣೆಯನ್ನು ಕೂಡ ಸಿಸಿಬಿ ಪೊಲೀಸರು ಮಾಡಿದ್ದಾರೆ. ಪ್ರಮುಖ ಆರೋಪಿಯಾಗಿರುವ ರಾಹುಲ್ ಭಟ್ ಪ್ರಸಿದ್ದ ಜ್ಯೋತಿಷಿ ಅವರ ಪುತ್ರ. ಈತನನ್ನು ಸಿಸಿಬಿ ಪೊಲೀಸರು ವಿಚಾರಣೆಗೆ ಒಳಪಡಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.
ಅಶ್ಲೀಲ ನಕಲಿ ವಿಡಿಯೋ ಸೃಷ್ಟಿಸಿ ಒಂದು ಕೋಟಿ ರೂ.ಗೆ ಬ್ಲಾಕ್‍ಮೇಲ್ ಮಾಡಿದ್ದು ನನ್ನ ತಂದೆಯವರ ರಾಜಕೀಯ ಜೀವನದ ತೇಜೋವಧೆ ಮಾಡುವ ಷಡ್ಯಂತ್ರ ರೂಪಿಸಲಾಗಿತ್ತು. ಈ ಕೃತ್ಯ ಎಸಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ನಿಶಾಂತ್ ಸೈಬರ್ ಕ್ರೈಮ್‍ಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ಒಬ್ಬರನ್ನು ಬಂಸಿ , ಮೂವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.
