ಕೊಳಗೇರಿ ನಿವಾಸಿಗಳಿಗೆ ಮನೆ ನಿರ್ಮಾಣಕ್ಕೆ ವಾರದೊಳಗೆ ಚಾಲನೆ

ಬೆಂಗಳೂರು,ಮಾ.15- ನೆಲಮಂಗಲ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಳಗೇರಿಗಳಲ್ಲಿ ಪ್ರಧಾನಮಂತ್ರಿ ಆವಾಜ್ ಯೋಜನೆಗಳಡಿ 200 ಮನೆಗಳನ್ನು ನಿರ್ಮಿಸಲು ಇನ್ನು ಒಂದು ವಾರದೊಳಗೆ ಕ್ರಮ ಕೈಗೊಳ್ಳುವುದಾಗಿ ವಸತಿ ಸಚಿವ ಸೋಮಣ್ಣ ವಿಧಾನಸಭೆಗೆ ತಿಳಿಸಿದರು. ಸದಸ್ಯ ಡಾ.ಶ್ರೀನಿವಾಸ್‍ಮೂರ್ತಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ನೆಲಮಂಗಲದಲ್ಲಿ 200 ಮನೆಗಳನ್ನು ಒಟ್ಟು 13.49 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. 11 ತಿಂಗಳ ಅವಧಿಯೊಳಗೆ ಯೋಜನೆಯನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ ಎಂದರು.

ಎಲ್ಲೆಲ್ಲಿ ಜಮೀನು ಖಾಲಿ ಇದೆ ಎಂಬುದನ್ನು ಸದಸ್ಯರು ಮಾಹಿತಿ ನೀಡಿದರೆ ಅದನ್ನು ಪರಿಶೀಲಿಸಿ ವಸತಿ ನಿರ್ಮಾಣ ಮಾಡುವ ಆಶ್ವಾಸನೆ ಕೊಟ್ಟರು. ಪ್ರಧಾನಮಂತ್ರಿ ಆವಾಜ್ ಯೋಜನೆ, ಸರ್ವರಿಗೂ ಸೂರು ಯೋಜನೆಗಳಡಿ ನೆಲಮಂಗಲದ ಜಯನಗರ 1ನೇ ಹಂತ 25, ಜಯನಗರ 2ನೇ ಹಂತ 40, ಚನ್ನಪ್ಪ ಕಲ್ಯಾಣಿ 35, ಇಂದಿರಾನಗರ 60 ಹಾಗೂ ರಾಯನಗರದಲ್ಲಿ 40 ಸೇರಿದಂತೆ ಒಟ್ಟು 200 ಮನೆಗಳನ್ನು ನಿರ್ಮಾಣ ಮಾಡುವುದಾಗಿ ಹೇಳಿದರು.

ಮನೆಗಳನ್ನು ನಿರ್ಮಿಸಲು ತಲಾ ರಾಜ್ಯ ಸರ್ಕಾರ 1.20 ಲಕ್ಷ ಹಾಗೂ ಕೇಂದ್ರ ಸರ್ಕಾರ ಒಂದೂವರೆ ಲಕ್ಷ ಆರ್ಥಿಕ ನೆರವು ನೀಡುತ್ತದೆ. ಬೆಂಗಳೂರು ಹೊರತುಪಡಿಸಿ ನಗರಪಾಲಿಕೆ, ನಗರಸಭೆ, ಪಟ್ಟಣ ಪಂಚಾಯ್ತಿ, ಪುರಸಭೆ ವ್ಯಾಪ್ತಿಯಲ್ಲಿ 69 ಸಾವಿರ ಮನೆಗಳನ್ನು ನಿರ್ಮಾಣ ಮಾಡುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.