ತ್ವರಿತ ಸಾಲಕ್ಕೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ; ಸಚಿವ ಸೋಮಣ್ಣ

Spread the love

ಬೆಂಗಳೂರು, ಮಾ.19- ಕರ್ನಾಟಕ ಗೃಹ ನಿರ್ಮಾಣ ಮಂಡಳಿ ಹಾಗೂ ರಾಜೀವ್ ಗಾಂಧಿ ಗೃಹ ನಿರ್ಮಾಣ ಮಂಡಳಿ ಅಡಿ ರಾಜ್ಯದಲ್ಲಿ ಪ್ರಧಾನಮಂತ್ರಿಆವಾಸ್‍ಯೋಜನೆಯ ಫಲಾನುಭವಿಗಳಿಗೆ ತ್ವರಿತವಾಗಿ ಸಾಲಸೌಲಭ್ಯ ಒದಗಿಸಲು ಮಂಜೂರಾತಿ ನೀಡುವಂತೆ ಬ್ಯಾಂಕ್ ಅಧಿಕಾರಿಗಳಿಗೆ ವಸತಿ ಸಚಿವ ವಿ.ಸೋಮಣ್ಣ ಸೂಚನೆ ನೀಡಿದ್ದಾರೆ. ಇಂದು ನಡೆದ ಬ್ಯಾಂಕ್‍ಗಳ ಹಿರಿಯ ಅಧಿಕಾರಿಗಳ ಸಭೆ ನಡೆಸಿದ ನಂತರ ವಸತಿ ಸಚಿವ ಸೋಮಣ್ಣ ಸುದ್ದಿಗಾರರೊಂದಿಗೆ ಮಾತನಾಡಿದರು.

ಫಲಾನುಭವಿಗಳಿಗೆ ಬ್ಯಾಂಕ್‍ಗಳಿಂದ ದೊರೆಯಬೇಕಾದ 2.25 ಲಕ್ಷ ರೂ. ಸಾಲವನ್ನು ಶೇ. 6ರ ಬಡ್ಡಿ ದರದಲ್ಲಿ ಬಿಡುಗಡೆ ಮಾಡುವ ನಿರ್ಧಾರಕ್ಕೆ ಬರಲಾಯಿತೆಂದು ತಿಳಿಸಿದರು. ಬಡ್ಡಿ ದರವನ್ನು ಕಡಿಮೆ ಮಾಡಲು ಮುಖ್ಯಮಂತ್ರಿಗಳ ಮೂಲಕ ಕೇಂದ್ರ ವಿತ್ತ ಸಚಿವರನ್ನು ಕೋರಲಾಗುವುದು ಎಂದೂ ಹೇಳಿದರು. ಎರಡೂ ನಿಗಮಗಳ ಮೂಲಕ 3,24,000 ಮನೆಗಳನ್ನು ನಿರ್ಮಿಸುವ ಗುರಿಯಿದ್ದು, ಈ ಪೈಕಿ ಕೊಳಗೇರಿ ಅಭಿವೃದ್ಧಿ ಮಂಡಳಿ ಮೂಲಕ 83,119 ಮನೆಗಳ ನಿರ್ಮಾಣವಾಗುತ್ತಿದ್ದು, 54,000 ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 97,134 ಮನೆಗಳ ಫಲಾನುಭವಿಗಳ ಪಟ್ಟಿಯನ್ನು ಪರಿಗಣಿಸಿ, 34,008 ಮಂದಿಗೆ ಸಾಲ ನೀಡಲು ವಿವಿಧ ಬ್ಯಾಂಕ್‍ಗಳು ಈಗಾಗಲೆ ತಾತ್ವಿಕ ಒಪ್ಪಿಗೆ ನೀಡಿವೆ ಎಂದು ತಿಳಿಸಿದರು.

ವಸತಿ ಇಲಾಖೆಯ ವಿವಿಧ ಕಾರ್ಯಕ್ರಮಗಳಡಿ ನಿರ್ಮಾಣ ವಾಗುತ್ತಿರುವ ಮನೆಗಳನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಹಣದ ಅಡಚಣೆಯಿಲ್ಲ. ಹಿಂದಿನ ಸರ್ಕಾರದಲ್ಲಿ ಆರಂಭಗೊಂಡಿದ್ದ ಹಲವಾರು ಗೃಹ ನಿರ್ಮಾಣ ಯೋಜನೆಗಳು ಗೊಂದಲದ ಗೂಡಾಗಿ ನೆನೆಗುದಿಗೆ ಬಿದ್ದಿತ್ತು. ತಮ್ಮ ಸರ್ಕಾರ ಪ್ರಧಾನಮಂತ್ರಿಗಳ ಮಹತ್ತರ ಆಶಯದಂತೆ ಬಡವರಿಗೆ ಮನೆಗಳನ್ನು ನಿರ್ಮಿಸಿಕೊಡುವ ಯೋಜನೆಗಳನ್ನು ಆದ್ಯತೆಯ ಮೇರೆಗೆ ಅನುಷ್ಠಾನ ಮಾಡುವ ಸಂಕಲ್ಪ ಮಾಡಿದೆ ಎಂದು ಅವರು ಹೇಳಿದರು.

ಕೊಳಚೆ ಅಭಿವೃದ್ಧಿ ಮಂಡಳಿ ಯಡಿ ಫಲಾನುಭವಿಗಳಿಗೆ ವಿತರಿಸ ಲಾಗಿರುವ 3,13,000 ಸ್ವತ್ತುಗಳಿಗೆ ಸಂಬಂಧಿಸಿದಂತೆ ಹಕ್ಕನ್ನು ಹಸ್ತಾಂತರಿಸುವ ಮೂಲಕ ಐತಿಹಾಸಿಕ ತೀರ್ಮಾನ ತೆಗೆದುಕೊಳ್ಳಲಾಗಿದೆ. ಹಕ್ಕುಪತ್ರ ಪಡೆದುಕೊಳ್ಳಲು ನಿಗದಿ ಪಡಿಸಿರುವ ಶುಲ್ಕದ ಮೊತ್ತ ಹೆಚ್ಚಾಯಿತೆಂಬ ಮನವಿ ಬಂದಿದ್ದು, ಈ ಶುಲ್ಕವನ್ನು ಕಡಿಮೆ ಮಾಡಲು ಮುಖ್ಯಮಂತ್ರಿಗಳನ್ನು ಕೋರಲಾಗಿದೆ. ಈ ವಿಷಯ ಮುಂದಿನ ಸಚಿವ ಸಂಪುಟದ ಮುಂದೆ ಬರಲಿದೆ ಎಂದು ಹೇಳಿದರು.

ಪಟ್ಟಣ ಪಂಚಾಯತಿ, ಪುರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 1200 ರೂ.ಗಳಿಂದ 10,000 ರೂ.ಗಳವರೆಗೆ ದರ ನಿಗದಿಪಡಿಸಲಾಗಿತ್ತು. ಈ ದರಗಳನ್ನು 1200 ಗಳಿಂದ 4000 ರೂ.ಗಳವರೆಗೆ ಕಡಿಮೆ ಮಾಡಿ ಪರಿಷ್ಕರಿಸಲು ಕ್ರಮ ಆಗುತ್ತಿದೆ. ಪರಿಶಿಷ್ಟ ಜಾತಿ ಹಾಗೂ ವರ್ಗದವರಿಗೆ ಶೇ.50ರಷ್ಟು ರಿಯಾಯತಿ ಸಿಗಲಿದೆ ಎಂದೂ ಸಚಿವರು ಹೇಳಿದರು.

ಇದಕ್ಕೂ ಮುನ್ನ ನಡೆದ ಬ್ಯಾಂಕ್ ಅಧಿಕಾರಿಗಳ ಸಭೆಯಲ್ಲಿ ಸರ್ಕಾರದ ಅಪರ ಮುಖ್ಯಕಾರ್ಯದರ್ಶಿಗಳು ಹಾಗೂ ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮ, ವಸತಿ ಇಲಾಖೆ ಕಾರ್ಯದರ್ಶಿ ಮನೋಜ್ ಕುಮಾರ್, ರಾಜೀವ್ ಗಾಂಧಿ ವಸತಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಬಸವರಾಜ, ಕೊಳಚೆ ನಿರ್ಮೂಲನ ಮಂಡಳಿ ಆಯುಕ್ತ ಶಿವಪ್ರಸಾದ್ ಮತ್ತಿತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.

Facebook Comments