2021ರ ವೇಳೆಗೆ ಬಡವರಿಗೆ ಸೂರು

ಮೈಸೂರು, ನ.13- ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮುಂದಿನ ಎರಡು ವರ್ಷದೊಳಗೆ 9.24 ಲಕ್ಷ ಮನೆಗಳ ನಿರ್ಮಾಣದ ಗುರಿ ಹೊಂದಿದ್ದು, 2021ರ ವೇಳೆಗೆ ಬಡವರಿಗೆ ಸೂರು ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ವಸತಿ ಸಚಿವ ಸೋಮಣ್ಣ ಇಂದಿಲ್ಲಿ ತಿಳಿಸಿದರು.

ನಗರದ ಸರ್ಕಾರಿ ಅತಿಥಿ ಗೃಹದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ತಾನು ವಸತಿ ಸಚಿವರಾಗಿ ಅಧಿಕಾರ ವಹಿಸಿಕೊಂಡು ಒಂದೂವರೆ ವರ್ಷ ಆಗಿದೆ. ಈ ಅವಧಿಯಲ್ಲಿ ಸೂರಿಲ್ಲದವರಿಗೆ ಸೂರು ಕಲ್ಪಿಸಲು ಶ್ರಮಿಸಿದ್ದೇನೆ ಎಂದರು.

ಈ ಪೈಕಿ 1,84,718 ಮನೆಗಳ ಕಾಮಗಾರಿ ನಡೆಯುತ್ತಿದೆ. ಗುಣಮಟ್ಟದ ಮನೆಗಳನ್ನು ನಿರ್ಮಿಸಿಕೊಡಲು ಬದ್ಧರಾಗಿದ್ದೇವೆ ಎಂದರು. ಇದೇ ಪ್ರಥಮ ಬಾರಿಗೆ ರಾಜ್ಯಾದ್ಯಂತ ನಾವು ಸಾಂತ್ವನ ನಿವೇಶನಗಳ ಹಂಚಿಕೆ ಕಾರ್ಯಕ್ರಮದಡಿ ಮೈಸೂರಿನಲ್ಲಿ ಪ್ರಥಮ ಬಾರಿಗೆ ಕೆಆರ್‍ಎಸ್ ನಿಸರ್ಗ ಬಡಾವಣೆಯನ್ನು ಸಾಂತ್ವನ ಯೋಜನೆಯಲ್ಲಿ ನೀಡಲಾಗುತ್ತಿದೆ. ಇದೇ ರೀತಿ ರಾಜ್ಯಾದ್ಯಂತ ಜಾರಿಗೆ ತರಲಾಗುವುದು ಎಂದರು.

ನಗರದಲ್ಲಿ ಮಾತ್ರ ಮನೆಗಳ ನಿರ್ಮಾಣವಾಗುತ್ತಿವೆ. ಹಳ್ಳಿಗಳಲ್ಲಿ ಆಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಇದು ಸತ್ಯಕ್ಕೆ ದೂರವಾದುದು. ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ 20 ಮನೆಗಳನ್ನು ನಿರ್ಮಿಸಿಕೊಡಲು ತಮ್ಮ ಸರ್ಕಾರ ಮುಂದಾಗಿದೆ ಎಂದರು. ಎಲ್ಲ ವರ್ಗದವರನ್ನೂ ಗಮನದಲ್ಲಿಟ್ಟುಕೊಂಡು ಅವರುಗಳಿಗಾಗಿ ನಾವು ಉತ್ತಮ ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ. 2021ರ ವೇಳೆಗೆ ಯಾವ ಬಡವರೂ ಸಹ ಸೂರಿಲ್ಲ ಎಂದು ಹೇಳಬಾರದು ಎಂದು ಕೇಂದ್ರದಿಂದ ಸೂಚನೆ ಬಂದಿದೆ.

ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಇರುವ ಬಡವರಿಗಾಗಿ ಸೂರು ಒದಗಿಸುವ ಬಗ್ಗೆ ಸಿಎಂ ನೇತೃತ್ವದ ಸರ್ಕಾರದಲ್ಲಿ ಕ್ರಮ ಕೈಗೊಂಡಿದ್ದೇವೆ ಎಂದರು. ಈವರೆಗೂ ಬಡಾವಣೆ ನಿರ್ಮಿಸಲು ಅಡೆತಡೆ ಉಂಟಾಗುತ್ತಿತ್ತು. ಮುಂದೆ ಆ ರೀತಿ ತೊಂದರೆ ಆಗುವುದಿಲ್ಲ. 65-35ರ ಅನುಪಾತದಲ್ಲಿ ಇನ್ನು ಮುಂದೆ ರೈತರಿಂದ ಜಮೀನು ಪಡೆದು ಅವರಿಗೂ ಸಹ ನಿವೇಶನ ನೀಡಲಾಗುತ್ತದೆ. ಇದರಿಂದ ರೈತರಿಗೆ ಹಾಗೂ ನಿವೇಶನ ಕೊಂಡವರಿಗೆ ಲಾಭವಾಗುತ್ತದೆ ಎಂದರು.

ರಾಜ್ಯಾದ್ಯಂತ 357 ಎಕರೆ ಪ್ರದೇಶದಲ್ಲಿ 159 ಕೋಟಿ ಮೊತ್ತದಲ್ಲಿ 8 ವಸತಿ ಯೋಜನೆಗಳ ಟೆಂಡರ್ ಪ್ರಕ್ರಿಯೆಯಲ್ಲಿದೆ. ಹಾಗೆಯೇ ರಾಜ್ಯಾದ್ಯಂತ 273 ಎಕರೆ ಪ್ರದೇಶದಲ್ಲಿ 1188 ಕೋಟಿ ಮೊತ್ತದಲ್ಲಿ 9 ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.

ಇದರಲ್ಲಿ ಕೊಪ್ಪಳ, ಹನೂರು, ಬೆಂಗಳೂರು ದಕ್ಷಿಣ ತಾಲ್ಲೂಕು, ಚಾಮರಾಜನಗರ, ಮೈಸೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳು ಈ ಯೋಜನೆಗಳಿಗೆ ಬರಲಿವೆ. ಬಡವರಿಗಾಗಿ ಸೂರು ನೀಡಲು ಸರ್ಕಾರ ಮುಂದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ತಡರಾತ್ರಿ ನಿಧನರಾದ ಪತ್ರಕರ್ತ ರವಿ ಬೆಳಗೆರೆ ಅವರಿಗೆ ಒಂದು ನಿಮಿಷ ಗೌರವ ಸೂಚಿಸಿದರು.  ಇದಕ್ಕೂ ಮುನ್ನ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ ಬಿಜೆಪಿಯಲ್ಲಿ ಯಾವುದೇ ರೀತಿ ಗೊಂದಲ ಇಲ್ಲ. ತಮ್ಮ ತಮ್ಮ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ.

ಯತ್ನಾಳ್ ಅವರು ನಮ್ಮೊಂದಿಗೆ ಇದ್ದಾರೆ. ಅವರ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. 500 ಕಿ.ಮೀ. ಕಾರಿನಲ್ಲಿ ತಾವು ಪ್ರಯಾಣಿಸಿ ಅವರೊಂದಿಗೆ ಮಾತುಕತೆ ನಡೆಸಿ ಬಂದಿದ್ದೇನೆ. ಯಾವುದೇ ಭಿನ್ನಾಭಿಪ್ರಾಯವೂ ಇಲ್ಲ. ಮನಸ್ತಾಪ ಬಗೆಹರಿಯಲಿದೆ ಎಂದು ಸೋಮಣ್ಣ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ರಾಮದಾಸ್, ಜಿ.ಟಿ.ದೇವೇಗೌಡ, ನಾಗೇಂದ್ರ, ಗೃಹ ಮಂಡಳಿ ಅಧ್ಯಕ್ಷ ಅರಗ ಜ್ಞಾನೇಂದ್ರ, ಸಂಸದ ಪ್ರತಾಪ್ ಸಿಂಹ, ಮಾಜಿ ಸಚಿವ ವಿಜಯ್‍ಶಂಕರ್, ಮೂಡಾ ಅಧ್ಯಕ್ಷ ರಾಜೀವ್, ನಗರ ಬಿಜೆಪಿ ಅಧ್ಯಕ್ಷ ಶ್ರೀವತ್ಸ ಸೇರಿದಂತೆ ಮತ್ತಿತರ ಮುಖಂಡರು ಉಪಸ್ಥಿತರಿದ್ದರು.