ಪಟ್ಟಣ ಪ್ರದೇಶಗಳಲ್ಲಿ 3.40ಲಕ್ಷ ಮನೆಗಳ ನಿರ್ಮಾಣ : ಸಚಿವ ಸೋಮಣ್ಣ

ಬೆಂಗಳೂರು, ಫೆ.11- ಪಟ್ಟಣ ಪ್ರದೇಶಗಳಲ್ಲಿ 3 ಲಕ್ಷದ 40 ಸಾವಿರ ಮನೆಗಳನ್ನು ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ತಿಳಿಸಿದರು. ಪ್ರಗತಿ ಪರಿಶೀಲನಾ ಸಭೆಗೂ ಮುನ್ನ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರು ಮನೆ ಕಟ್ಟಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ನೀಡುವ ಅನುದಾನದ ಜತೆಗೆ ಬ್ಯಾಂಕುಗಳು ಕೊಡುವ ಸಾಲ ಸೌಲಭ್ಯ ಮುಖ್ಯವಾಗಿರುತ್ತದೆ. ಆದರೆ ಕೆಲವು ಬ್ಯಾಂಕ್ ಅಧಿಕಾರಿಗಳು ಸಾಲ ನೀಡದೆ ಸುಮ್ಮನೆ ಅಲೆದಾಡಿಸುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಳಚೆ ಪ್ರದೇಶದಲ್ಲಿ ಸರ್ಕಾರ ಈಗಾಗಲೇ ನಿವೇಶನ ಹಕ್ಕುಪತ್ರ ನೀಡಿದೆ. ಈ ಹಕ್ಕುಪತ್ರವನ್ನೇ ಆಧಾರವಾಗಿಟ್ಟುಕೊಂಡು ಬ್ಯಾಂಕಿನವರು ಸಾಲ ನೀಡಬೇಕು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಇಂದು ಬ್ಯಾಂಕ್ ಅಧಿಕಾರಿಗಳ ಜತೆ ಸಭೆ ನಡೆಸಿ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾಗಳು ಬಡವರಿಗೆ ಮನೆ ನಿರ್ಮಿಸಲು 2 ಲಕ್ಷದ 70 ಸಾವಿರ ಅನುದಾನ ನೀಡುತ್ತವೆ. ಉಳಿದ 2 ಲಕ್ಷದಷ್ಟು ಹಣವನ್ನು ಬ್ಯಾಂಕಿನವರು ನೀಡಿದರೆ ಸಾಕು. ಮನೆಯನ್ನು ನಿರ್ಮಿಸಿಕೊಳ್ಳಲು ಅನುಕೂಲವಾಗುತ್ತದೆ ಎಂದು ಹೇಳಿದರು. ಸರ್ಕಾರಕ್ಕೆ ಆರ್ಥಿಕ ಕೊರತೆ ಇದೆ ಎಂಬುದು ಮುಖ್ಯವಲ್ಲ ಅಥವಾ ಖಜಾನೆ ಭರ್ತಿಯಾಗಿದೆ ಎಂಬುದೂ ಚರ್ಚಿತ ವಿಷಯವಲ್ಲ. ಇರುವ ಹಣದಲ್ಲೇ ಶಿಸ್ತುಬದ್ಧವಾಗಿ ಯೋಜನೆ ಅನುಷ್ಟಾನ ಮಾಡುವುದು ಮುಖ್ಯ ಎಂದು ಅಭಿಪ್ರಾಯಪಟ್ಟರು.

ಮುಂದಿನ ತಿಂಗಳು ಮಂಡನೆಯಾಗುವ ಬಜೆಟ್‍ನಲ್ಲಿ ಹೊಸದಾಗಿ ಏನನ್ನು ಕೇಳುವುದಿಲ್ಲ. ಈಗಾಗಲೇ ಮುಖ್ಯಮಂತ್ರಿಗಳಿಗೆ ಎಲ್ಲವನ್ನು ವಿವರಿಸಲಾಗಿದೆ. ನಮ್ಮ ಇಲಾಖೆಗೆ ಅವರು ವಿಶೇಷ ಒತ್ತು ಕೊಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬೆಂಗಳೂರು ವ್ಯಾಪ್ತಿಯಲ್ಲಿ ಮನೆ ಕಟ್ಟಿಕೊಳ್ಳುವ ಎಸ್‍ಸಿ-ಎಸ್‍ಟಿ ಸಮುದಾಯದವರಿಗೆ ಮೂರೂವರೆ ಲಕ್ಷ ಅನುದಾನವನ್ನು ಸರ್ಕಾರವೇ ನೀಡುತ್ತದೆ. ಬೇರೆಯವರಿಗೆ ಒಂದೂವರೆ ಲಕ್ಷ ನೀಡಲಾಗುತ್ತದೆ. ಉಳಿದ ಹಣವನ್ನು ಅವರೇ ಹಾಕಿಕೊಂಡು ಮನೆ ಕಟ್ಟಬೇಕು ಎಂದು ಹೇಳಿದರು.

ಬಾಲ್ಕಿ ವಿಧಾನಸಭಾ ಕ್ಷೇತ್ರದಲ್ಲಿ ವಸತಿ ಯೋಜನೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಡವರು ಮತ್ತು ಅರ್ಹರಿಗೆ ಅನ್ಯಾಯವಾಗಬಾರದೆಂಬುದು ನಮ್ಮ ಕಳಕಳಿಯೇ ಹೊರತು ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಕೈಲಾಗದವರು ಮೈ ಪರಚಿಕೊಂಡರು ಎಂಬಂತೆ ಶಾಸಕ ಈಶ್ವರ್ ಖಂಡ್ರೆ ಅವರು ಇದರ ಬಗ್ಗೆ ಏಕೆ ಇಷ್ಟೊಂದು ತಲೆ ಕೆಡಿಸಿಕೊಂಡಿದ್ದಾರೆ ಎಂಬುದು ನನಗೆ ಅಥರ್ವಾಗುತ್ತಿಲ್ಲ.

ಇದರಲ್ಲಿ ಸಾಕಷ್ಟು ಅಕ್ರಮ ನಡೆದಿದೆ ಎಂದು ದೂರು ಬಂದಿತ್ತು. ಹೀಗಾಗಿ ಕ್ರಮ ತೆಗೆದುಕೊಂಡಿದ್ದೇನೆ ಎಂದು ಸಮರ್ಥಿಸಿಕೊಂಡರು. ಜಿಲ್ಲಾಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಅಕ್ರಮದಲ್ಲಿ ಯಾರೇ ಭಾಗಿಯಾಗಿದ್ದರೂ ಕಾನೂನು ಪ್ರಕಾರ ಕ್ರಮ ಜರುಗಿಸಲಾಗುತ್ತದೆ ಎಂದು ಸೋಮಣ್ಣ ತಿಳಿಸಿದರು.