ಬೆಂಗಳೂರು ಆಳಲು ಏಕವಚನದಲ್ಲೇ ಆರ್.ಅಶೋಕ್-ಸೋಮಣ್ಣ ಕಚ್ಚಾಟ
ಬೆಂಗಳೂರು,ಅ.9- ಕಂದಾಯ ಸಚಿವ ಆರ್.ಅಶೋಕ್ ವಿರುದ್ಧ ಸ್ವಪಕ್ಷೀಯರೇ ತಿರುಗಿಬಿದ್ದಿದ್ದು, ಇದೀಗ ವಸತಿ ಸಚಿವ ವಿ.ಸೋಮಣ್ಣ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಎರಡು ದಿನಗಳ ಹಿಂದಷ್ಟೇ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ, ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಅವರುಗಳು ಅಶೋಕ್ ಹಸ್ತಕ್ಷೇಪಕ್ಕೆ ಕಿಡಿಕಾರಿದ್ದರು.
ಇದೀಗ ಸೋಮಣ್ಣ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದು, ಅಶೋಕ್ ಒಂದು ರೀತಿ ಬೆಂಗಳೂರಿಗೆ ಸಾಮ್ರಾಟರಂತೆ ವರ್ತಿಸುತ್ತಾರೆಂದು ನೇರವಾಗಿಯೇ ಆರೋಪಿಸಿದರು. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಣ್ಣ, ನಾನು ಬೆಂಗಳೂರಿನ ವಸತಿ ಇಲಾಖೆಗೆ ಸಂಬಂಧಿಸಿದಂತೆ ಸಭೆ ಕರೆದರೆ ಅಶೋಕ್ ಬರುವುದೇ ಇಲ್ಲ.
ಅವನು ಒಂದು ರೀತಿ ಸಾಮ್ರಾಟ್ನಂತೆ ವರ್ತಿಸುತ್ತಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ನಾನು ಕರೆದರೆ ಅಶೋಕ್ ಕೂಡ ಸಭೆಗೆ ಬರಲೇಬೇಕು. ನಾನೇನು ನನ್ನ ವೈಯಕ್ತಿಕ ಕೆಲಸಗಳಿಗೆ ಆಹ್ವಾನಿಸುವುದಿಲ್ಲ. ಬೆಂಗಳೂರಿನ ಸಚಿವರು ಮತ್ತು ಶಾಸಕರು ಬರುತ್ತಾರೆ. ಆದರೆ ಅಶೋಕ್ ಮಾತ್ರ ಬರುವುದಿಲ್ಲವೆಂದರೆ ಏನರ್ಥ ಎಂದು ಪ್ರಶ್ನಿಸಿದರು.
ನಾನು ಕೂಡ ಪಕ್ಷದಲ್ಲಿ ಅತ್ಯಂತ ಹಿರಿಯನಾಗಿದ್ದೇನೆ. ಈಗಾಗಲೇ 70 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿದೆ ನನಗೆ. ಅಶೋಕ್ ನನಗಿಂತ ಚಿಕ್ಕವರು. ನಾನು ಜವಾಬ್ದಾರಿಯುತ ಸಚಿವನಾಗಿ ಸಭೆಗೆ ಬರುವಂತೆ ಕರೆದರೆ ಬರುವುದಿಲ್ಲ. ಇದು ಯಾರಿಗೂ ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೆ ಯಡಿಯೂರಪ್ಪನವರು ಸಿಎಂ ಆಗಿದ್ದ ವೇಳೆ ಅಶೋಕ್ ಅವರು ಉಸ್ತುವಾರಿ ಸಚಿವರಾಗಿದ್ದರು. ತಮ್ಮ ಅಧಿಕಾರಾವಧಿಯಲ್ಲಿ ನಗರಕ್ಕೆ ಅವರದೇ ಆದ ಕೊಡುಗೆಗಳನ್ನು ಕೊಟ್ಟಿರಬಹುದು. ಆದರೆ ಹಿಂದೆ ನಾನು ಸಚಿವನಾಗಿದ್ದ ವೇಳೆ ನಗರಕ್ಕೆ ನನ್ನದೇ ಆದ ಕೊಡುಗೆಗಳನ್ನು ಕೊಟ್ಟಿದ್ದೇನೆ. ಅದನ್ನು ಯಾರೊಬ್ಬರು ಮರೆಯಬಾರದೆಂದು ಹೇಳಿದರು.
ಅಶೋಕ್ಗೆ ಬೆಂಗಳೂರು ಉಸ್ತುವಾರಿ ಕೊಟ್ಟರೆ ನನ್ನದೇನೂ ಅಭ್ಯಂತರವಿಲ್ಲ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ನಾನೊಂದು ಮನವಿ ಮಾಡಿದ್ದೇನೆ. ಬೆಂಗಳೂರು ಉಸ್ತುವಾರಿ ಕೊಡುವಾಗ ನನ್ನನ್ನು ಪರಿಗಣಿಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.
ಬೆಂಗಳೂರಿಗೆ ಉಸ್ತುವಾರಿ ಕೊಡುವಾಗ ಮುಖ್ಯಮಂತ್ರಿಗಳು ಜ್ಯೇಷ್ಠತೆಯನ್ನು ಪರಿಗಣಿಸಲಿ. ನಾನು ಕೂಡ ಹಿರಿಯ ಎಂಬುದನ್ನು ಮರೆಯಬಾರದು. ಬೆಂಗಳೂರಿಗೆ ಇಬ್ಬರಿಗೆ ಉಸ್ತುವಾರಿ ಕೊಟ್ಟರೆ ಆಡಳಿತಾತ್ಮಕವಾಗಿ ಹೆಚ್ಚು ಅನುಕೂಲವಾಗುತ್ತದೆ ಎಂದು ಅಭಿಪ್ರಾಯಪಟ್ಟರು. ಅಶೋಕ್ಗೆ ಕೊಡುವುದಾದರೆ ನನ್ನ ವಿರೋಧವಿಲ್ಲ. ಆದರೆ ಉಸ್ತುವಾರಿ ತೆಗೆದುಕೊಂಡವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಬೇಕೆಂದು ಹೇಳಿದರು.
ಸ್ವಾಯತ್ತ ಸಂಸ್ಥೆ: ಇನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಪ್ತರ ಮೇಲೆ ಐಟಿ ದಾಳಿ ನಡೆದಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅದು ಸ್ವಾಯತ್ತ ಸಂಸ್ಥೆಯಾಗಿದೆ. ಹಾಗಾಗಿ ನಾನು ಯಾವುದೇ ಪ್ರತಿಕ್ರಿಯೆ ಕೊಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಐಟಿ ದಾಳಿ ನಡೆಯದಂತೆ ಕೆಲವು ಸಚಿವರು ಕೇಂದ್ರ ಸಚಿವರ ಬಳಿ ಮನವಿ ಮಾಡಿಕೊಳ್ಳುತ್ತಿದ್ದಾರೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಕ್ಕೆ , ಯಾವ ಸಚಿವರು ಮನವಿ ಮಾಡಿದ್ದಾರೆ ಎಂಬುದನ್ನು ಅವರ ಬಳಿ ಮಾಹಿತಿ ಇದ್ದರೆ ಬಹಿರಂಗಪಡಿಸಲಿ ಎಂದು ಸೋಮಣ್ಣ ಬಹಿರಂಗ ಸವಾಲು ಹಾಕಿದರು.