ಬಳ್ಳಾರಿಗೆ ಬಂದ ರಾಹುಲ್ ಯಾತ್ರೆಗೆ ಸ್ವಾಗತ ಕೋರಿದ ಸಚಿವ ಶ್ರೀರಾಮುಲು

Social Share

ಬೆಂಗಳೂರು,ಅ.15- ಗಣಿ ನಾಡು ಬಳ್ಳಾರಿಯಲ್ಲಿ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆಯ ಬದಲಿಗೆ, ಪ್ರಾಯಶ್ಚಿತ ಯಾತ್ರೆ ನಡೆಸಬೇಕಿತ್ತು ಎಂದು ಸಚಿವ ಶ್ರೀರಾಮುಲು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ತಾವು ನಡೆಸುತ್ತಿರುವುದು ಭಾರತ್ ಜೋಡೋ ಯಾತ್ರೆಯಲ್ಲ. ಬದಲಿಗೆ ನಮ್ಮ ತಾಯಿಯನ್ನು ಗೆಲ್ಲಿಸಿದ್ದಕ್ಕೆ ಜನಾದೇಶವನ್ನು ದಿಕ್ಕರಿಸಿ ರಾಜೀನಾಮೆ ನೀಡಿದ್ದಕ್ಕೆ, ಅಧಿಕಾರದಲ್ಲಿ ಇದ್ದಾಗ ಏನು ಮಾಡದೆ ಮತದಾರರ ಕ್ಷಮೆ ಕೇಳುವ ಪ್ರಾಯಶ್ಚಿತ ಯಾತ್ರೆ ಮಾಡುತ್ತಿದ್ದೇವೆ ಎಂದು ಹೇಳಲು ಸಂಕೋಚ ಏಕೆ ? ಕಾಂಗ್ರೆಸ್ ನಾಯಕರೇ ಎಂದು ಪ್ರಶ್ನಿಸಿದ್ದಾರೆ.

1999ರ ಲೋಕಸಭಾ ಚುನಾವಣೆ ವೇಳೆ ಅಮೇಥಿಯಲ್ಲಿ ಸೋಲಬಹುದೆಂಬ ಭೀತಿಯಿಂದ ಬಳ್ಳಾರಿಗೆ ಬಂದು ರಾಜಕೀಯ ಪುರ್ನಜನ್ಮ ಪಡೆದಿದ್ದಕ್ಕೆ ಪ್ರತಿಯಾಗಿ, ಜಿಲ್ಲೆಯ ಜನತೆಗೆ ಚೂರಿ ಹಾಕಿ ಹೋಗಿದ್ದ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷದ ಭಾರತ್ ತೋಡೋ ಯಾತ್ರೆಗೆ ಹಾರ್ದಿಕ ಸುಸ್ವಾಗತ! ಎಂದು ವ್ಯಂಗ್ಯವಾಡಿದ್ದಾರೆ.

ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಎದ್ದೋ ಬಿದ್ದನಂತೆ ಓಡುತ್ತಾ, ರಸ್ತೆಯಲ್ಲಿ ಬಸ್ಕಿ ಹೊಡೆಯುತ್ತಾ, ಹಾವು- ಮುಂಗುಸಿಯಂತೆ ಇದ್ದರೂ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂದು ಕ್ಯಾಮರಾ ಮುಂದೆ ಫೋಜು ನೀಡುವ ಕೆಪಿಸಿಸಿ ಮಹಾನ್ ನಾಯಕರೆಲ್ಲರಿಗೂ ಸುಸ್ವಾಗತ ಎಂದು ಕಾಲೆಳೆದಿದ್ದಾರೆ.

ಬಳ್ಳಾರಿಜಿಲ್ಲೆಗೆ 3300 ಕೋಟಿ ರೂ.ಗಳ ಸುಳ್ಳು ಪ್ಯಾಕೇಜ್‍ನ್ನು ನಿಮ್ಮ ಮಾತೃಶ್ರೀ ಸೋನಿಯಾ ಗಾಂಧಿಯವರು ಘೋಷಣೆ ಮಾಡಿದ್ದರು ಎಂಬುದನ್ನು ರಾಹುಲ್ ಗಾಂಧಿಗೆ ನೆನಪಿಲು ಇಚ್ಛೇಸುತ್ತೇನೆ. ಏಕೆಂದರೆ, ನಿಮಗೆ ಮರೆವು ಜಾಸ್ತಿ.! ಎಂದು ಬಿಸಿ ಮುಟ್ಟಿಸಿದ್ದಾರೆ.

ಬಳ್ಳಾರಿ ಜಿಲ್ಲೆಗೆ ಸೋನಿಯಾಗಾಂಧಿ ಆಗಲಿ ಅಥವಾ ಕಾಂಗ್ರೆಸ್‍ನ ಕೊಡುಗೆ ಏನು ಎಂಬುದನ್ನು ಅವರ ಪುತ್ರ ರಾಹುಲ್‍ಗಾಂಧಿ ಅವರೇ ತಮ್ಮ ಭಾಷಣದಲ್ಲಿ ಹೇಳಬೇಕು. ದೇಶ ಬೆಸೆಯುತ್ತೇನೆ ಎಂದು ಹೊರಟಿರುವ ನಿಮಗೆ ಜಿಲ್ಲೆಯ ಜನರೇ ಪಾಠ ಕಲಿಸಲಿದ್ದಾರೆ ಎಚ್ಚರಿಕೆ ಕೊಟ್ಟರು.

ಬಳ್ಳಾರಿ ಪಾದಯಾತ್ರೆ ನಡೆಸಿ ಮುಖ್ಯಮಂತ್ರಿ ಆದವರೂ ಕೂಡ ಜಿಲ್ಲೆಯ ಅಭಿವೃದ್ಧಿಗೆ ನಯಾಪೈಸೆ ಹಣ ಕೊಡದೆ, ಈಗ ಯಾವ ಮುಖ ಇಟ್ಟುಕೊಂಡು ಜನರ ಮುಂದೆ ಭಾಷಣ ಮಾಡುತ್ತಾರಾ? ನಮ್ಮ ಜನ ಸ್ವಾಭಿಮಾನಿಗಳು. ಎಲ್ಲದಕ್ಕೂ ಹೌದು ಹುಲಿಯಾ, ಎನ್ನುವವರಲ್ಲ ಅಥವಾ ಟಗರು ಟಗರು ಎಂದು ಜೈಕಾರ ಹಾಕುವವರೂ ಅಲ್ಲ ಎಂದು ಪರೋಕ್ಷವಾಗಿ ಸಿದ್ದರಾಮಯ್ಯನವರ ವಿರುದ್ದವೂ ಗುಡುಗಿದ್ದಾರೆ.

ಕಾಂಗ್ರೆಸ್ ಎಂದರೆ ಸುಳ್ಳು ಭರವಸೆ ನೀಡುವ ರಾಜಕೀಯ ಪಕ್ಷ ಎಂಬುದು ಇತಿಹಾಸದಿಂದಲೇ ಋಜುವಾತಾಗಿದೆ. ಲೋಕಸಭಾ ಉಪ ಚುನಾವಣೆಯಲ್ಲಿ ಗೆದ್ದಾಗಲೂ ಎಂದಿನಂತೆ ಮತ್ತೆ ಮತದಾರರಿಗೆ ಅದೇ ಮೋಸ, ವಂಚನೆ ಜನತೆಯ ಮೂಗಿಗೆ ತುಪ್ಪ ಸವರಿದ್ದು. ಈಗ ಭಾರತ್ ತೋಡೋ ನಾಟಕ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ಕಾಲ ಬದಲಾಗಿದೆ. ಸುಳ್ಳಿನ ಮೇಲೆ ರಾಜಕೀಯ ಮಾಡುವುದು, ಸಂತೆ ಭಾಷಣ ಮಾಡುವುದರಿಂದ ಮೋಡಿ ಮಾಡಲು ಸಾಧ್ಯವಿಲ್ಲ. ಬರುವ ದಿನಗಳಲ್ಲಿ ಜಿಲ್ಲೆಯಿಂದ ಕಾಂಗ್ರೆಸ್ ಪಕ್ಷದ ಬೇರುಗಳನ್ನು ಬುಡ ಸಮೇತ ಕಿತ್ತು ಹಾಕಲಿದ್ದಾರೆ ಎಂದು ಟೀಕಿಸಿದರು.

Articles You Might Like

Share This Article