ಬೆಂಗಳೂರು,ಜು.31-ಮಂಕಿಪಾಕ್ಸ್ ಸೋಂಕಿತ ದೇಶಗಳಿಂದ ಆಗಮಿಸುವ ಪ್ರಯಾಣಿಕರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲೇ ತಪಾಸಣೆಗೆ ಒಳಪಡಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸುವವರಲ್ಲಿ ರೋಗ ಲಕ್ಷಣ ಕಂಡು ಬರುವ ಪ್ರಯಾಣಿಕರನ್ನು ಪರೀಕ್ಷೆಗೊಳಪಡಿಸಲಾಗುತ್ತದೆ.
ವಿಮಾನ ನಿಲ್ದಾಣದಲ್ಲೇ ಶೀತ, ತಲೆನೋವು, ಸ್ನಾಯು ನೋವು, ಆಯಾಸ ಮತ್ತು ದುಗ್ದ ರಸ ಗ್ರಂಥಿಗಳ ಊಟ, ಚರ್ಮದ ಮೇಲೆ ಊತಗಳು ಕಾಣಿಸುವುದು ಇತ್ಯಾದಿ ಲಕ್ಷಣಗಳು ಕಂಡುಬಂದರೆ ತಪಾಸಣೆಗೊಳಪಡಿಸಲಾಗುತ್ತದೆ. ಇಂತಹ ಲಕ್ಷಣವುಳ್ಳವರನ್ನು ಪ್ರತ್ಯೇಕಿಸಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಅವರು ಟ್ವಿಟರ್‍ನಲ್ಲಿ ತಿಳಿಸಿದ್ದಾರೆ.
ಮಂಕಿಪಾಕ್ಸ್ ಹರಡುವಿಕೆ ತಡೆಯಲು ಸರ್ಕಾರ ಎಲ್ಲ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಬೆಂಗಳೂರಿಗೆ ಈ ತಿಂಗಳ ಆರಂಭದಲ್ಲಿ ಆಗಮಿಸಿದ ಇಥೋಪಿಯ ಮೂಲದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಲಕ್ಷಣಗಳು ಕಂಡುಬಂದಿದ್ದವು. ಅವರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.
ಆ ವ್ಯಕ್ತಿಯ ಪರೀಕ್ಷಾ ವರದಿಯಲ್ಲಿ ಮಂಕಿಪಾಕ್ಸ್ ನೆಗೆಟಿವ್ ದೃಢಪಟ್ಟಿದೆ. ಆದರೆ ಚಿಕನ್‍ಪಾಕ್ಸ್ ಇರುವುದು ಪತ್ತೆಯಾಗಿದೆ ಎಂದು ಸಚಿವರು ಹೇಳಿದ್ದಾರೆ.