ಬೆಂಗಳೂರು, ಜು.26- ಯಾವುದೇ ಒಂದು ಸಮುದಾಯದಿಂದ ಯಾರೇ ಒಬ್ಬರು ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಸಮುದಾಯಗಳ ವಿಶ್ವಾಸಗಳಿಸಬೇಕು. ಆ ವ್ಯಕ್ತಿಯ ನಾಯಕತ್ವದ ಮೇಲೆ ಜನರಿಗೆ ನಂಬಿಕೆ ಇರಬೇಕು. ಆದರೆ, ಜಾತಿ ವರ್ಗೀಕರಣ ಮಾಡಬೇಕಾಗಿಲ್ಲ. ಯಾವುದೇ ಒಂದು ಸಮುದಾಯಕ್ಕೆ ನೋವಾಗುವ ರೀತಿ ಯಾರೂ ಕೂಡ ಹೇಳಿಕೆ ನೀಡಬಾರದು ಎಂದರು.
ಒಕ್ಕಲಿಗ ಸಮುದಾಯದವರು ಕೃಷಿಕರು, ದೇಶದ ಬೆನ್ನೆಲುಬು. ಎಲ್ಲರೊಂದಿಗೆ ವಿಶ್ವಾಸದಿಂದ ಬೆರೆತು ತಮ್ಮ ಕಾಯಕದೊಂದಿಗೆ ಜೀವನ ಸಾಗಿಸುವ ಸಮುದಾಯವದು. ಸಚಿವರಾಗಿದ್ದವರು ಇಂತಹ ಹೇಳಿಕೆ ನೀಡುವ ಬಗ್ಗೆ ವಿಚಾರ ಮಾಡಬೇಕಿತ್ತು ಎಂದು ಮಾಜಿ ಸಚಿವ ಜಮೀರ್ ಅಹಮ್ಮದ್‍ಖಾನ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದರು.
ಕಾಂಗ್ರೆಸ್‍ನವರು ಈಗ ಮೌನ ಪ್ರತಿಭಟನೆ ಮಾಡುತ್ತಿದ್ದಾರೆ. 54 ವರ್ಷದ ಆಡಳಿತ ನಡೆಸಿದಾಗ ಸಿಬಿಐ, ಐಟಿ, ಇಡಿ ಇರಲಿಲ್ಲವೆ? ಆಗ ವಿಚಾರಣೆ ಮಾಡಿಲ್ಲವೆ ಎಂದು ಪ್ರಶ್ನಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಎಂಟತ್ತು ಗಂಟೆಗಳ ಕಾಲ ತನಿಖೆ ಮಾಡಿರಲಿಲ್ಲವೆ? ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರನ್ನು ಆಗ ಗಡಿಪಾರು ಮಾಡಿದಾಗ ಸಿಬಿಐ ಚೆನ್ನಾಗಿ ಕೆಲಸ ಮಾಡುತ್ತಿತ್ತೆ? ಕಾಂಗ್ರೆಸ್‍ನ ದ್ವಿಮುಖ ನೀತಿಯನ್ನು ಜನರು ಒಪ್ಪುವುದಿಲ್ಲ ಎಂದು ಹೇಳಿದರು.
ಯಾವುದೇ ತನಿಖಾ ಸಂಸ್ಥೆಯಲ್ಲಿ ತಪ್ಪು ಕೇಸು ದಾಖಲಾಗುವುದಿಲ್ಲ. ಹಾಗೊಂದು ವೇಳೆ ಆದರೂ ನ್ಯಾಯಾಂಗ ವ್ಯವಸ್ಥೆ ಇದೆ. ನಮ್ಮದು ಜನರಿಗೋಸ್ಕರ ಇರುವ ಪಕ್ಷ. ರಾಜ್ಯ ಸರ್ಕಾರಕ್ಕೆ ಮೂರು ವರ್ಷ ತುಂಬುತ್ತಿದೆ. ಕೋವಿಡ್‍ನಿಂದಾಗಿ ಎರಡು ವರ್ಷಗಳ ಕಾಲ ಕಾರ್ಯಕ್ರಮ ಮಾಡಲು ಸಾಧ್ಯವಾಗಿರಲಿಲ್ಲ. ಕೋವಿಡ್ ಮುಗಿಯುವ ಹಂತ ತಲುಪಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರ್ಣಗೊಳಿಸುತ್ತಿರುವ ಹಿನ್ನೆಲೆಯಲ್ಲಿ ಜನೋತ್ಸವ ಆಚರಣೆ ಮಾಡುತ್ತಿದ್ದೇವೆ ಎಂದು ಹೇಳಿದರು.
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಪ್ರಬಲವಾಗಿಲ್ಲ ಎಂಬ ಪ್ರತಿಪಕ್ಷಗಳ ಟೀಕೆಗೆ ಜನೋತ್ಸವ ಸಮಾವೇಶದ ಮೂಲಕ ಉತ್ತರ ನೀಡಲಾಗುವುದು ಎಂದರು.