ಕೊರೊನಾ 3ನೇ ಅಲೆ, ಸೋಂಕಿತರಿಗೆ ಚಿಕಿತ್ಸೆ ನೀಡಲು ಸನ್ನದ್ಧ : ಸಚಿವ ಸುಧಾಕರ್

Social Share

ಬೆಂಗಳೂರು,ಜ.17-ರಾಜ್ಯದಲ್ಲಿ 3ನೇ ಕೋವಿಡ್ ಅಲೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾವುನೋವು ಹೆಚ್ಚಾಗದಂತೆ ಸೋಂಕಿತರಿಗೆ ಅಗತ್ಯವಾದ ಚಿಕಿತ್ಸೆ ಕೊಡಿಸಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಹೆಮ್ಮಾರಿಯನ್ನು ತಡೆಗಟ್ಟಲು ಏನೆಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕೋ ಸರ್ಕಾರ ಎಲ್ಲವನ್ನು ತೆಗೆದುಕೊಂಡಿದೆ. ಜನರ ಆರ್ಥಿಕ ಚಟುವಟಿಕೆಗಳು ಮತ್ತು ಸಾವುನೋವು ಸಂಭವಿಸದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿರುವುದಾಗಿ ತಿಳಿಸಿದರು.
ಹೆಚ್ಚು ಕೋವಿಡ್ ಟೆಸ್ಟ್‍ಗಳನ್ನು ನಡೆಸಿದಾಗ ಸಹಜವಾಗಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತವೆ. ಬೆಂಗಳೂರಿನಲ್ಲಿ ನಿಧಾನವಾಗಿ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿರುವುದು ಸಮಾಧಾನಕರ ಸಂಗತಿ ಎಂದರು.
ಡಿಸೆಂಬರ್‍ನಿಂದ ಫೆಬ್ರವರಿ ಅಂತ್ಯದವರೆಗೆ ಜ್ವರದ ಅಧಿವ ಹೆಚ್ಚಾಗಿರುತ್ತದೆ. ಪ್ರಸ್ತುತ ರಾಜ್ಯದಲ್ಲಿ ಕಾಣಿಸಿಕೊಂಡಿರುವ ಶೀತ, ಕೆಮ್ಮು, ನೆಗಡಿ, ಜ್ವರ ಇದಕ್ಕೂ ಕೋವಿಡ್‍ಗೂ ಸಂಬಂಧವಿಲ್ಲ. ಸಾರ್ವಜನಿಕರು ಅನಗತ್ಯವಾಗಿ ವದಂತಿಗಳಿಗೆ ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದರು.
ನಮಗೆ ಜೀವನದ ಜೊತೆಗೆ ಜೀವವೂ ಸಹ ಉಳಿಯಬೇಕು. ಸಾವುನೋವು ಹೆಚ್ಚು ಸಂಭವಿಸಬಾರದು ಎಂಬುದು ಸರ್ಕಾರದ ಉದ್ದೇಶ. ಜನರ ಆರ್ಥಿಕ ಚಟುವಟಿಕೆಗಳಿಗೆ ತೊಂದರೆಯಾಗದಂತೆ ಕೊರೊನಾ ಕಟ್ಟಿ ಹಾಕಲು ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಅಭಿಪ್ರಾಯಪಟ್ಟರು.
ನಮ್ಮ ಸರ್ಕಾರ ಪ್ರಾರಂಭದಿಂದಲೂ ಕೊರೊನಾ ನಿಯಂತ್ರಣಕ್ಕೆ ಹಲವಾರು ರೀತಿಯ ಕ್ರಮಗಳನ್ನು ತೆಗೆದುಕೊಂಡಿತ್ತು. ಮುಖ್ಯಮಂತ್ರಿ ಬೊಮ್ಮಾಯಿ ಅವರು ಸಾಕಷ್ಟು ಬಾರಿ ಯೋಚಿಸಿ ಜನರಿಗೆ ತೊಂದರೆಯಾಗದಂತೆ ನಿಯಮಗಳನ್ನು ರೂಪಿಸಿದ್ದಾರೆ.
ಹೆಚ್ಚುತ್ತಿರುವ ಕೋವಿಡ್ ಸೋಂಕು ತಪ್ಪಿಸಲು ಕೆಲವು ನಿಬಂಧನೆಗಳನ್ನು ಹಾಕುವುದು ಅನಿವಾರ್ಯವಾಗಿದೆ. ಇದು ಒಬ್ಬರಿಂದ ಒಬ್ಬರಿಗೆ ವೇಗವಾಗಿ ಹಬ್ಬುವುದರಿಂದ ಇಂಥ ಕ್ರಮಗಳು ಅನಿವಾರ್ಯ. ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಕೋವಿಡ್ ನಿಯಂತ್ರಣದಲ್ಲಿ ಸಾಕಷ್ಟು ಮುಂದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇಂದು ಮುಖ್ಯಮಂತ್ರಿ ಅವರು ಸಚಿವರು ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಜೊತೆ ಸಭೆ ನಡೆಸಲಿದ್ದಾರೆ. ಈಗಿರುವ ನಿಯಮಗಳ ಜೊತೆ ರಾತ್ರಿ ಕಫ್ರ್ಯೂ ಸೇರಿದಂತೆ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ ಎಂದರು.
# ಇಬ್ಬರ ಅಮಾನತು:
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಮಲ್ಲಾಪುರ ಮತ್ತು ಬೋಚಿದಾಳದಲ್ಲಿ ಮೂರು ಮಕ್ಕಳು ಸಾವನ್ನಪ್ಪಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನು ಅಮಾನತುಪಡಿಸಲಾಗಿದೆ.
ಈ ಪ್ರಕರಣದ ಬಗ್ಗೆ ತನಿಖೆ ನಡೆಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಎರಡು ದಿನದ ಒಳಗೆ ವರದಿ ನೀಡಲು ಸೂಚನೆ ಕೊಡಲಾಗಿದೆ. ವರದಿ ಬಂದ ನಂತರ ಸತ್ಯಾಂಶ ತಿಳಿಯಲಿದೆ. ತಪ್ಪಿತಸ್ಥರ ವಿರುದ್ಧ ಮತ್ತಷ್ಟು ಕ್ರಮ ತೆಗೆದುಕೊಳ್ಳುವುದಾಗಿ ಸುಧಾಕರ್ ತಿಳಿಸಿದರು.

Articles You Might Like

Share This Article