ಬೆಂಗಳೂರು, ಜ.10- ರಾಜ್ಯದಲ್ಲಿ ಜನರಿಗೊಂದು, ರಾಜಕಾರಣಿಗಳೊಂದು ಕಾನೂನು ಆಗುವುದಿಲ್ಲ. ಎಲ್ಲರಿಗೂ ಒಂದೇ ಕಾನೂನು ಅನ್ವಯವಾಗಲಿದೆ. ಹೀಗಾಗಿ ಕಾಂಗ್ರೆಸ್ ನಡೆಸುತ್ತಿರುವ ಪಾದಯಾತ್ರೆಗೆ ಸಂಬಂಧಿಸಿದಂತೆ ಸರ್ಕಾರ ಕಾನೂನು ವ್ಯಾಪ್ತಿಯಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ವೈದ್ಯಕೀಯ ಹಾಗೂ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಅಟಲ್ ಬಿಹಾರಿ ವಾಜಪೇಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, 60 ವರ್ಷ ಮೇಲ್ಪಟ್ಟ ಅಸ್ವಸ್ಥತೆ ಹೊಂದಿರುವವರಿಗೆ ಬೂಸ್ಟರ್ ವ್ಯಾಕ್ಸಿನ್ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಜ್ಯದ ಜನರ ಆರೋಗ್ಯದ ಹಿತವನ್ನು ಬಲಿಕೊಟ್ಟು ಸೋಂಕು ಹೆಚ್ಚಳಕ್ಕೆ ಅವಕಾಶ ನೀಡುವಂತೆ ಪಾದಯಾತ್ರೆ ಮಾಡಲಾಗುತ್ತಿದೆ. ಕೇವಲ ರಾಮನಗರ ಜಿಲ್ಲೆಯ ಜನರು ಪಾದಯಾತ್ರೆಯಲ್ಲಿ ಪಾಲ್ಗೊಂಡಿಲ್ಲ. ರಾಜ್ಯದ ಎಲ್ಲ ಜಿಲ್ಲೆಗಳಿಂದ ಜನರನ್ನು ಕರೆಸಿ ಪಾದಯಾತ್ರೆ ನಡೆಸುತ್ತಿದ್ದಾರೆ.
ನಿಯಮವನ್ನು ಗಾಳಿಗೆ ತೂರಿ ಪಾದಯಾತ್ರೆ ಮಾಡುತ್ತಿರುವುದರಿಂದ ಒಂದೆರಡು ದಿನಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಆರೋಗ್ಯಾಧಿಕಾರಿಗಳು ಕೋವಿಡ್ ಪರೀಕ್ಷೆ ಮಾಡಲು ಅವಕಾಶ ಕೊಡದೆ ನಿಂದಿಸಿ ಕಳುಹಿಸಿದ್ದಾರೆ. ಇದು ಅವರ ಕೆಟ್ಟ ಸಂಸ್ಕøತಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು.
ಪ್ರಜಾಪ್ರಭುತ್ವದ ಮೂಲ ಆಶಯವನ್ನೇಧಿಕ್ಕರಿಸಿದ್ದಾರೆ. ರಾಜ್ಯದ ಜನರ ಹಿತ ಕಾಪಾಡುವುದು ಕೇವಲ ಆಡಳಿತ ಪಕ್ಷಕ್ಕಷ್ಟೇ ಅಲ್ಲ, ವಿರೋಧ ಪಕ್ಷದ ಪಾತ್ರವೂ ಅಷ್ಟೇ ಮುಖ್ಯ. ನಿನ್ನೆ ರಾಜ್ಯದಲ್ಲಿ 12 ಸಾವಿರಕ್ಕೂ ಹೆಚ್ಚು ಕೋವಿಡ್ ಸೋಂಕು ದೃಢಪಟ್ಟಿದೆ. ಬೆಂಗಳೂರಿನಲ್ಲಿ 9 ಸಾವಿರಕ್ಕೂ ಹೆಚ್ಚು ಕೋವಿಡ್ ಸೋಂಕು ಪತ್ತೆಯಾಗಿವೆ.
ರಾಜ್ಯದಲ್ಲಿ ಕೋವಿಡ್ ಆಕ್ಟೀವ್ ಕೇಸ್‍ಗಳ ಪ್ರಮಾಣ 50 ಸಾವಿರಕ್ಕೇರಿದೆ. ನೆರೆಯ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲೂ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ಆದರೂ ಕೋವಿಡ್ ಸಂಖ್ಯೆ ಹೆಚ್ಚಳ ಬಿಜೆಪಿ ಸೃಷ್ಟಿ ಎಂದು ಆರೋಪ ಮಾಡಿರುವುದು ಸರಿಯಲ್ಲ. ಇದು ನಮಗೆ ನೋವಾಗುತ್ತದೆ ಎಂದರು.
ಕೇಂದ್ರ ಸರ್ಕಾರದ ಮಾರ್ಗಸೂಚಿಗೆ ಅನುಗುಣವಾಗಿ ರಾಜ್ಯದಲ್ಲಿ ನಿಯಮಗಳನ್ನು ರೂಪಿಸಲಾಗಿದ್ದು, ಎಲ್ಲರೂ ಪಾಲಿಸಬೇಕು ಎಂದು ತಿಳಿಸಿದರು.
ಎರಡನೆ ಡೋಸ್ ಲಸಿಕೆ ಪಡೆದ 9 ತಿಂಗಳ ಬಳಿಕ ಬೂಸ್ಟರ್ ಡೋಸ್ ತೆಗೆದುಕೊಳ್ಳಬೇಕು. ಮೊದಲೆರಡು ಡೋಸ್ ಲಸಿಕೆ ಯಾವುದನ್ನು ಪಡೆಯಲಾಗಿರುತ್ತದೆಯೋ ಅದೇ ಲಸಿಕೆಯನ್ನು ಬೂಸ್ಟರ್ ಡೋಸ್ ಆಗಿ ಪಡೆಯಬೇಕು ಎಂದು ಹೇಳಿದರು.
ಇನ್ನಾರು ದಿನ ಕಳೆದರೆ ರಾಜ್ಯದಲ್ಲಿ ಲಸಿಕೆ ಆರಂಭಿಸಿ ಒಂದು ವರ್ಷ ತುಂಬಲಿದೆ. ವಿಶ್ವದಲ್ಲಿಯೇ ಭಾರತ ಲಸಿಕೆ ನೀಡಿಕೆಯಲ್ಲಿ ಅಗ್ರ ಸ್ಥಾನದಲ್ಲಿದೆ. ರಾಜ್ಯವೂ ಕೂಡ ಮುಂಚೂಣಿಯಲ್ಲಿ ಲಸಿಕಾಕರಣ ಕೈಗೊಂಡಿದೆ. ಈಗಾಗಲೇ ಮಕ್ಕಳಿಗೆ ಶೇ.50ರಷ್ಟು ಲಸಿಕೆ ನೀಡಲಾಗಿದೆ. ಇದಕ್ಕಾಗಿ ಆರೋಗ್ಯ ಇಲಾಖೆಯ ಅಕಾರಿ, ಸಿಬ್ಬಂದಿಗಳಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.
