“ಡಿಸೆಂಬರ್ ಅಂತ್ಯದೊಳಗೆ 438 ನಮ್ಮ ಕ್ಲಿನಿಕ್‍ ಆರಂಭ”

Social Share

ಬೆಂಗಳೂರು,ಸೆ.19-ಬೆಂಗಳೂರು ಸೇರಿದಂತೆ ನಗರಪ್ರದೇಶಗಳಲ್ಲಿ ಬಡವರು ಮತ್ತು ದುರ್ಬಲ ವರ್ಗದವರು ವಾಸಿಸುವ ಪ್ರದೇಶಗಳಲ್ಲಿ 438 ನಮ್ಮ ಕ್ಲಿನಿಕ್‍ಗಳನ್ನು ಡಿಸೆಂಬರ್ ಅಂತ್ಯದೊಳಗೆ ಆರಂಭಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ವಿಧಾನಪರಿಷತ್‍ನ ಪ್ರಶ್ನೋತ್ತರದ ಅವಧಿಯಲ್ಲಿ ಸದಸ್ಯರಾದ ಸಿ.ಎನ್.ಮಂಜೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಬೆಂಗಳೂರಿನಲ್ಲಿ 243 ಇತರ ಜಿಲ್ಲೆಗಳಲ್ಲಿ 195 ನಮ್ಮ ಕ್ಲಿನಿಕ್‍ಗಳನ್ನು ಒಟ್ಟು 155.77 ಕೋಟಿ ರೂ. ವೆಚ್ಚದಲ್ಲಿ ಆರಂಭಿಸಲಾಗುವುದು ಎಂದರು.

ಇದನ್ನೂ ಓದಿ : ಆಟೋ ಚಾಲಕನಿಗೆ ಹೊಡೀತು 25 ಕೋಟಿ ರೂ. ಬಂಪರ್ ಲಾಟರಿ..!

ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿವೆ. ನಗರ ಪ್ರದೇಶದ ಕೊಳಗೇರಿಗಳು ಹಾಗೂ ದುರ್ಬಲ ವರ್ಗದವರು ವಾಸಿಸುವ ಸ್ಥಳಗಳಲ್ಲಿ ಪ್ರಾಥಮಿಕ ಚಿಕಿತ್ಸೆ ಸೌಲಭ್ಯವಿಲ್ಲ. ಇದಕ್ಕಾಗಿ ನಮ್ಮ ಕ್ಲಿನಿಕ್ ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಎಲ್ಲ ಕಡೆಯೂ ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳಿವೆ. 107 ಪ್ರಾಥಮಿಕ ಚಿಕಿತ್ಸಾ ಕೇಂದ್ರಗಳು ಕೊರತೆ ಇವೆ. ಅವುಗಳನ್ನು ಶೀಘ್ರವೇ ಸ್ಥಾಪಿಸಲಾಗುವುದು ಎಂದರು.

ನಮ್ಮ ಕ್ಲಿನಿಕ್‍ಗಳಲ್ಲಿ 12 ಸೇವೆಗಳನ್ನು ಒದಗಿಸಲಾಗುತ್ತದೆ. ಆರೋಗ್ಯ ಇಲಾಖೆಯಲ್ಲಿ ಕಳೆದ ಎರಡು ವರ್ಷಗಳಿಂದ ಎರಡೂವರೆ ಸಾವಿರಕ್ಕೂ ಹೆಚ್ಚು ವೈದ್ಯರನ್ನು ನೇಮಿಸಲಾಗಿದೆ. ಬಹುತೇಕ ಎಲ್ಲಾ ಆಸ್ಪತ್ರೆಗಳಲ್ಲೂ ವೈದ್ಯರನ್ನು ನೇಮಿಸಿ ಗ್ರಾಮೀಣ ಕಡ್ಡಾಯ ಸೇವೆಯ ನಿಯಮ ಜಾರಿಗೆ ತರಲಾಗಿದೆ. 4 ಸಾವಿರ ಗುತ್ತಿಗೆ ವೈದ್ಯರನ್ನು ನೇಮಿಸಲಾಗಿದೆ ಎಂದು ವಿವರಿಸಿದರು.

ಸದಸ್ಯರಾದ ಅಬ್ದುಲ್ ಜಬ್ಬಾರ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 100 ಪ್ರಾಥಮಿಕ ಆರೋಗ್ಯ ಸೇವಾ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೇರಿಸಲಾಗಿದೆ. ಅಲ್ಲಿ ತಜ್ಞ ವೈದ್ಯರನ್ನು ನೇಮಿಸಲಾಗುತ್ತಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 24 ಗಂಟೆಯೂ ಆರೋಗ್ಯ ಸೇವೆ ಸಿಗುವಂತೆ ಕ್ರಮ ಕೈಗೊಳ್ಳಲಾಗಿದೆ. ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವ 4 ಸಾವಿರ ವೈದ್ಯರಲ್ಲಿ ಒಂದು ಸಾವಿರ ತಜ್ಞ ವೈದ್ಯರಿದ್ದಾರೆ ಎಂದು ವಿವರಿಸಿದರು. ಚಿಕಿತ್ಸಾ ವ್ಯವಸ್ಥೆಗೆ ಸಂಬಂಧಪಟ್ಟ ದೂರುಗಳನ್ನು ಇತ್ಯರ್ಥಪಡಿಸಲು ಹೊಸ ವ್ಯವಸ್ಥೆ ರೂಪಿಸಲಾಗಿದ್ದು, ಈವರೆಗೂ ಸ್ವೀಕರಿಸಲಾದ 895 ದೂರುಗಳ ಪೈಕಿ ಸೆ.17ರವರೆಗೆ 686 ದೂರುಗಳನ್ನು ಇತ್ಯರ್ಥಪಡಿಸಲಾಗಿದೆ.

ಡಯಾಲಿಸಿಸ್ ಪ್ರಮಾಣವನ್ನು 30 ಸಾವಿರದಿಂದ 60 ಸಾವಿರಕ್ಕೆ ಹೆಚ್ಚಿಸಲಾಗಿದೆ. ಎಲ್ಲಾ ತಾಲ್ಲೂಕು ಆಸ್ಪತ್ರೆಗಳಲ್ಲಿ ಲಭ್ಯವಾಗುತ್ತಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 56 ಡಯಾಗ್ನಿಸ್ಟಿಕ್ ಸೇವೆಗಳನ್ನು ಒದಗಿಸಲಾಗುತ್ತಿದೆ. ಜಿಲ್ಲಾ ಮಟ್ಟಗಳಲ್ಲಿ ತಲಾ ಒಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಆರಂಭಿಸಲಾಗುತ್ತಿದ್ದು, ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಕಾರ್ಯಾರಂಭವಾಗಿದೆ ಎಂದು ತಿಳಿಸಿದರು.

Articles You Might Like

Share This Article