ಬೆಂಗಳೂರು,ಫೆ.8- ಒಂದು ಕಾಲದಲ್ಲಿ ಹಿಂದುತ್ವದ ಅಜೆಂಡಾವನ್ನು ಕರ್ನಾಟಕದ ತುಂಬಾ ಡಂಗುರ ಸಾರುವುದಕ್ಕಾಗಿ ಸಂಘಪರಿವಾರ ಬೀದಿಗೆ ಬಿಟ್ಟ ಯುವಕರ ಪೈಕಿ ಮುಂಚೂಣಿಯಲ್ಲಿದ್ದವರೆಂದರೆ ಅನಂತಕುಮಾರ್, ಸುನಿಲ್ ಕುಮಾರ್, ನಳೀನ್ ಕುಮಾರ್, ಸಿ.ಟಿ.ರವಿ. ಬಿಜೆಪಿ ಅಧಿಕಾರಕ್ಕೆ ಬರುವುದಕ್ಕೆ ಮುನ್ನ ಕರ್ನಾಟಕದ ತುಂಬ ಉರಿಹಚ್ಚುವ ಭಾಷಣ ಮಾಡುತ್ತಿದ್ದವರೇ ಈ ನಾಲ್ವರು.
ಆದರೆ ಪ್ರಸಕ್ತ ರಾಜಕೀಯ ವಾತಾವರಣದಲ್ಲಿ ಈ ನಾಲ್ವರ ಪೈಕಿ ಸಿ.ಟಿ.ರವಿ ಹೊರತುಪಡಿಸಿ ಉಳಿದವರು ಹಿಂದುತ್ವದ ವಿಚಾರದಲ್ಲಿ ತುಟಿ ಹೊಲಿದುಕೊಂಡು ಕುಳಿತಿದ್ದಾರೆ ಎಂಬಂಥ ವಾತಾವರಣ ಕಾಣುತ್ತಿದೆ. ಇವರೆಲ್ಲರ ವಿಚಾರಧಾರೆ ಈಗ ಪ್ರಖರತೆ ಕಳೆದುಕೊಂಡಿದೆಯೇ? ಹೀಗೆಂದು ನೀವು ಭಾವಿಸಿದರೆ ಅದರಂಥ ಅಪಾಯಕಾರಿ ನಿರ್ಧಾರ ಇನ್ನೊಂದಿಲ್ಲ.
ಏಕೆಂದರೆ ಸಂಘಪರಿವಾರದ ಅಚ್ಚಗರಡಿಯಲ್ಲಿ ಬೆಳೆದು ಬಂದು ಇದ್ದಕ್ಕಿದ್ದಂತೆ ಮೌನಕ್ಕೆ ಶರಣಾಗುವ ವ್ಯಕ್ತಿಗಳೇ ಜಾತ್ಯತೀತ ಸಮಾಜಕ್ಕೆ ಬಹುದೊಡ್ಡ ಥ್ರೆಟ್ ಎಂದು ಬಹುತೇಕರಿಗೆ ಅರ್ಥವಾಗುವುದೇ ಇಲ್ಲ. ಈ ರೀತಿ ತಟ್ಟೆಂದು ಭೂಗತವಾಗುವ ವ್ಯಕ್ತಿಗಳಿದ್ದಾರಲ್ಲ ಅವರೊಂದು ಮರದೊಳಗೆ ಸದ್ದಿಲ್ಲದೇ ಸೇರುವ ಗೆದ್ದಲುಗಳಂತೆ, ದೇಹದೊಳಗೆ ಹೊಕ್ಕ ಡಯಾಬಿಟೀಸ್‍ನಂತೆ. ಸಂಘಪರಿವಾರದ ರಹಸ್ಯ ಕಾರ್ಯಸೂಚಿಗಳನ್ನು ಅತ್ಯಂತ ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ಇಳಿಸುವವರು ಇದೇ ವರ್ಗದ ಜನರು.
ಆ ಕಾರ್ಯವನ್ನು ಈಗ ಇಂಧನ ಹಾಗೂ ಕನ್ನಡ ಸಂಸ್ಕೃತಿ ಸಚಿವ ಸುನೀಲಕುಮಾರ್ ಸರ್ಕಾರದ ಒಳಗಿದ್ದುಕೊಂಡು ಸದ್ದಿಲ್ಲದೇ ಕಾರ್ಯರೂಪಕ್ಕೆ ತರುತ್ತಿದ್ದಾರೆ. ಇತ್ತೀಚೆಗೆ ಕಾರ್ಕಳದಲ್ಲಿ ನಡೆದ ಪರಶುರಾಮ ಥೀಮ್ ಪಾರ್ಕ್ ಉದ್ಘಾಟನೆ ಸಂಘ ಪರಿವಾರದ ರಹಸ್ಯ ಕಾರ್ಯಸೂಚಿಯ ಒಂದು ಭಾಗವೇ ಆಗಿತ್ತು. ತುಳುನಾಡು ಸೃಷ್ಟಿಕರ್ತನ ಸ್ಮರಣೆ ಎಂಬ ಸೋಗಿನಲ್ಲಿ ನಡೆದ ಈ ಕಾರ್ಯಕ್ರಮ ಸರ್ಕಾರದ ಖರ್ಚಿನಲ್ಲಿ ಹಿಂದುತ್ವದ ಅಜೆಂಡಾವನ್ನು ಯಶಸ್ವಿಯಾಗಿ ಬಟ್ಟಿ ಇಳಿಸಿದೆ.
ಹೌದು. ಪರಶುರಾಮ ಥೀಮ್ ಪಾರ್ಕ್ ಸಚಿವ ಸುನಿಲ್ ಕುಮಾರ್ ಅವರ ಸ್ವಂತ ಖರ್ಚಿನಲ್ಲಿ ನಡೆದ ವಿಜೃಂಭಣೆಯ ಉತ್ಸವವಲ್ಲ. ಅದಕ್ಕೆ ಅನುದಾನ ನೀಡಿದ್ದು ಪ್ರವಾಸೋದ್ಯಮ ಇಲಾಖೆ ಎಂಬುದು ಬಹುತೇಕ ಜನರಿಗೆ ಗೊತ್ತಿಲ್ಲ. ಸುಮಾರು 1.5 ಕೋಟಿ ರೂ.ನ್ನು ಈ ಥೀಮ್ ಪಾರ್ಕ್‍ಗಾಗಿ ನೀಡಿದೆ.
ಅದೇ ರೀತಿ ಕಾರ್ಯಕ್ರಮದ ಖರ್ಚು ವೆಚ್ಚ ನೋಡಿಕೊಂಡಿದ್ದು ಇದೇ ಸುನಿಲ್ ಕುಮಾರ್ ಪ್ರತಿನಿಧಿಸುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ. ಆದರೆ ಈ ಹಣದಲ್ಲಿ ಸುನೀಲ್‍ಕುಮಾರ್ ಮಾಡಿದ್ದು ಹಿಂದುತ್ವದ ಅಜೆಂಡಾದ ಅನುಷ್ಠಾನ. ಯಾವುದೇ ರಾಗ-ದ್ವೇಷಕ್ಕೆ ಒಳಗಾಗದೇ ಅಧಿಕಾರ ನಡೆಸುತ್ತೇನೆ ಎಂದು ಸಂವಿಧಾನಬದ್ಧವಾಗಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖದಲ್ಲೇ ಶಂಖನಾದ ಮಾಡುವ ಮೂಲಕ ಥೀಮ್ ಪಾರ್ಕ್ ಉದ್ಘಾಟನೆ ನಡೆಸಿದರು.
ಕಾರ್ಕಳದ ಬೈಲೂರು ಯರ್ಲಪಾಡಿಯಲ್ಲಿ ನಿರ್ಮಾಣವಾಗಿರುವ ತುಳುನಾಡ ಸೃಷ್ಟಿಕರ್ತ ಪರಶುರಾಮನ ಕಂಚಿನ ಪ್ರತಿಮೆಯನ್ನು ಒಳಗೊಂಡ ಐತಿಹಾಸಿಕ ಪರಶುರಾಮ ಥೀಮ್ ಪಾರ್ಕ್ ಅನ್ನು ಸಹಸ್ರ ಶಂಖನಾದ ಮೊಳಗುವಿಕೆಯೊಂದಿಗೆ ಕರ್ನಾಟಕ ಸರಕಾರದ ಜನಪ್ರಿಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಸವರಾಜ ಬೊಮ್ಮಾಯಿ ಅವರು ಲೋಕಾರ್ಪಣೆಗೊಳಿಸಿದ ಸಂಭ್ರಮದ ಕ್ಷಣಗಳು. pic.twitter.com/hjW6lUAWux
— Sunil Kumar Karkala (@karkalasunil) January 27, 2023
ಈ ಶಂಖನಾದ ವೈಖರಿ ಸಂಘ ಪರಿವಾರದ ಸಂಸ್ಕೃತಿ. ಅದೇ ರೀತಿ ಅಲ್ಲಿ ನಡೆದ ಕೇಸರಿ ಪಡೆಯ ಭಜನಾ ಮೆರವಣಿಗೆ ಸ್ಥಳೀಯ ಭಜರಂಗ ದಳದ ಪ್ರಭಾತ್ ಪೇರಿಯಾಗಿತ್ತು. ಅಲ್ಲಿಗೆ ಸುನೀಲ್ ಕುಮಾರ್ ಸಂಘದ ಕನಸನ್ನು ಎಷ್ಟು ಮುತುವರ್ಜಿಯಿಂದ ಸರಕಾರಿ ವೆಚ್ಚದಲ್ಲಿ ನಿಭಾಯಿಸಿದರು ನೋಡಿ !
ಇದೆಲ್ಲದಕ್ಕಿಂತ ಹೆಚ್ಚಾಗಿ ಈ ವ್ಯಕ್ತಿ ಸಚಿವನಾದ ಕ್ಷಣದಿಂದ ಹಿಂದುತ್ವದ ವಿಚಾರ ಮಾತನಾಡುವುದನ್ನು ಕಡಿಮೆ ಮಾಡಿ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯನ್ನು ಕೇಸರಿಕರಣ ಮಾಡುವ ಜವಾಬ್ದಾರಿಯನ್ನು ಮಾತ್ರ ನಡೆಸುತ್ತಲೇ ಹೋದರು. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹೆಸರಿನಲ್ಲಿ ನಡೆದ ಅಮೃತ ಭಾರತಿಗೆ ಕನ್ನಡದಾರತಿ ಅಭಿಯಾನವಂತೂ ಸಂಘ- ಪರಿವಾರದ ಗುಪ್ತ ಕಾರ್ಯಸೂಚಿಯನ್ನು ಸದ್ದಿಲ್ಲದೇ ಅನುಷ್ಠಾನಗೊಳಿಸಿತು. ಪರಿವಾರ ಭಜನೆ ಮಾಡುವ ಸ್ವತಂತ್ರ ವೀರರು ಹಾಗೂ ಸ್ಥಳಗಳನ್ನು ವಿಜೃಂಭಿಸಿದರು.

ಕಾರ್ಯಕ್ರಮ ನಡೆದ ಸ್ಥಳಗಳಿಗೆಲ್ಲ ಪರಿವಾರದ ವಿದ್ವಾಂಸರು, ವಿದೂಷಕರನ್ನು ಕರೆ ತಂದು ಭಾಷಣ ಬಿಗಿಸಿದರು. ಇದಕ್ಕೆ ಪ್ರದಾನಿ ನರೇಂದ್ರ ಮೋದಿಯವರ ಮೆಚ್ಚುಗೆಯ ಪ್ರಮಾಣ ಪತ್ರ ಬೇರೆ ಸಿಕ್ಕಿತು. ಇನ್ನು ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಂತೂ ಕನ್ನಡದ ನೆಲಮೂಲದ ಸಂಘಟನೆಗಳನ್ನು ಸಂಪೂರ್ಣವಾಗಿ ದೂರವಿಟ್ಟರು. ಈಗ ಟಿಪ್ಪು ನಿಜ ಕನಸು ನಾಟಕಕ್ಕೂ ಅನುದಾನ ನೀಡಲಾಗಿದೆಯಂತೆ. ಇದೆಲ್ಲವೂ ಶಿಕ್ಷಣದ ಕೇಸರಿಕರಣದಷ್ಟೇ ಅಪಾಯಕಾರಿಯಾದ ಸಂಸ್ಕ್ರತಿಯ ಕೇಸರಿಕರಣವಲ್ಲವೇ ?
ಕಣ್ಮನ ಸೆಳೆಯುತ್ತಿದೆ ಕಾರ್ಕಳದ ಪರಶುರಾಮ ಥೀಮ್ ಪಾರ್ಕ್.
ನೋಡಬನ್ನಿ ಒಮ್ಮೆ ಇದು ತುಳುನಾಡಿನ ಹೆಮ್ಮೆ… @ShobhaBJP @BSBommai@CTRavi_BJP #ಪರಶುರಾಮ_ಥೀಮ್_ಪಾರ್ಕ್ #ಸೃಷ್ಟಿಕರ್ತನ_ಪ್ರತಿಮೆ pic.twitter.com/dM4qZQcFr3— Sunil Kumar Karkala (@karkalasunil) January 28, 2023
ಅಧಿಕಾರ ಇಲ್ಲದಿದ್ದಾಗ ಭಾಷಣ. ಅಧಿಕಾರಕ್ಕೆ ಬಂದಾಗ ಅಜೆಂಡ ಅನುಷ್ಠಾನ ಮಾಡುವುದೇ ಪರಿವಾರದ ಮುದ್ದಿನ ಕೂಸುಗಳ ಕಾರ್ಯವೈಖರಿ.
Minister, Sunil Kumar, Hindutva, BJP, government, RSS,