ಬೆಂಗಳೂರು,ಸೆ.19-ಕೆಪಿಟಿಸಿಎಲ್ ಸೇರಿದಂತೆ ವಿವಿಧ ವಿದ್ಯುತ್ ಪ್ರಸರಣ ನಿಗಮಗಳು 2002ರಿಂದ ಈವರೆಗೂ 38,973 ಕೋಟಿ ರೂ. ಸಾಲ ಮಾಡಿದ್ದು, ಅದು 2040ರ ವೇಳೆಗೆ ತೀರುವಳಿಯಾಗಲಿದೆ ಎಂದು ಇಂಧನ ಸಚಿವ ವಿ.ಸುನೀಲ್‍ಕುಮಾರ್ ತಿಳಿಸಿದರು.
ವಿಧಾನಪರಿಷತ್‍ನ ಪ್ರಶ್ನೋತ್ತರ ಅವಧಿಯಲ್ಲಿ ಭಾರತಿ ಶೆಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಪಿಟಿಸಿಎಲ್ 9,590.99 ಕೋಟಿ, ಬೆಸ್ಕಾಂ- 13,613.23 ಕೋಟಿ, ಚೆಸ್ಕಾಂ 3536 ಕೋಟಿ, ಮೆಸ್ಕಾಂ- 1282 ಕೋಟಿ, ಹೆಸ್ಕಾಂ- 7480 ಕೋಟಿ, ಜೆಸ್ಕಾಂ 3472 ಕೋಟಿ ಸಾಲ ಪಡೆದಿವೆ. ಇವುಗಳಿಗೆ ಬಡ್ಡಿ ಮತ್ತು ಅಸಲು ಪಾವತಿ ಪ್ರಕ್ರಿಯೆ ನಿರಂತರವಾಗಿ ಮುಂದುವರೆದಿದೆ.ವಿದ್ಯುತ್ ವಿತರಣಾ ವ್ಯವಸ್ಥೆಗಾಗಿ ಹೆಸ್ಕಾಂಗಳು ರಚನೆಯಾದ ಬಳಿಕ ಸಾಲ ಮಾಡಿಯೇ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ ಎಂದರು.
ವಿದ್ಯುತ್ ಸರಬರಾಜಿಲ್ಲಿ ಶೇ.60ರಷ್ಟು ರೈತರ ಪಂಪ್‍ಸೆಟ್‍ಗೆ ಉಚಿತವಾಗಿ ನೀಡಲಾಗುತ್ತಿದೆ. 38 ಲಕ್ಷ ರೈತರಿಗೆ ವಿದ್ಯುತ್ ಪೂರೈಸಲು 13 ಸಾವಿರ ಕೋಟಿ ರೂ.ಗಳ ಸಬ್ಸಿಡಿ ನೀಡಲಾಗುತ್ತಿದೆ. ಭಾಗ್ಯಜ್ಯೋತಿ ಯೋಜನೆಯಡಿ ವಿದ್ಯುತ್ ವಿತರಣೆಗೆ 700 ಕೋಟಿ ರೂ. ಸಬ್ಸಿಡಿ ನೀಡಲಾಗುತ್ತಿದೆ. ಐಬಿ ಸೆಟ್‍ಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ. ಹೊಸದಾಗಿ 6.3 ಲಕ್ಷ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದರು.
ಇದನ್ನೂ ಓದಿ : ಆಟೋ ಚಾಲಕನಿಗೆ ಹೊಡೀತು 25 ಕೋಟಿ ರೂ. ಬಂಪರ್ ಲಾಟರಿ..!
ಸರಬರಾಜು ಮತ್ತು ವಿತರಣೆಯಲ್ಲಿನ ನಷ್ಟ ತಪ್ಪಿಸಲು ಭೂ ಗರ್ಭದಲ್ಲಿ ಕೇಬಲ್ ಅಳವಡಿಕೆ ಮಾಡಲಾಗುತ್ತಿದೆ. ಆದಾಯ ಹೆಚ್ಚಿಸುವ ಸಲುವಾಗಿ ಭೂಗರ್ಭದಲ್ಲಿ ವಿದ್ಯುತ್ ಜೊತೆ ಮತ್ತೊಂದು ಕೇಬಲ್ ಅಳವಡಿಕೆಗೂ ಅವಕಾಶ ಮಾಡಿಕೊಡಲಾಗಿದೆ ಎಂದರು.
ಸದಸ್ಯ ಗೋವಿಂದರಾಜು ಅವರು ಕೆಲವು ಕಡೆ ಅಳವಡಿಸಲಾಗುತ್ತಿರುವ ಕೇಬಲ್‍ಗಳನ್ನು ಕೊಳವೆ ಮಾರ್ಗದಲ್ಲಿ ಮುಚ್ಚಿಡದೆ ಒಳಚರಂಡಿ ಹಾಗೂ ತೆರೆದ ಸ್ಥಳಗಳಲ್ಲಿ ಮುಕ್ತವಾಗಿ ಬಿಡಲಾಗಿದೆ. ಇದು ಅಪಾಯಕಾರಿಯಾಗಿದೆ ಎಂದು ಸಚಿವರ ಗಮನ ಸೆಳೆದಾಗ, ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು.
ಈ ಹಿಂದಿನ ಸರ್ಕಾರಗಳು ಖಾಸಗಿ ವಲಯದಿಂದ ವಿದ್ಯುತ್ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದು, ಇದರಿಂದ ವಾರ್ಷಿಕ 33 ಸಾವಿರ ಕೋಟಿ ರೂ.ಗಳ ವಿದ್ಯುತ್ ಖರೀದಿ ಮಾಡಬೇಕಾಗಿದೆ. ಹಾಗಾಗಿ ಪ್ರತಿ ವರ್ಷ ಹೊರೆ ಹೆಚ್ಚಾಗುತ್ತಿದೆ. ಒಟ್ಟಾರೆ ನಷ್ಟ ಎಷ್ಟು ಎಂಬ ಬಗ್ಗೆ ತಾವು ಶೀಘ್ರವೇ ಮಾಹಿತಿ ನೀಡುವುದಾಗಿ ಭರವಸೆ ನೀಡಿದರು.
ಸದಸ್ಯ ಶಾಂತರಾಮ್ ಬುಡ್ನಾಸಿದ್ದಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಬೆಳಗಾವಿ ಜಿಲ್ಲೆಯ ಧಾಮನೆ ಗ್ರಾಮಕ್ಕೆ ವಿದ್ಯುತ್ ಸಂಪರ್ಕಿಸಲು ಕ್ರಮ ಕೈಗೊಳ್ಳಲಾಗುವುದು. ಅರಣ್ಯ ಪ್ರದೇಶದ ಹೊರಗಿರುವ ನೇರಸ ಪಂಚಾಯ್ತಿಯ ಸಾವಿಚಹಾಳ ಗ್ರಾಮಕ್ಕೆ ಸೌರಶಕ್ತಿಯ ಮೂಲಕ ವಿದ್ಯುತ್ ಸಂಪರ್ಕ ಕಲ್ಪಿಸುವುದಾಗಿ ಭರವಸೆ ನೀಡಿದರು.