“ರೈತರಿಗೆ 7 ಗಂಟೆ ವಿದ್ಯುತ್ ಪೂರೈಕೆ ಮಾಡಲು ಸರ್ಕಾರ ಬದ್ಧ”

Social Share

ಬೆಂಗಳೂರು,ಸೆ.15- ರೈತರಿಗೆ 7 ಗಂಟೆ ವಿದ್ಯುತ್ ಪೂರೈಕೆ ಮಾಡಲು ಸರ್ಕಾರ ಬದ್ಧವಾಗಿದ್ದು, ಯಾರೂ ಕೂಡ ಆತಂಕಪಡುವ ಅಗತ್ಯವಿಲ್ಲ ಎಂದು ಇಂಧನ ಸಚಿವ ವಿ.ಸುನೀಲ್‍ಕುಮಾರ್ ವಿಧಾನಸಭೆಯಲ್ಲಿಂದು ಸ್ಪಷ್ಟಪಡಿಸಿದರು. ನಮ್ಮ ಸರ್ಕಾರ ರೈತರಿಗೆ 7 ಗಂಟೆ ವಿದ್ಯುತ್ ಪೂರೈಕೆ ಮಾಡಲು ಬದ್ಧವಾಗಿದೆ.

ಕೆಲವರು ಅನಗತ್ಯವಾಗಿ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಇದರಲ್ಲಿ ಯಾವುದೇ ಬದಲಾವಣೆ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ. ಹಾಗಾಗಿ ರೈತರು ಗೊಂದಲ್ಲಕ್ಕೀಡಾಗಬಾರದು ಎಂದು ಮನವಿ ಮಾಡಿದರು.

ಶಾಸಕ ಮಹಂತೇಶ್ ಕೌಜಲಗಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೆಇಆರ್‍ಸಿ ಮತ್ತು ಇಂಧನ ಇಲಾಖೆ ನಿಗದಿಪಡಿಸಿರುವ ಪ್ರಮಾಣದಲ್ಲಿ ವ್ಯತ್ಯಾಸವಾಗಿರಬಹುದು. ಆದರೂ ರೈತರ ಐಪಿಸೆಟ್‍ಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದೇವೆ. ರೈತರಿಗೆ ತೊಂದರೆ ಕೊಡಬೇಕೆಂಬ ಉದ್ದೇಶ ಸರ್ಕಾರಕ್ಕಿಲ್ಲ. ಹಿಂದಿನ ವ್ಯವಸ್ಥೆಯನ್ನು ಮುಂದುವರೆಸಲು ಸರ್ಕಾರ ಬದ್ಧವಾಗಿದೆ ಎಂದರು.

ಇದನ್ನೂ ಓದಿ : BIG NEWS : ಉಕ್ರೇನ್‍ ಅಧ್ಯಕ್ಷ ಝೆಲೆನ್‍ಸ್ಕಿ ಕಾರು ಅಪಘಾತ, ಗಂಭೀರ ಗಾಯ

ತೋಟದ ಮನೆಗಳಿಗೆ ವಿದ್ಯುತ್ ಪೂರೈಕೆ ಮಾಡಬೇಕೆಂಬ ಬೇಡಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ನಾವು ಹಿಂದೆ ಯಾವ ರೀತಿ ನಿಯಮಗಳಿದ್ದವೋ ಅದನ್ನು ಮುಂದುವರೆಸುತ್ತೇವೆ. ಯಾರಿಗೂ ಕೂಡ ತೊಂದರೆಕೊಡಬೇಕೆಂಬ ಉದ್ದೇಶವಿಲ್ಲ ಎಂದು ಹೇಳಿದರು.

ತೋಟದ ಮನೆಗಳಿಗೆ ಪ್ರತ್ಯೇಕವಾದ ಟಿಸಿ ಅಳವಡಿಸಿ ವಿದ್ಯುತ್ ಪೂರೈಕೆ ಮಾಡಬೇಕೆಂಬ ಚಿಂತನೆ ಇದೆ. ಇದನ್ನು ಪ್ರಾಯೋಗಿಕವಾಗಿ ಬೈಲಹೊಂಗಲ, ಜಮಖಂಡಿ ಸೇರಿದಂತೆ ಐದು ಕಡೆ ಅನುಷ್ಠಾನ ಮಾಡುತ್ತಿದ್ದೇವೆ. ಇದು ಯಶಸ್ವಿಯಾದರೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲೂ ವಿಸ್ತರಣೆ ಮಾಡುವ ಚಿಂತನೆ ಇದೆ ಎಂದರು.

ತೋಟದ ಮನೆಗಳಿಗೆ ವಿದ್ಯುತ್ ಪೂರೈಕೆ ಮಾಡುವ ಕುರಿತು ಅಂದಾಜು ಮೊತ್ತದ ಪ್ರಸ್ತಾವನೆಗೆ ವರದಿ ಸಿದ್ಧಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ವರದಿ ಬಂದ ನಂತರ ಸರ್ಕಾರ 1.29ಲಕ್ಷ ತೋಟದ ಮನೆಗಳಿಗೆ ವಿದ್ಯುತ್ ಪೂರೈಕೆಗೆ ಬದ್ಧವಾಗಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ವಿಷಯ ಪ್ರಸ್ತಾಪಿಸಿದ ಶಾಸಕರಾದ ಮಹಂತೇಶ್ ಕೌಜಲಗಿ, ಸಿದ್ದುಸವದಿ, ಮಹದೇವಪ್ಪ ಯಲವಾಡ, ಲಕ್ಷ್ಮೀಹೆಬ್ಬಾಳ್ಕರ್ ಸೇರಿದಂತೆ ಮತ್ತಿತರರು ತೋಟದ ಮನೆಗಳಿಗೆ ವಿದ್ಯುತ್ ಕಡಿತ ಮಾಡುತ್ತಿರುವುದರಿಂದ ಜನರಿಗೆ ಹಾಗೂ ಇಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಈ ಸಮಸ್ಯೆ ಪರಿಹರಿಸಬೇಕೆಂದು ಮನವಿ ಮಾಡಿದರು.

Articles You Might Like

Share This Article