ಬೆಂಗಳೂರು, ಆ.20- ನೆರೆಯಿಂದ ಜನ ಸಂಕಷ್ಟದಲ್ಲಿರುವಾಗ ಸರ್ಕಾರದ ಸಚಿವರು ಸಿನಿಮಾ ಥಿಯೇಟರ್‌ನಲ್ಲಿ ಮೋಜು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಟೀಕಿಸಿದೆ. ಟ್ವಿಟರ್‌ನಲ್ಲಿ ತನ್ನ ಆಕ್ರೋಶವನ್ನು ಹೊರ ಹಾಕಿರುವ ಕಾಂಗ್ರೆಸ್, ಶೇ.40 ಸರ್ಕಾರದ ಸಚಿವರನ್ನು ಬೇರೆಲ್ಲೂ ಹುಡುಕುವುದು ಬೇಡ. ಸಿನೆಮಾ ಥಿಯೇಟರ್‌ನಲ್ಲಿ ಹುಡುಕಿದರೆ ಸಾಕು. ರೈತರು ಅತಿವೃಷ್ಟಿ ಗೊಬ್ಬರದ ಕೊರತೆಯಂತಹ ಸಮಸ್ಯೆ ಎದುರಿಸುವಾಗ ಕೃಷಿ ಸಚಿವರು ಸಿನೆಮಾ ವೀಕ್ಷಣೆಯ ಮೋಜಿನಲ್ಲಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ರೈತರು ಸಾಯುತ್ತಿದ್ದಾರೆ, ಕೃಷಿ ಸಚಿವ ಬಿ.ಸಿ.ಪಾಟೀಲ್, ರೀಲ್ ಲೈಫ್‍ನಿಂದ ರಿಯಲ್ ಲೈಫ್‍ಗೆ ಬರುವುದು ಯಾವಾಗ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ನೆರೆಯಿಂದ ಸಂಕಷ್ಟಕ್ಕೀಡಾದ ಜನರಿಗೆ ಪರಿಹಾರವಿಲ್ಲ, ಜನಪರ ಯೋಜನೆಗಳಿಗೆ ಅನುದಾನವಿಲ್ಲ, ಶೈಕ್ಷಣಿಕ ಕ್ಷೇತ್ರಕ್ಕೆ ಹಣವಿಲ್ಲ, ಆಶಾ, ಅಂಗನವಾಡಿ ಕಾರ್ಯಕರ್ತೆಯರ ವೇತನ ಏರಿಕೆಗೆ ಹಣವಿಲ್ಲ.
ಸರ್ಕಾರಿ ಅಧಿಕಾರಿಗಳ ಕಾರು ಖರೀದಿಯ ಹಣದಲ್ಲಿ ಮಾತ್ರ ಭರ್ಜರಿ ಏರಿಕೆ ಮಾಡಲಾಗಿದೆ. ಅನಗತ್ಯ ವೆಚ್ಚ ಕಡಿತ ಎಂದಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಸಲಿ ಮುಖ ಇದು. ಪೋಪೆಟ್ ಸಿಎಂ ಅಧಿಕಾರಿಗಳಿಗೂ ಕೈಗೊಂಬೆಯಾದ್ರಾ ಎಂದು ಕಾಂಗ್ರೆಸ್ ಲೇವಡಿ ಮಾಡಲಾಗಿದೆ.
ಹಿಜಾಬ್ ವಿಷಯದಲ್ಲಿ ಕೆಲವು ವಿದ್ಯಾರ್ಥಿನಿಯರು ವರ್ಗಾವಣೆ ಪತ್ರ ಪಡೆದುಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಹೆಣ್ಣು ಮಕ್ಕಳನ್ನು ಶಿಕ್ಷಣದತ್ತ ಕರೆತರುವುದೇ ಸವಾಲು ಎಂಬಂತ ಸ್ಥಿತಿ ಇರುವಾಗ ಹೇಗಾದರೂ ಬರಲಿ, ಶಿಕ್ಷಣ ಪಡೆಯಲಿ ಎನ್ನುವಂತಿರಬೇಕಿತ್ತು ಸರ್ಕಾರ. ಆದರೆ ಶಿಕ್ಷಣ ವಿರೋಧಿ ಬಿಜೆಪಿಯ ಕೊಳಕು ರಾಜಕೀಯ ಹಿತಾಸಕ್ತಿಗೆ ಹೆಣ್ಣು ಮಕ್ಕಳು ಶಿಕ್ಷಣವಂಚಿತರಾಗುವ ಸ್ಥಿತಿ ಒದಗಿದೆ. ಭ್ರಷ್ಟ ಸರ್ಕಾರ ಕಿತ್ತುಕೊಂಡಿದ್ದು ಹಿಜಾಬ್‍ನಲ್ಲ, ಮಕ್ಕಳ ಶಿಕ್ಷಣವನ್ನು ಎಂದು ಆಕ್ರೋಶ ವ್ಯಕ್ತ ಪಡಿಸಿದೆ.