ಬೆಂಗಳೂರು,ಫೆ.23- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಸರ್ಕಾರ ಸಚಿವಾಲಯ ನೌಕರರ ಸಂಘ ನಾಳೆ ಮಧ್ಯಾಹ್ನ ಪ್ರತಿಭಟನಾ ಧರಣಿ ನಡೆಸಲಿದೆ. ವಿಧಾನಸೌಧ-ವಿಕಾಸಸೌಧ ನಡುವೆ ಇರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ನಾಳೆ ಮಧ್ಯಾಹ್ನ 1.30ಕ್ಕೆ ಮೌನ ಪ್ರತಿಭಟನೆ ನಡೆಸಲು ಸಂಘ ನಿರ್ಧರಿಸಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಸಂಘದ ಅಧ್ಯಕ್ಷ ಡಿ.ಗುರುಸ್ವಾಮಿ, ಸಚಿವಾಲಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು. ಅವಧಿ ಮೀರಿದ ನಿಯೋಜನೆ ಅಥವಾ ಅನ್ಯಕಾರ್ಯ ನಿಮಿತ್ತ ಕಾರ್ಯ ನಿರ್ವಹಿಸುತ್ತಿರುವವರನ್ನು ಮಾತೃ ಇಲಾಖೆಗೆ ಹಿಂದಿರುಗಿಸಬೇಕು. ನಿವೃತ್ತ ನೌಕರರನ್ನು ಗುತ್ತಿಗೆ ಆಧಾರದ ಮೇಲೆ ಸಚಿವಾಲಯದಲ್ಲಿ ಪುನರ್ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿದರು.
ಆಡಳಿತ ಸುಧಾರಣೆ ಹೆಸರಿನಲ್ಲಿ ಸಚಿವಾಲಯದ ಯಾವುದೇ ಇಲಾಖೆಯ ಹುದ್ದೆಗಳ ಕಡಿತ ಅಥವಾ ಮರು ಹೊಂದಾಣಿಕೆ ಪ್ರಸ್ತಾವನೆಯನ್ನು ಕೈಬಿಡಬೇಕು. ವೃಂದ ನೇಮಕಾತಿಗಳ ಅನ್ವಯ ಎಲ್‍ಕೇಡರ್ ಹುದ್ದೆಗಳಿಗೆ ನೇರವಾಗಿ ಸಚಿವಾಲಯದ ಇತರೆ ಅಧಿಕಾರಿಗಳೇ ಭರ್ತಿ ಮಾಡುವುದನ್ನು ನಿಲ್ಲಿಸಬೇಕು.
ಸಚಿವರ ಆಪ್ತ ಶಾಖೆಗಳಿಗೆ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಕಾರಿ ಅಥವಾ ನೌಕರರನ್ನು ಮಾತ್ರ ಕಡ್ಡಾಯವಾಗಿ ಸಚಿವಾಲಯವನ್ನು ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡ ಆವರಣಗಳಿಗೆ ಸೀಮಿತಗೊಳಿಸಬೇಕು. ಹಾಗೂ ಬಹುಮಹಡಿ ಕಟ್ಟಡದ ಆವರಣದಲ್ಲಿರುವ ಸಾರ್ವಜನಿಕ ರಸ್ತೆಯನ್ನು ರದ್ದುಪಡಿಸಬೇಕೆಂಬ ಬೇಡಿಕೆ ಮುಂದಿಟ್ಟು ಮೌನ ಪ್ರತಿಭಟನೆ ಮಾಡುವುದಾಗಿ ತಿಳಿಸಿದರು.
