ನಾಳೆ ಸಚಿವಾಲಯ ನೌಕರರಿಂದ ರಾಜ್ಯಮಟ್ಟದ ಧರಣಿ

Social Share

ಬೆಂಗಳೂರು,ಸೆ.28- ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸಚಿವಾಲಯ ನೌಕರರ ಸಂಘ ನಾಳೆ ರಾಜ್ಯ ಮಟ್ಟದ ಧರಣಿ ಸತ್ಯಾಗ್ರಹವನ್ನು ನಡೆಸಲಿದೆ. ಬೆಂಗಳೂರಿನ ಬಹುಮಹಡಿ ಕಟ್ಟಡದ ಮುಂಭಾಗದಲ್ಲಿ ಸರ್ಕಾರಿ ನೌಕರರ ವಿವಿಧ ಇಲಾಖೆ ಹಾಗೂ ವೃಂದ ಸಂಘಟನೆಗಳ ಒಕ್ಕೂಟದ ಜಂಟಿ ಕ್ರಿಯಾ ಸಮಿತಿ ಈ ಪ್ರತಿಭಟನೆಯನ್ನು ನಡೆಸಲಿದ್ದು, ಕೂಡಲೇ ಸರ್ಕಾರ ನಮ್ಮ ಬೇಡಿಕೆಗಳನ್ನು ಈಡೇರಿಸಬೇಕೆಂದು ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಗುರುಸ್ವಾಮಿ ಅವರು ಒತ್ತಾಯಿಸಿದ್ದಾರೆ.

ಸರ್ಕಾರಿ ನೌಕರರ ಪರಿಷ್ಕರಣೆಗಾಗಿ 7ನೇ ವೇತನ ಆಯೋಗ ರಚನೆ, ಎನ್‍ಪಿಎಸ್ ರದ್ದುಪಡಿಸುವುದು ಹಾಗೂ ನೌಕರ ವಿರುದ್ಧಿ ಆಡಳಿತ ಸುಧಾರಣೆ ಕ್ರಮಗಳನ್ನು ಕೈಬಿಡಬೇಕೆಂಬುದು ಪ್ರಮುಖ ಆಗ್ರಹವಾಗಿದೆ. ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರದ ಮಾದರಿಯಂತೆ ರಾಜ್ಯ ಸರ್ಕಾರ ಸರಕಾರಿ ನೌಕರರ ವೇತನ ಪರಿಷ್ಕರಣೆಗೆ 7ನೇ ವೇತನ ಆಯೋಗ ರಚನೆ ಮಾಡಬೇಕು, ಹಿಂದೆ ಕೊಟ್ಟಿರುವ ಮಾತಿನಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.

ಕೋವಿಡ್ ಸಂದರ್ಭದಲ್ಲಿ ಮುಟ್ಟುಗೋಲು ಹಾಕಿಕೊಂಡಿರುವ ನೌಕರರ ಹಾಗೂ ಪಿಂಚಣಿದಾರರ ಬಾಕಿ 18 ತಿಂಗಳ ತುಟ್ಟಿಭತ್ಯೆಯನ್ನು ತಕ್ಷಣವೇ ಬಿಡುಗಡೆ ಮಾಡುವುದು, 2022ರ ಜುಲೈನಿಂದ ಜಾರಿಗೆ ಬರುವಂತೆ ಶೇ.25ರಷ್ಟು ಮಧ್ಯಂತರ ಪರಿಹಾರವನ್ನು ಘೋಷಣೆ ಮಾಡಬೇಕೆಂಬುದು ನೌಕರರ ಒತ್ತಾಯವಾಗಿದೆ.

ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಈ ಹಿಂದೆ ಇದ್ದ ನಿಶ್ಚಿತ ಪಿಂಚಣಿ ಪದ್ದತಿ ಮರುಸ್ಥಾಪಿಸಬೇಕು, ಆಡಳಿತಾ ಸುಧಾರಣಾ ಆಯೋಗ ನೌಕರರ ವಿರೋಧಿ ಶಿಫಾರಸ್ಸುಗಳನ್ನು ತಿರಸ್ಕರಿಸಬೇಕು ಹಾಗೂ ಖಾಲಿ ಇರುವ 2.80 ಲಕ್ಷ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ನಮ್ಮ ಬೇಡಿಕೆಗಳು ಕಾನೂನಿನ ವ್ಯಾಪ್ತಿಯಲ್ಲೇ ಇದ್ದು ಸರ್ಕಾರಕ್ಕೆ ಪದೇ ಪದೇ ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ. ಹೀಗಾಗಿ ನಾಳೆ ಸರ್ಕಾರದ ಗಮನಸೆಳೆಯಲು ರಾಜ್ಯ ಮಟ್ಟದ ಪ್ರತಿಭಟನೆ ನಡೆಸುತ್ತಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದ್ದಾರೆ.

Articles You Might Like

Share This Article