ಬೆಂಗಳೂರು,ಫೆ.11-ರಾಜ್ಯ ಸರ್ಕಾರ ನಿವೃತ್ತ ನೌಕರರನ್ನು ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳುವುದನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ರಾಜ್ಯ ಸಚಿವಾಲಯ ನೌಕರರ ಸಂಘದ ಸದಸ್ಯರು ಫೆ.14ರಿಂದ ಆರಂಭವಾಗುವ ವಿಧಾನಮಂಡಲ ಅಧಿವೇಶನದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.
ಸಚಿವಾಲಯ ಕಛೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೆಕ್ಷನ್ ಅಧಿಕಾರಿಗಳನ್ನು ಬೇರೆ ಇಲಾಖೆಗಳಿಗೆ ಡೆಪ್ಯೂಟೇಶನ್ ಮೇಲೆ ಹೋಗಲು ಅವಕಾಶ ಮಾಡಿಕೊಡಬೇಕೆಂದು ಅವರು ಕೋರಿದ್ದಾರೆ. ಇದರಿಂದ ಕಲಾಪಕ್ಕೆ ಅಡ್ಡಿಯಾಗಬಹುದು. ಸಚಿವಾಲಯದಲ್ಲಿ ಡೆಪ್ಯೂಟೇಶನ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಅವರ ಸೇವಾ ಅವ ಪೂರ್ಣಗೊಂಡಿದ್ದರೆ ಅವರ ಮಾತೃ ಇಲಾಖೆಗೆ ಕಳುಹಿಸಬೇಕು ಎಂದು ಕರ್ನಾಟಕ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ ಗುರುಸ್ವಾಮಿ ಒತ್ತಾಯಿಸಿದ್ದಾರೆ.
ಆಡಳಿತಾತ್ಮಕ ಸುಧಾರಣೆಗಳ ಹೆಸರಿನಲ್ಲಿ ಸರ್ಕಾರವು ಸಚಿವಾಲಯದ ಒಳಗೆ ಯಾವುದೇ ಇಲಾಖೆಯ ಹುದ್ದೆಗಳನ್ನು ತೆಗೆದು ಹಾಕಬಾರದು ಅಥವಾ ಮುಚ್ಚಬಾರದು ಎಂದು ಅವರು ಹೇಳಿದ್ದಾರೆ. ನಾಗರಿಕ ಸೇವಾ(ಸಾಮಾನ್ಯ ನೇಮಕಾತಿ)(ತಿದ್ದುಪಡಿ) ನಿಯಮಗಳ ಪ್ರಕಾರ 1975ರ ಅನ್ವಯ ಸಚಿವಾಲಯದ ಶಾಖಾ ಅಧಿಕಾರಿಗಳಿಗೆ ತಹಸೀಲ್ದಾರ್ ಹುದ್ದೆಗೆ ನಿಯೋಜನೆ ಮಾಡಿ ಹೋಗಲು ಅವಕಾಶವನ್ನು ಕಲ್ಪಿಸುವುದು, ಸೇವೆ ಸಲ್ಲಿಸಿ ನಿವೃತ್ತರಾದವರನ್ನು ಪುನಃ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಬಾರದೆಂದು ಆಗ್ರಹಿಸಿದ್ದಾರೆ.
ಸಚಿವಾಲಯದಲ್ಲಿ ಅವಧಿ ಮೀರಿ ನಿಯೋಜನೆ/ ಅನ್ಯ ಕಾರ್ಯನಿಮಿತ್ತ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ/ನೌಕರರ ಸೇವೆಯನ್ನು ಮಾತೃ ಇಲಾಖೆಗೆ ಹಿಂತಿರುಗಿಸುವುದು, ಆಡಳಿತ ಸುಧಾರಣೆ ಹೆಸರಿನಲ್ಲಿ ಸಚಿವಾಲಯದ ಯಾವುದೇ ಇಲಾಖೆ ಹುದ್ದೆಗಳನ್ನು ಕಡಿತಗೊಳಿಸದೆ ನೌಕರರ ಕಾರ್ಯ ಒತ್ತಡವನ್ನು ಕಡಿಮೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಖಾಲಿ ಇರುವ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವುದು, ಕಿರಿಯ ಸಹಾಯಕ ಹುದ್ದೆಗಳನ್ನು ಕಡಿತಗೊಳಿಸುವ ಪ್ರಸ್ತಾವನೆಯನ್ನು ಕೈಬಿಟ್ಟು ಹೊರಗುತ್ತಿಗೆ ಸೇವೆಯನ್ನು ರದ್ದುಗೊಳಿಸಬೇಕೆಂದು ಸರ್ಕಾರಕ್ಕೆ ಗುರುಸ್ವಾಮಿ ಒತ್ತಾಯಿಸಿದ್ದಾರೆ. ವೈದ್ಯಕೀಯ ವೆಚ್ಚ ಮರುಪಾವತಿಯ ದರ ಪಟ್ಟಿಯನ್ನು ಪರಿಷ್ಕರಿಸುವುದು, ಸಚಿವಾಲಯದಲ್ಲಿನ ಗ್ರೂಪ್ ಡಿ ಮತ್ತು ವಾಹನ ಚಾಲಕರ ಹುದ್ದೆಯನ್ನು ನೇರನೇಮಕಾತಿಯ ಮೂಲಕ ಭರ್ತಿ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ತಕ್ಷಣವೇ ಈಡೇರಿಸಬೇಕು.
ಈ ಬಗ್ಗೆ ಸರ್ಕಾರದ ಗಮನಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲದ ಕಾರಣ ಇದೇ 14ರಿಂದ ಆರಂಭವಾಗಲಿರುವ ಜಂಟಿ ಅಧಿವೇಶನದ ಮೊದಲ ದಿನದಿಂದ 25ರವರೆಗೆ ನೌಕರರು ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸುವುದಾಗಿ ಹೇಳಿದ್ದಾರೆ.
ನೌಕರರು ಕೆಲಸ ಮಾಡುತ್ತಿದ್ದರೂ ಅವರಿಗೆ ರಕ್ಷಣೆ ಕೊಡುತ್ತಿಲ್ಲ. ಅಲ್ಲದೆ ಅವರ ಮೇಲೆ ಅನಗತ್ಯವಾಗಿ ಆಡಳಿತಾಶಾಹಿ ದಬ್ಬಾಳಿಕೆ ನಡೆಸಲಾಗುತ್ತದೆ. ಇದರಿಂದ ಅವರು ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವುದನ್ನು ವಿರೋಧಿಸಿ ಈ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
