ಅಲ್ಪಸಂಖ್ಯಾತರ ಶೈಕ್ಷಣಿಕ ಸಾಲ ಯೋಜನೆಯಲ್ಲಿ ಮಾರ್ಪಡು ಮಾಡಲಾಗುವುದು : ಸಿಎಂ

Social Share

ಬೆಂಗಳೂರು,ಮಾ.8- ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ದಿ ನಿಗಮದ ವತಿಯಿಂದ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಅರಿವು ಶೈಕ್ಷಣಿಕ ಸಾಲ ಯೋಜನೆಯನ್ನು ಹೊಸದಾಗಿ ಮಾರ್ಪಡು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಗೆ ತಿಳಿಸಿದರು.
ಶಾಸಕ ಪ್ರಿಯಾಂಕ ಖರ್ಗೆ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಶೀಘ್ರದಲ್ಲೇ ಅಕಾರಿಗಳ ಸಭೆ ಕರೆದು ಅರಿವು ಶೈಕ್ಷಣಿಕ ಸಾಲ ಯೋಜನೆಯನ್ನು ಎಲ್ಲ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಾಲಿ ಇರುವ ನಿಯಮಗಳಿಗೆ ತಿದ್ದುಪಡಿ ಮಾಡಲಾಗುವುದು. ಈವರೆಗೂ ಇದನ್ನು ವೃತ್ತಿಪರ ಕೋರ್ಸ್‍ಗಳಿಗೆ ಮಾತ್ರ ನೀಡಲಾಗುತ್ತಿತ್ತು. ಈಗ ಇದನ್ನು ಮಾರ್ಪಾಡು ಮಾಡಿದರೆ ಪದವಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.
2019-20, 2020-21, 2021-22ನೇ ಸಾಲಿನಲ್ಲಿ ಅರಿವು ಶೈಕ್ಷಣಿಕ ಸಾಲಾ ಯೋಜನೆಗೆ ಒಟ್ಟು 49,959 ವಿದ್ಯಾರ್ಥಿಗಳಿಗೆ 1,91,07,29,969 ಅನುದಾನ ನೀಡಲಾಗಿದೆ. ಕೋವಿಡ್ ಕಾರಣಗಳಿಂದ ಈ ಯೋಜನೆಯನ್ನು ತಡೆ ಹಿಡಿಯಲಾಗಿತ್ತು. ಅಲ್ಲದೆ ಯೋಜನೆಗೆ 1500 ವಿದ್ಯಾರ್ಥಿಗಳಿಗೆ ಸಾಲ ಯೋಜನೆಯನ್ನು ನೀಡುವ ಗುರಿ ಹೊಂದಲಾಗಿತ್ತು. ಈಗ ನಮ್ಮ ಸರ್ಕಾರ ಇದಕ್ಕೆ ಅನುದಾನವನ್ನು ಹೆಚ್ಚಿಸಿ 6000 ವಿದ್ಯಾರ್ಥಿಗಳಿಗೆ ನೀಡಲಾಗಿದೆ.
ಅರಿವು ಶೈಕ್ಷಣಿಕ ಸಾಲ ಯೋಜನೆಯನ್ನು ಸ್ಥಗಿತಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು. ಇದಕ್ಕೂ ಮುನ್ನ ಮಾತನಾಡಿದ ಪ್ರಿಯಾಂಕ ಖರ್ಗೆ, ಈ ಯೋಜನೆಯನ್ನು ವೃತ್ತಿಪರ ಕೋರ್ಸ್‍ಗಳಿಗೆ ಮಾತ್ರ ನೀಡುತ್ತಿರುವುದರಿಂದ ಸರ್ಕಾರ ಇದನ್ನು ಮರುಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದರು.

Articles You Might Like

Share This Article