ಬೆಂಗಳೂರು,ಜು.29- ಬಾರ್, ಪಬ್ ಮತ್ತು ಮದ್ಯದ ಅಂಗಡಿಗಳಿಗೆ ಇನ್ನು ಮುಂದೆ ಅಪ್ರಾಪ್ತ ವಯಸ್ಕರು ಕಾಲಿಟ್ಟರೆ ಜೋಕೆ!
ಏಕೆಂದರೆ ಗೃಹ ಇಲಾಖೆ ಹೊರಡಿಸಿರುವ ಹೊಸ ಅಸೂಚನೆ ಪ್ರಕಾರ ಇನ್ನು ಮುಂದೆ ಯಾವುದೇ ಕಾರಣಕ್ಕೂ ಅಪ್ರಾಪ್ತ ವಯಸ್ಕರು ಇನ್ನು ಮುಂದೆ ಪಬ್ , ಬಾರ್ ಮತ್ತು ಮದ್ಯದಂಗಡಿಗಳಿಗೆ ಹೋದರೆ ಅಂಥವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಗೃಹ ಇಲಾಖೆ ಎಚ್ಚರಿಸಿವೆ.
ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್‍ಕುಮಾರ್ ಅವರು ಈ ಕುರಿತು ಸುತ್ತೋಲೆಯನ್ನು ಹೊರಡಿಸಿದ್ದು, ಅಪ್ರಾಪ್ತರು ಬಾರದಂತೆ ಬಾರ್, ರೆಸ್ಟೋರೆಂಟ್ ಹಾಗೂ ಪಬ್ ಮಾಲೀಕರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಸೂಚನೆ ಕೊಟ್ಟಿದ್ದಾರೆ.
ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿದರೆ ಅಂಥವರ ಮೇಲೆ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.
ಬಾರ್, ಪಬ್ ಮತ್ತು ಮದ್ಯ ಅಂಗಡಿಗಳಿಗೆ ಅಪ್ರಾಪ್ತ ವಯಸ್ಕರು ಪ್ರವೇಶ ನೀಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಬಾರ್, ಪಬ್ ಮತ್ತು ಮದ್ಯದ ಅಂಗಡಿಗಳಲ್ಲಿ ಮಾದಕ ದ್ರವ್ಯಗಳ ಸಾಗಾಣಿಕೆ ಮತ್ತು ಬಳಕೆ ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಕ್ರಮ ಜರುಗಿಸಬೇಕೆಂದು ತಿಳಿಸಿದ್ದಾರೆ.
ಈ ಅಂಗಡಿಗಳ ಅನುಮತಿಗೆ ನಿಗದಿಪಡಿಸಿರುವ ಸಮಯದಂತೆ ಕಡ್ಡಾಯವಾಗಿ ಅಂಗಡಿಗಳನ್ನು ಮುಚ್ಚುವಂತೆ ಕ್ರಮ ಕೈಗೊಳ್ಳುವುದು, ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಪಬ್‍ಗಳಲ್ಲಿ ಅಳವಡಿಸಲಾಗಿರುವ ಧ್ವನಿವರ್ಧಕಗಳನ್ನು ರಾತ್ರಿ 10 ಗಂಟೆಯೊಳಗಾಗಿ ಬಂದ್ ಮಾಡಿ ಶಬ್ದ ಮಾಲಿನ್ಯ ಉಂಟಾಗದಂತೆ ಕ್ರಮ ಜರುಗಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ್ದಾರೆ.
ಈ ಕುರಿತು ಜು.31ರೊಳಗೆ ಕಚೇರಿ ಪಾಲನಾ ವರದಿ ಸಲ್ಲಿಸುವಂತೆ ಬೆಂಗಳೂರು ನಗರ ಹೊರತುಪಡಿಸಿ ಎಲ್ಲ ಜಿಲ್ಲಾ ವರಿಷ್ಠಾಕಾರಿಗಳು, ಪೊಲೀಸ್ ಆಯುಕ್ತರಿಗೆ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಆದೇಶಿಸಿದ್ದಾರೆ.