ರಾಜಸ್ಥಾನದ ಸುಂದರಿ ಸುಮನ್ರಾವ್ಗೆ ಮಿಸ್ ಇಂಡಿಯಾ ಕಿರೀಟ..!
ಮುಂಬೈ, ಜೂ.16- ರಾಜಸ್ಥಾನದ ಬೆಡಗಿ ಸುಮನ್ರಾವ್ ಪ್ರತಿಷ್ಠಿತ ಫೆಮಿನಾ ಮಿಸ್ ಇಂಡಿಯಾ 2019 ಕಿರೀಟ ಧರಿಸಿದ್ದಾರೆ. ಮುಂಬಯಿನ ಸರ್ದಾರ್ ಪಟೇಲ್ ಒಳಾಗಂಣ ಕ್ರೀಡಾಂಗಣದಲ್ಲಿ ನಿನ್ನೆ ರಾತ್ರಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಮಿಸ್ ಇಂಡಿಯಾ 2019- ಸ್ಪರ್ಧೆಯ ವಿಜೇತರನ್ನು ಘೋಷಿಸಲಾಯಿತು.
ಸ್ಪರ್ಧೆಯಲ್ಲಿ ವಿಜೇತರಾಗಿ ಆಯ್ಕೆಯಾದ ಮೋಹಕ ಚೆಲುವೆ ಸುಮನ್ ರಾವ್ ಅವರಿಗೆ 2018ರ ಮಿಸ್ ಇಂಡಿಯಾ ಪ್ರಶಸ್ತಿ ವಿಜೇತೆ ತಮಿಳುನಾಡಿ ಅನುಕೀರ್ತಿ ವಾಸ್ ಕಿರೀಟ ತೊಡಿಸಿದರು.
ಬಿಹಾರದ ಶ್ರೇಯಾ ಶಂಕರ್ ಮಿಸ್ ಇಂಡಿಯಾ ಯುನೈಟೆಡ್ ಕಾಂಟಿನೆಂಟ್ಸ 2019 ಆಗಿ ಆಯ್ಕೆಯಾದರೆ, ಛತ್ತೀಸ್ಗಢದ ಶಿವಾನಿ ಜಾಧವ್ ಮಿಸ್ ಗ್ರ್ಯಾಂಡ್ ಇಂಡಿಯಾ 2019 ಆಗಿ ಹೊರಹೊಮ್ಮಿದರು. ತೆಲಂಗಾಣದ ಸಂಜನಾ ವಿಜ್ ಮಿಸ್ ಇಂಡಿಯಾ 2019 ರನ್ನರ್ ಅಪ್ ಆಗಿ ಖುಷಿ ಪಟ್ಟರು. ಈ ಅದ್ಧೂರಿ ಕಾರ್ಯಕ್ರಮವನ್ನು ಬಾಲಿವುಡ್ ಖ್ಯಾತನಾಮರು ಮತ್ತು ವಿವಿಧ ಕ್ಷೇತ್ರಗಳ ಗಣ್ಯಾತೀಗಣ್ಯರು ಸಾಕ್ಷೀಕರಿಸಿದರು.
ಫೆಮಿನಾ ಮಿಸ್ ಇಂಡಿಯಾ-2019ರ ವಿವಿಧ ವಿಭಾಗಗಳಲ್ಲಿ ವಿಜೇತರಾದವರಿಗೆ ಅಂತಾರಾಷ್ಟ್ರೀಯ ಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ.