ಹೈದರಾಬಾದ್, ಜ.4- ಅನ್ಯ ಕಂಪೆನಿಗಳ ಕೋವಿಡ್ ಲಸಿಕೆಗಳನ್ನು ಮಿಶ್ರಣ ಮತ್ತು ಹೊಂದಾಣಿಕೆ ಮಾಡುವುದರಿಂದ ರೋಗ ನಿರೋಧಕ ಶಕ್ತಿ ನಾಲ್ಕು ಪಟ್ಟು ವೃದ್ಧಿಯಾಗಲಿದೆ ಎಂದು ಅಧ್ಯಯನ ವರದಿಯೊಂದು ಸ್ಪಷ್ಟಪಡಿಸಿದೆ.
ಹೈದರಾಬಾದ್ ಮೂಲದ ಎಐಸಿ ಆಸ್ಪತ್ರೆಯಲ್ಲಿ ಏಷ್ಯನ್ ಹೆಲ್ತ್ ಕೇರ್ ಫೌಂಡೇಶನ್ ಸಂಯುಕ್ತಾಶ್ರಯದಲ್ಲಿ ನಡೆದ ಅಧ್ಯಯನ ಮಹತ್ವದ ಫಲಿತಾಂಶ ನೀಡಿದ್ದು, ಇದರ ದತ್ತಾಂಶಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್(ಐಸಿಎಂಆರ್) ನೊಂದಿಗೆ ಹಂಚಿಕೊಳ್ಳಲಾಗಿದೆ. ಜ.10ರಿಂದ ನೀಡಲಾಗುವ ಬೂಸ್ಟರ್ ಲಸಿಕೆಯ ವೇಳೆ ಮಿಶ್ರಣ ಮತ್ತು ಹೊಂದಾಣಿಕೆ ಪದ್ಧತಿಯನ್ನು ಅನುಸರಿಸುವಂತೆ ಸಲಹೆ ನೀಡಲಾಗಿದೆ.
ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳನ್ನು ಪರಸ್ಪರ ಮಿಶ್ರಣ ಮಾಡುವುದರಿಂದ ಪರಿಣಾಮ ಉತ್ತಮವಾಗಿದೆ. ಒಂದೇ ಕಂಪೆನಿಯ ಲಸಿಕೆಗಳನ್ನು ನೀಡುವ ಬದಲಿಗೆ ಮೊದಲ ಮತ್ತು ಎರಡನೇ ಡೋಸ್‍ಗಳನ್ನು ಅದಲುಬದಲು ಮಾಡಿದರೆ ನಾಲ್ಕು ಪಟ್ಟು ರೋಗ ನಿರೋಧಕ ಶಕ್ತಿ ವೃದ್ಧಿಯಾಗಲಿದೆ ಎಂದು ಎಐಜಿ ಆಸ್ಪತ್ರೆಯ ಅಧ್ಯಕ್ಷ ಡಾ.ನಾಗೇಶ್ವರರೆಡ್ಡಿ ತಿಳಿಸಿದ್ದಾರೆ.
330 ಆರೋಗ್ಯ ಕಾರ್ಯಕರ್ತರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಉತ್ತಮ ಫಲಿತಾಂಶ ಕಂಡು ಬಂದಿದೆ. ಪ್ರಸ್ತುತ ದಿನಮಾನಗಳಲ್ಲಿ ಜನರಲ್ಲಿ ಸ್ವಯಂ ರೋಗ ನಿರೋಧಕ ಶಕ್ತಿ ವೃದ್ಧಿಯಾದಂತೆ ಇದೆ. ಬಹಳಷ್ಟು ಮಂದಿ ಲಸಿಕೆ ಪಡೆಯದಿದ್ದರೂ ಅವರಿಗೆ ಸೋಂಕು ತಗುಲುತ್ತಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಲಸಿಕೆ ಪಡೆಯುವುದು ಸೂಕ್ತ ಎಂದು ಹೇಳಿದ್ದಾರೆ.
ಓಮಿಕ್ರಾನ್ ಆಧಾರಿತ ಮೂರನೇ ಅಲೆ ಮುನಸೂಚನೆಗಳು ಕಂಡುಬಂದಿವೆ. ಲಸಿಕೆಗಳ ಮಿಶ್ರಣ ಮತ್ತು ಹೊಂದಾಣಿಕೆಯಿಂದಾಗಿ ಡೆಲ್ಟಾ ಮತ್ತು ಓಮಿಕ್ರಾನ್‍ನಂತಹ ರೂಪಾಂತರಿ ವಿರುದ್ಧವೂ ಕೂಡ ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ ಎಂದು ಅವರು ತಿಳಿಸಿದ್ದಾರೆ.
