ಮಾಡಾಳ್ ವಿರುದ್ಧ ಕ್ರಮಕ್ಕೆ ಬಿಜೆಪಿ ಮೀನಾಮೇಷ

Social Share

ಬೆಂಗಳೂರು,ಮಾ.9- ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ಚನ್ನಗಿರಿಯ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಬಗ್ಗೆ ಪಕ್ಷದ ಹೈಕಮಾಂಡ್ ಕಾದುನೋಡುವ ತಂತ್ರ ಅನುಸರಿಸಿದೆ.

ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಪುತ್ರರಾದ ಕೆಎಎಸ್ ಅಧಿಕಾರಿ ಮಾಡಾಳ್ ಪ್ರಶಾಂತ್ ಅವರನ್ನು ಲೋಕಾಯುಕ್ತ ಪೊಲೀಸರು ಭ್ರಷ್ಟಾಚಾರ ಪ್ರಕರಣದಲ್ಲಿ ಖೆಡ್ಡಾಗೆ ಕೆಡವಿದ ಘಟನೆ ಕುರಿತು ರಾಜ್ಯ ಬಿಜೆಪಿ ಪಕ್ಷ ಮತ್ತು ಮುಖ್ಯಮಂತ್ರಿಗಳಿಂದ ಹೈಕಮಾಂಡ್ ಮಾಹಿತಿ ಪಡೆದುಕೊಂಡಿದೆ. ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಶಾಸಕರಾಗಿರುವ ವಿರೂಪಾಕ್ಷಪ್ಪ ಅವರ ವಿರುದ್ಧ ಯಾವ ಕ್ರಮ ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಹೈಕಮಾಂಡ್‍ಗೆ ಜಿಜಜ್ಞಾಸೆ ಮೂಡಿದೆ.

ರಾಜ್ಯ ಬಿಜೆಪಿ ಘಟಕ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಾಸಕ ಮಾಡಾಳ್ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸ್ಸು ಮಾಡಿದ್ದಾರೆ ಎಂದು ಹೇಳಲಾಗಿದೆ. ಆದರೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮಾಡಾಳ್ ವಿರುಪಾಕ್ಷಪ್ಪ ಅವರ ಮೇಲೆ ಶಿಸ್ತುಕ್ರಮ ಜರುಗಿಸದಿದ್ದರೆ ಮತದಾರರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ವಿರೋಧ ಪಕ್ಷಗಳು ವಿಧಾನಸಭೆ ಚುನಾವಣೆಯಲ್ಲಿ ಇದರ ರಾಜಕೀಯ ಲಾಭ ಪಡೆಯಬಹುದು ಎಂಬ ಆತಂಕ ಬಿಜೆಪಿಯಲ್ಲಿ ಮೂಡಿದೆ.

ಪಾಕ್ ಮೇಲೆ ದಾಳಿಗೆ ಸಜ್ಜಾಗಿದೆ ಭಾರತ : ಅಮೆರಿಕ ಗುಪ್ತಚರ ಇಲಾಖೆ ಎಚ್ಚರಿಕೆ

ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಾಗಿದೆ ಎಂಬ ವದಂತಿಗಳು ರಾಜಕೀಯ ವಲಯದಲ್ಲಿ ಈಗಾಗಲೇ ಹರಿದಾಡತೊಡಗಿವೆ. ಆದರೆ ವಾಸ್ತವವಾಗಿ ಶಿಸ್ತುಕ್ರಮದ ಭಾಗವಾಗಿ ಇದೂವರೆಗೆ ಯಾವುದೇ ಕ್ರಮವನ್ನು ಶಾಸಕ ಮಾಡಾಳ್ ವಿರುದ್ಧ ಜರುಗಿಸಲಾಗಿಲ್ಲ.

ಲೋಕಾಯುಕ್ತ ತನಿಖೆ ಎದುರಿಸುತ್ತಿರುವ ಶಾಸಕ ಮಾಡಾಳ್ ವಿರುಪಾಕ್ಷಪ್ಪ ಅವರ ಬಗ್ಗೆ ಆರಂಭದಲ್ಲಿಯೇ ಉಚ್ಛಾಟನೆಯಂತಹ ಶಿಸ್ತುಕ್ರಮ ತಗೆದುಕೊಳ್ಳುವುದು ಬಿಜೆಪಿ ಹೈಕಮಾಂಡ್‍ಗೂ ಅಂದುಕೊಂಡಷ್ಟು ಸುಲಭವಾಗಿಲ್ಲ. ಚನ್ನಗಿರಿ ವಿಧಾನಸಭೆ ಕ್ಷೇತ್ರವನ್ನು ಪ್ರತಿನಿಸುವ ಶಾಸಕ ಮಾಡಾಳ್ ಅವರು ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವ ಹೊಂದಿದ್ದಾರೆ.

ಅಷ್ಟೇ ಅಲ್ಲ ಬಿಜೆಪಿಗೆ ಬೆಂಬಲವಾಗಿ ನಿಂತಿರುವ ಪ್ರಬಲ ಲಿಂಗಾಯತ ಸಮುದಾಯಕ್ಕೆ ಮಾಡಾಳ್ ಸೇರಿದವರಾಗಿದ್ದರಿಂದ ವಿಧಾನಸಭೆ ಚುನಾವಣೆ ಹತ್ತಿರವಿರುವಾಗ ಶಿಸ್ತುಕ್ರಮಕ್ಕೆ ಮುಂದಾದರೆ, ಚುನಾವಣೆ ವೇಳೆ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಗಳನ್ನೂ ಬಿಜೆಪಿ ಹೈಕಮಾಂಡ್ ಗಂಭೀರವಾಗಿ ಪರಿಶೀಲನೆ ನಡೆಸುತ್ತಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 25ರಂದು ದಾವಣಗೆರೆಗೆ ಪಕ್ಷದ ಪರ ಚುನಾವಣೆ ಪ್ರಚಾರಕ್ಕೆ ಆಗಮಿಸಲಿದ್ದು, ಅಷ್ಟರೊಳಗೆ ಮಾಡಾಳ್ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಹೈಕಮಾಂಡ್ ನಿರ್ಧಾರಕ್ಕೆ ಬರುವ ಸಾಧ್ಯತೆಗಳಿವೆ.

ಸಾಗರದಾಳದಲ್ಲಿದೆಯಂತೆ 171 ಟ್ರಿಲಿಯನ್ ಪ್ಲಾಸ್ಟಿಕ್ ತ್ಯಾಜ್ಯ..!

ಈ ನಡುವೆ ಲೋಕಾಯುಕ್ತ ತನಿಖೆ ಬಗ್ಗೆ ವರದಿ ಮತ್ತು ನ್ಯಾಯಾಲಯಗಳಲ್ಲಿ ನಡೆಯುವ ವಿಚಾರಣೆಯನ್ನು ಹೈಕಮಾಂಡ್ ಗಮನಿಸಿ ಸೂಕ್ತ ನಿರ್ಣಯಕ್ಕೆ ಬರಲಿದೆ ಎಂದು ಹೇಳಲಾಗಿದೆ.

ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷದಿಂದ ಉಚ್ಛಾಟನೆಯೂ ಸೇರಿದಂತೆ ಯಾವುದೇ ಶಿಸ್ತುಕ್ರಮ ತಮ್ಮ ವಿರುದ್ಧ ಜರುಗಿಸಿದರೂ ಅದನ್ನ ಸ್ವಾಗತಿಸುವುದಾಗಿ ಹೇಳಿದ್ದಾರೆ. ಆದರೆ ಈ ವರೆಗೆ ಅಂತಹ ಯಾವುದೇ ಕ್ರಮ ತಗೆದುಕೊಳ್ಳಲಾಗಿಲ್ಲ ಮತ್ತು ನೋಟಿಸ್ ಸಹ ನೀಡಿಲ್ಲ ಎಂದು ಮಾಡಾಳ್ ಸ್ಪಷ್ಟಪಡಿಸಿದ್ದಾರೆ.

ಹೈಕೋರ್ಟ್ ನಲ್ಲಿ ಮಾಡಾಳ್ ವಿರುಪಾಕ್ಷಪ್ಪನವರಿಗೆ ಮಂಗಳವಾರ ನಡೆದ ವಿಚಾರಣೆ ಸಂದರ್ಭದಲ್ಲಿ ನಿರೀಕ್ಷಣಾ ಜಾಮೀನು ಮಂಜೂರು ಮಾಡಿರುವ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಹೈಕಮಾಂಡ್ ತಕ್ಷಣದ ತೀರ್ಮಾನದ ಬದಲಿಗೆ ಕಾದು ನೋಡಿ ಸೂಕ್ತವಾದ ನಿರ್ಧಾರಕ್ಕೆ ಬರಲು ಯೋಚಿಸುತ್ತಿದೆ. ಈ ಬೆಳವಣಿಗೆಯಿಂದ ಮಾಡಾಳ್ ವಿರೂಪಾಕ್ಷಪ್ಪ ಅವರು ಪಕ್ಷದ ಶಿಸ್ತುಕ್ರಮ ಮತ್ತು ಲೋಕಾಯುಕ್ತ ಬಂಧನದ ತೂಗು ಕತ್ತಿಯಿಂದ ಸದ್ಯಕ್ಕೆ ಪಾರಾದಂತಾಗಿದೆ.

MLA, Madal Virupakshappa, against, against, BJP,

Articles You Might Like

Share This Article