ಕೊಟ್ಟ ಮಾತಿನಂತೆ ಅಸಹಾಯಕ ಯುವತಿಯ ಅದ್ದೂರಿ ಮದುವೆ ಮಾಡಿದ ಶಾಸಕ ಪುಟ್ಟರಾಜು

Social Share

ಮೇಲುಕೋಟೆ, ಫೆ.28- ಅಸಹಾಯಕಳಾಗಿದ್ದ ಯುವತಿಗೆ ತಂದೆಯ ಸ್ಥಾನದಲ್ಲಿ ನಿಂತು ಮದುವೆ ಮಾಡಿಸಿದ್ದಲ್ಲದೆ ಕುಟುಂಬಕ್ಕೆ ಬದುಕಲು ನೆಲೆ ಕಲ್ಪಿಸುವ ಮೂಲಕ ಶಾಸಕ ಸಿ.ಎಸ್. ಪುಟ್ಟರಾಜು ಮಾನವೀಯತೆ ಮೆರೆದಿದ್ದಾರೆ. ಮನೆಯ ಯಜಮಾನನನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಬಡ ಕುಟುಂಬಕ್ಕೆ ಕೊಟ್ಟ ಮಾತನ್ನು ಉಳಿಸಿಕೊಂಡ ಶಾಸಕರು ಮೃತನ ಪುತ್ರಿಗೆ ವಿವಾಹ ನೆರವೇರಿಸಿ ಇಡೀ ಕುಂಟುಂಬದಲ್ಲಿ ಸಂತಸ ತಂದು ಕಟ್ಟಿಕೊಟ್ಟಿದ್ದಾರೆ
# ಘಟನೆಯ ವಿವರ:
ಜಕ್ಕನಹಳ್ಳಿ ಗ್ರಾಮದ ಯುವತಿ ಸಹನ (ಗೊಂಬೆ) ಮತ್ತು ಅನಿಲ್ ರಾಜ್ ಮದುವೆ ಮೇಲುಕೋಟೆಯ ಆದಿಚಂಚನಗಿರಿ ಸಮುದಾಯ ಭವನದಲ್ಲಿ ಶಾಸಕರ ನೇತೃತ್ವದಲ್ಲಿ ಅರ್ಥಪೂರ್ಣವಾಗಿ ನೆರವೇರುವ ಮೂಲಕ ಈ ಮಂಗಳಕಾರ್ಯ ನೆರದಿದ್ದವರ ಕಣ್ಣಾಲಿಗಳಲ್ಲಿ ಆನಂದ ಭಾಷ್ಪತುಂಬುವಂತೆ ಮಾಡಿದೆ.
ವದುವಿನ ಮುಖದಲ್ಲಂತೂ ಕಂಡು ಬಂದ ಧನ್ಯತಾಭಾವ ಅಕ್ಷರದಲ್ಲಿ ವರ್ಣಸಲು ಸಾಧ್ಯವಿಲ್ಲದಂತ್ತಿತ್ತು. ಇಂತಹ ಅಪರೂಪದ ಮದುವೆಯಲ್ಲಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಸಹ ಪಾಲ್ಗೊಂಡು ವಧು-ವರರರನ್ನು ಹಾರೈಸಿದ್ದಾರೆ.
ಮೇಲುಕೋಟೆ ಹೋಬಳಿಯ ಜಕ್ಕನಹಳ್ಳಿ ವೃತ್ತದಲ್ಲಿ ಶಿವಕುಮಾರ್ ಆಟೋ ಓಡಿಸಿಕೊಂಡು ಕೂಲಿ-ನಾಲಿ ಮಾಡಿ ಬಾಡಿಗೆ ಮನೆಯಲ್ಲಿ ಐದು ಮಂದಿ ಆಶ್ರಿತರೊಂದಿಗೆ ಸಂಕಷ್ಠದಿಂದಲೇ ಬದುಕುತ್ತಿದ್ದ.ಕಳೆದ ಲೋಕಸಭಾ ಚುನಾವಣೆಯ ವೇಳೆ ಅಂದಿನ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮಂಡ್ಯ ಎಂಪಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ಪಾಂಡವಪುರಕ್ಕೆ ಪ್ರಚಾರಕ್ಕೆ ಬಂದಿದ್ದರು.
ಪ್ರಚಾರ ಸಬೆಯಲ್ಲಿ ಪಾಲ್ಗೊಳ್ಳಲು ಬಂದಿದ್ದ ಶಿವಕುಮಾರ್(40) ವಿಶ್ವೇಶ್ವರಯ್ಯ ನಾಲೆಯಲ್ಲಿ ಕಾಲುಜಾರಿ ಮೃತಪಟ್ಟಿದ್ದರು. ಈ ಘಟನೆಯಿಂದಾಗಿ ಇಡೀ ಕುಟುಂಬ ಅಂದು ಅಕ್ಷರಷಃ ಬೀದಿಗೆ ಬಂದಿತ್ತು.ಅಂದು ಸಿ.ಎಸ್. ಪುಟ್ಟರಾಜು ಅವರು ಮೃತನ ಪತ್ನಿ ಸುಮಲತಾ ಮತ್ತು ಕುಟುಂಬಕ್ಕೆ ಸಾಂತ್ವನಹೇಳಿ ಕುಟುಂಬ ನಿರ್ವಹಣೆಗೆ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದರು.
ಮೃತನ ಪತ್ನಿಗೆ ತಮ್ಮದೇ ಶಿಕ್ಷಣ ಸಂಸ್ಥೆಯಲ್ಲಿ ಕೆಲಸಕೊಟ್ಟು, ಪುತ್ರಿ ಸಹನ ಅವಳಿಗಿಷ್ಟ ಬಂದ ಕಾಲೇಜಿನಲ್ಲಿ ನರ್ಸಿಂಗ್‍ವ್ಯಾಸಂಗ ಮಾಡಲು ಮತ್ತು ಪುತ್ರ ಪದವಿ ಶಿಕ್ಷಣ ಪಡೆಯಲು ಸಹಕಾರ ನೀಡಿ ವಿದ್ಯಾಭ್ಯಾಸದ ಸಂಪೂರ್ಣ ಖರ್ಚು ವೆಚ್ಚ ವಹಿಸಿಕೊಂಡಿದ್ದರು.
ಸಂಪೂರ್ಣ ವೆಚ್ಚ ಭರಿಸಿದ ಸಿಎಸ್‍ಪಿ: ಯುವತಿ ಸಹನಗೆ ತಾಯಿ ಸುಮಲತಾ ಮದುವೆಯ ಪ್ರಸ್ತಾಪ ಮಾಡಿದಾಗ ವದುವಿನ ಆಭರಣದಿಂದ ಹಿಡಿದು ಸಂಪೂರ್ಣವೆಚ್ಚವನ್ನು ಶಾಸಕ ಸಿ.ಎಸ್. ಪುಟ್ಟರಾಜುರವರೇ ವಹಿಸಿಕೊಂಡು ಮಂಗಳಕಾರ್ಯವನ್ನು ತೃಪ್ತಿಯಿಂದ ನಡೆಸಿಕೊಟ್ಟರು.
ಮದುವೆಯನ್ನು ಅತ್ಯಂತ ಸರಳವಾಗಿ ಜಕ್ಕನಹಳ್ಳಿ ಗಣಪತಿ ಸನ್ನಿಯಲ್ಲಿ ನಡೆಸಲು ಕುಟುಂಬ ನಿರ್ಧರಿಸಿ ಆಹ್ವಾನಪತ್ರಿಕೆನ್ನೂ ಮುದ್ರಿಸಿತ್ತು. ಆದರೆ ಶಾಸಕ ಸಿ.ಎಸ್ .ಪುಟ್ಟರಾಜು ಮೇಲುಕೋಟೆಯ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಮದುವೆಗೆ ವ್ಯವಸ್ಥೆ ಮಾಡಿ ಯಾವುದೇ ಕೊರತೆ ಬರದಂತೆ ವಿವಾಹ ಅಚ್ಚುಕಟ್ಟಾಗಿ ನಡೆಸಿದ್ದಾರೆ .
ಹಲವಾರು ರೀತಿಯಲ್ಲಿ ನೊಂದವರ ಸಂಕಷ್ಠಕ್ಕೆ ಶಾಸಕ ಸಿ.ಎಸ್. ಪುಟ್ಟರಾಜು ಸ್ಪಂದಿಸುತ್ತಾರಾದರೂ ಸಹನ ಮದುವೆಯ ಸಂಭ್ರಮದ ಬೆಳವಣಿಗೆ ಜನಸಾಮಾನ್ಯರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಮದುವೆ ಮೇಲುಕೋಟೆಗೆ ಸಂಭ್ರಮ ತಂದುಕೊಟ್ಟಿತು.

Articles You Might Like

Share This Article