ಬೆಂಗಳೂರು,ಮೇ 27- ವಿಧಾನಸಭೆಯ ಉಪಾಧ್ಯಕ್ಷ ಸ್ಥಾನವನ್ನು ಒಪ್ಪಿಕೊಳ್ಳಬೇಕೋ ಬೇಡವೋ ಎಂಬ ಕುರಿತು ನಾಲ್ಕೈದು ದಿನಗಳಲ್ಲಿ ತೀರ್ಮಾನ ಮಾಡುತ್ತೇನೆ ಎಂದು ಹೇಳುವ ಮೂಲಕ ಶಾಸಕ ಪುಟ್ಟರಂಗಶೆಟ್ಟಿ ಅಸಮಾಧಾನ ಹೊರ ಹಾಕಿದ್ದಾರೆ.
ಸಚಿವ ಸಂಪುಟದ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಮುನ್ನಾ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನನ್ನು ವಿಧಾನಸಭೆಯ ಉಪಾಧ್ಯಕ್ಷರನ್ನಾಗಿ ಮಾಡಲು ಹೈಕಮಾಂಡ್ ತೀರ್ಮಾನ ಮಾಡಿದೆ. ಆ ಹುದ್ದೆಯನ್ನು ನಿಭಾಯಿಸಬೇಕೋ ಬೇಡವೋ ಎಂಬ ಕುರಿತು ತೀರ್ಮಾನ ಮಾಡುತ್ತೇನೆ ಎಂದಿದ್ದಾರೆ.
ಸಚಿವ ಸ್ಥಾನ ಸಿಕ್ಕೇ ಸಿಗಲಿದೆ ಎಂಬ ವಿಶ್ವಾಸ ತಮಗೆ ಇತ್ತು, ನಾಲ್ಕು ಬಾರಿ ಗೆಲುವು ಸಾಸಿದ್ದೇನೆ. ತಮ್ಮ ಸಮುದಾಯಕ್ಕೆ ಸಚಿವ ಸ್ಥಾನ ಕೊಟ್ಟೆ ಕೊಡುತ್ತಾರೆ ಎಂದು ನಂಬಿಕೆ ಇತ್ತು. ಕೊನೆ ಗಳಿಗೆಯಲ್ಲಿ ನನ್ನ ಹೆಸರನ್ನು ಕೈ ಬಿಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನನ್ನನ್ನು ಸಂಪುಟದಿಂದ ದೂರು ಇಡಲು ಕಾರಣವೇನು ಎಂದು ತಿಳಿದುಕೊಂಡು, ಉಪಾಧ್ಯಕ್ಷರಾಗಿ ಕೆಲಸ ಮಾಡಬೇಕೋ ಬೇಡವೋ ಎಂದು ತೀರ್ಮಾನ ಮಾಡುತ್ತೇನೆ. ವರಿಷ್ಠರು ಹಾಗೂ ರಾಜ್ಯ ನಾಯಕರ ಜೊತೆ ಚರ್ಚೆ ಮಾಡುತ್ತೇನೆ ಎಂದು ಹೇಳಿದರು.
ನನಗೆ ನನ್ನ ಕ್ಷೇತ್ರದ ಹಿತ ಮುಖ್ಯವಾಗಿದೆ. ಬೆಂಗಳೂರಿನಲ್ಲಿ ಒಂದೆರಡು ದಿನ ಮಾತ್ರ ಇರುತ್ತೇನೆ. ಉಳಿದಂತೆ ಕ್ಷೇತ್ರದಲ್ಲೇ ಇರುತ್ತೇನೆ, ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಅಸಮಧಾನವಾಗಿದೆ ಎಂದು ಹೇಳಿದರು.
#Puttarangshetty, #VicePresident, #LegislativeAssembly,