ಮಗು ನನ್ನದಲ್ಲ ಎಂದು ಮನೆ ದೇವರ ಮೇಲೆ ಪ್ರಮಾಣ ಮಾಡುವಂತೆ ಶಾಸಕರಿಗೆ ಮಹಿಳೆ ಸವಾಲು

Social Share

ಬೆಂಗಳೂರು,ಫೆ.7- ಬಾಲ್ಯದಿಂದಲೂ ಅವರು ನನಗೆ ಸ್ನೇಹಿತರು. ಅವರ ಜೊತೆ ಸಂಪರ್ಕ ಇಟ್ಟುಕೊಂಡಿದ್ದರಿಂದಲೇ ನನಗೆ ಮಗುವಾಗಿದೆ. ಈ ಮಗು ಅವರದಲ್ಲವೆಂಬುದಾದರೆ ತಮ್ಮ ಮನೆ ದೇವರ ಮೇಲೆ ಪ್ರಮಾಣ ಮಾಡಲಿ ಎಂದು ಸಂತ್ರಸ್ತ ಮಹಿಳೆಯು ಶಾಸಕ ರಾಜ್‍ಕುಮಾರ್ ಪಾಟೀಲ್ ತೇಲ್ಕೂರ್‍ಗೆ ಸವಾಲು ಹಾಕಿದ್ದಾರೆ.ನಗರದ ಖಾಸಗಿ ಹೋಟೆಲ್‍ನಲ್ಲಿ ವಕೀಲ ಜಗದೀಶ್ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ನನ್ನ ಜೊತೆ ಹಲವು ವರ್ಷಗಳಿಂದ ಅವರು ಒಡನಾಟ ಇಟ್ಟುಕೊಂಡಿದ್ದರು. ಅದರ ಪರಿಣಾಮವೇ ನನಗೆ ಮಗು ಜನಿಸಿದೆ. ಈಗ ಇದಕ್ಕೂ ನನಗೂ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ. ಅವರ ಮನೆ ದೇವರಾದ ವೀರಭದ್ರಸ್ವಾಮಿಯ ಮೇಲೆ ಆಣೆ ಮಾಡಿ ಹೇಳಲಿ ಎಂದು ಒತ್ತಾಯಿಸಿದರು.
ನನಗೆ ಮಹಿಳೆ ಗೊತ್ತೇ ಇಲ್ಲ ಎಂದು ಹೇಳುವ ಶಾಸಕರು ಬೆಂಗಳೂರಿನ ಶಾಂಗ್ರೀಲಾ ಹೋಟೆಲ್‍ಗೆ ತಮ್ಮ ಪತ್ನಿಯನ್ನು ಕರೆದುಕೊಂಡು ಮಾತುಕತೆಗೆ ಬಂದಿದ್ದಾದರೂ ಏಕೆ? ಪರಿಚಯವಿಲ್ಲ ಎಂದ ಮೇಲೆ ಬರುವ ಅಗತ್ಯವಾದರೂ ಏನಿತ್ತು ಎಂದು ಪ್ರಶ್ನಿಸಿದರು. ನಾನು ಶಾಸಕರಿಗೆ ಯಾವುದೇ ರೀತಿಯಲ್ಲೂ ಬ್ಲಾಕ್‍ಮೇಲ್ ಮಾಡುತ್ತಿಲ್ಲ. ಪ್ರಸ್ತುತ ನಾನು ಬ್ಯೂಟಿಪಾರ್ಲರ್ ನಡೆಸುತ್ತಿದ್ದೇನೆ. ಜೀವನ ನಿರ್ವಹಣೆ ಕಷ್ಟವಾಗಿದೆ. ಕಡೇ ಪಕ್ಷ ಅದರ ಪೋಷಣೆಗಾದರೂ ಜೀವನಾಂಶ ಕೊಡಿ ಎಂದು ನೊಂದ ಮಹಿಳೆ ಸೇಡಂ ಶಾಸಕರನ್ನು ಒತ್ತಾಯಿಸಿದ್ದಾರೆ.
ನನ್ನ ಜೊತೆ ಸಂಬಂಧ ಇಟ್ಟುಕೊಂಡಿರುವುದು ಅವರ ಪತ್ನಿಗೆ ಗೊತ್ತಾಗಿ ವಿಷಯ ರಂಪಾಟವಾಗಬಾರದು ಎಂದು ಖಾಸಗಿ ಹೋಟೆಲ್‍ನಲ್ಲಿ ಮಾತುಕತೆಗೆ ಬಂದಿದ್ದರು. ಬೇಕಿದ್ದರೆ ಇಲ್ಲಿನ ಸಿಸಿ ಕ್ಯಾಮೆರಾಗಳ ವಿಶ್ಯುಯಲ್ ನೋಡಿದರೆ ಎಲ್ಲವೂ ಗೊತ್ತಾಗುತ್ತದೆ ಎಂದು ಹೇಳಿದ್ದಾರೆ.
ನನಗೆ ಅವರ ಜೊತೆ ಮಾತುಕತೆ ಇಲ್ಲವೇ ಸಂಧಾನ ಬೇಕಿಲ್ಲ. ನಾನು ಬ್ಲಾಕ್‍ಮೇಲ್ ಮಾಡುವ ಅಗತ್ಯವೂ ನನಗಿಲ್ಲ. ನನಗೆ ಅನ್ಯಾಯವಾಗಿದ್ದು, ಶಾಸಕರಿಂದ ನ್ಯಾಯಬೇಕು. ಈಗ ನಾನು ಒಬ್ಬಂಟಿಯಾಗಿದ್ದು ಜೀವನ ಹೇಗೆ ನಿರ್ವಹಿಸಲಿ ಎಂದು ಪ್ರಶ್ನಿಸಿದ್ದಾರೆ. ಖಂಡಿತವಾಗಿಯೂ ನಾನು ಮಾಧ್ಯಮದವರ ಮುಂದೆ ಬರಬೇಕೆಂದುಕೊಂಡಿರಲಿಲ್ಲ. ನನ್ನ ಮೇಲೆ ಶಾಸಕರು, ಅವರ ಕುಟುಂಬದವರು ಹಾಗೂ ಬೆಂಬಲಿಗರು ದಬ್ಬಾಳಿಕೆ ಮಾಡುತ್ತಿರುವುದರಿಂದ ಮಾಧ್ಯಮದ ಮುಂದೆ ಬರಬೇಕಾಯಿತು ಎಂದು ಅಳಲು ತೋಡಿಕೊಂಡರು.
ವಿಧಾನಸೌಧ ಠಾಣೆಯಲ್ಲಿ ನನಗೆ ತುಂಬ ಹಿಂಸೆ ಕೊಟ್ಟಿದ್ದಾರೆ. ಠಾಣೆಯಲ್ಲಿ ವಿಜಯ್ ಎಂಬುವರ ಮುಂದೆ ಕಾಲಿಗೆ ಬೀಳಲು ಮುಂದಾದೆ. ಆದರೂ ಕೇಳಲಿಲ್ಲ ಎಂದು ಕಣ್ಣೀರು ಹಾಕಿದರು.
ನಾವು ನಿಮಗೆ ಎಲ್ಲ ಸಹಾಯ ಮಾಡುತ್ತೇವೆ. ನೀವು ನಾವು ಹೇಳಿದ ಹಾಗೆ ನಡೆದುಕೊಳ್ಳಬೇಕು. ಇದಕ್ಕೆಲ್ಲ ಕಾಂಗ್ರೆಸ್‍ನವರ ಕುಮ್ಮಕ್ಕಿದೆ ಎಂದು ನಾವು ಬರೆದುಕೊಟ್ಟ ಪತ್ರಕ್ಕೆ ಸಹಿ ಹಾಕಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಒಪ್ಪದಿದ್ದಾಗ ನನಗೆ ಹಿಂಸೆ ಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಯಾವ ಮಹಿಳೆಯೂ ತನ್ನ ಮಗುವಿನ ಜನನದ ಬಗ್ಗೆ ಸುಳ್ಳು ಹೇಳುವುದಿಲ್ಲ. ಇಬ್ಬರಲ್ಲಿ ಒಬ್ಬ ಮಗ ಶಾಸಕರಿಗೆ ಹುಟ್ಟಿದ್ದು, ಇದನ್ನು ಹೇಳಲು ನನಗೆ ಯಾವುದೇ ಮುಜುಗರವೂ ಇಲ್ಲ ಎಂದು ಸ್ಪಷ್ಟಪಡಿಸಿದರು.

Articles You Might Like

Share This Article