ಯತ್ನಾಳ್ ಗೆ ಶಾಸಕ ರೇಣುಕಾಚಾರ್ಯ ಹಿಗ್ಗಾಮುಗ್ಗಾ ಕ್ಲಾಸ್.!

ಬೆಂಗಳೂರು,ಅ.20- ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವ ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ ಎಂದು ವರಿಷ್ಠರೇ ಹೇಳಿರುವಾಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಇಂಥ ಹೇಳಿಕೆ ನೀಡಲು ಅವರಿಗೆ ಅಧಿಕಾರ ಕೊಟ್ಟವರ್ಯಾರು ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ವರಿಷ್ಠರು ಯಡಿಯೂರಪ್ಪನವರ ನಾಯಕತ್ವವನ್ನು ಎಂತಹ ಸಂದರ್ಭದಲ್ಲೂ ಬದಲಾವಣೆ ಮಾಡುವ ಪ್ರಸ್ತಾವನೆ ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಯತ್ನಾಳ್ ಅವರು ಯಡಿಯೂರಪ್ಪ ನಾಯಕತ್ವ ಶೀಘ್ರದಲ್ಲೇ ಬದಲಾಗಲಿದೆ ಎಂದು ರಾಜ್ಯದ ಜನತೆ ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ನನಗೆ ವೈಯಕ್ತಿಕವಾಗಿ ಯತ್ನಾಳ್ ಅವರ ಮೇಲೆ ಅಪಾರ ಗೌರವವಿದೆ. ಆದರೆ ಯಾರನ್ನು ಮೆಚ್ಚಿಸಲು ತಮಗೆ ತಾವೇ ಮುಖ್ಯಮಂತ್ರಿ ಯಾಗುತ್ತೇನೆಂಬ ಭ್ರಮೆಯಲ್ಲಿ ಇಂತಹ ಹೇಳಿಕೆ ಕೊಡಬಾರದು. ಯಡಿಯೂರಪ್ಪನವರನ್ನು ಬದಲಾವಣೆ ಮಾಡುತ್ತೇವೆಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಯತ್ನಾಳ್ ಬಳಿ ಹೇಳಿದ್ದಾರೆಯೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಯಡಿಯೂರಪ್ಪ ಪ್ರಶ್ನಾತೀತ ನಾಯಕರು ಅವರ ನಾಯಕತ್ವದ ಬಗ್ಗೆ ವರಿಷ್ಠರಿಗೆ ಯಾವುದೇ ಗೊಂದಲ ಇಲ್ಲ. ಕರ್ನಾಟಕವನ್ನು ಸರ್ವಾಂಗೀಣ ಅಭಿವೃದ್ಧಿ ಮಾಡಬೇಕೆಂಬ ಪರಿಕಲ್ಪನೆಯೊಂದಿಗೆ ಸರ್ಕಾರ ಮುನ್ನೆಡೆಸುತ್ತಿದ್ದಾರೆ. ಮಂತ್ರಿ ಮಾಡಲಿಲ್ಲ ಎಂಬ ಒಂದೇ ಕಾರಣಕ್ಕೆ ಸರ್ಕಾರ ಮತ್ತು ಪಕ್ಷದಲ್ಲಿ ಗೊಂದಲ ಸೃಷ್ಟಿಸುವುದು ಸರಿಯೇ ಎಂದು ಹರಿಹಾಯ್ದರು.

ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನದ ಬಳಿಕ ಬಿಜೆಪಿ ಅಧಿಕಾರಕ್ಕೆ ಬಂದಿದೆ. ನಮ್ಮ ಪಕ್ಷವೇ ಬಹುಮತ ಇಲ್ಲದಿದ್ದಾಗ ಕಾಂಗ್ರೆಸ್-ಜೆಡಿಎಸ್‍ಗೆ ರಾಜೀನಾಮೆ ಕೊಟ್ಟು ಬಂದವರನ್ನು ಸಂಪುಟಕ್ಕೆ ತೆಗೆದುಕೊಳ್ಳುವ ಅನಿವಾರ್ಯತೆ ಇತ್ತು. ಯತ್ನಾಳ್ ಅವರಿಗಿಂತಲೂ ಹಿರಿಯರೇ ತ್ಯಾಗ ಮಾಡಿ ಸುಮ್ಮನಿದ್ದಾರೆ ಎಂದು ಪ್ರಶ್ನಿಸಿದರು. ಯತ್ನಾಳ್ ಮಾತ್ರ ಯಾವುದೋ ಭ್ರಮಾ ಲೋಕದಲ್ಲಿದ್ದು, ಏನೇನೋ ಮಾತನಾಡಬಾರದೆಂದು ತಿರುಗೇಟು ನೀಡಿದರು.

ಕಳೆದ ಬಾರಿ ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಟೀಕೆ ಮಾಡಿದ್ದೀರಿ. ಆಗ ಯಡಿಯೂರಪ್ಪನವರನ್ನು ಹಾಡಿ ಹೊಗಳಿದ್ದೇ ತಾವು. ಈಗ ಏಕಾಏಕಿ ಅವರನ್ನು ಟೀಕಿಸುತ್ತೀದ್ದೀರಿ. ತಾವೊಬ್ಬ ದುರಂತ ನಾಯಕನಾಗುವುದು ಬೇಡ ಎಂದು ಮನವಿ ಮಾಡಿದರು. ಬಿಜಾಪುರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವಲ್ಲಿ ಅನ್ಯಾಯವಾಗಿದ್ದರೆ ಸಿಎಂ ಬಳಿ ಬಂದು ಚರ್ಚೆ ಮಾಡಿ ಮಾಧ್ಯಮಗಳ ಬಳಿ ಹೋಗಿ ಬಾಯಿಗೆ ಬಂದಂತೆ ಮಾತನಾಡಿದರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಪಕ್ಷದ ಶಿಸ್ತನ್ನು ಯಾರೊಬ್ಬರೂ ಉಲ್ಲಂಘನೆ ಮಾಡಬಾರದು ಎಂದರು.

ವಿಶ್ವದೆಲ್ಲೆಡೆ ಕೋವಿಡ್‍ನಿಂದಾಗಿ ಆರ್ಥಿಕ ಸಮಸ್ಯೆ ಉಂಟಾಗಿದೆ. ಸರ್ಕಾರದ ಬೊಕ್ಕಸಕ್ಕೆ ಆದಾಯ ಬರುತ್ತಿಲ್ಲ ಎಂಬುದು ಎಲ್ಲರಿಗೂ ತಿಳಿದ ವಿಷಯ.ಇಂತಹ ಕ್ಲಿಷ್ಟಕರ ಪರಿಸ್ಥಿಯಲ್ಲೂ ಬಿಎಸ್‍ವೈ ಸರ್ಕಾರ ಮುನ್ನೆಡೆಸುತ್ತಿದ್ದಾರೆ.  ಸ್ವಾರ್ಥಕ್ಕಾಗಿ ಮುಂದೆಯೂ ಇಂತಹ ಹೇಳಿಕೆ ನೀಡಬಾರದು. ಯಡಿಯೂರಪ್ಪನವರು ಉತ್ತರಕರ್ನಾಟಕಕ್ಕೆ ಅನ್ಯಾಯ ಮಾಡಿಲ್ಲ.

ಆ ಭಾಗದ ಸರ್ವಾಂಗೀಣ ಅಭಿವೃದ್ಧಿಗೆ ತಮ್ಮದೇ ಆದ ಪರಿಕಲ್ಪನೆ ಇಟ್ಟುಕೊಂಡಿದ್ದಾರೆ. ಕೃಷಿ ನೀರಾವರಿ , ಶಿಕ್ಷಣ, ಉದ್ಯೋಗ, ಕೈಗಾರಿಕೆ ಸೇರಿದಂತೆ ಪ್ರತಿಯೊಂದು ಕ್ಷೇತ್ರಕ್ಕೂ ವಿಶೇಷ ಗಮನ ಕೊಟ್ಟಿದ್ದಾರೆ. ಸಂಪುಟದಲ್ಲಿ ಉತ್ತರ ಕರ್ನಾಟಕ ಭಾಗದವರಿಗೆ ಅದ್ಯತೆ ನೀಡಲಾಗಿದೆ. ಕೆಲವು ಶಾಸಕರಿಗೆ ನಿಗಮಮಂಡಳಿಯಲ್ಲಿ ಸ್ಥಾನ ಕೊಟ್ಟಿದ್ದಾರೆ.

ಯತ್ನಾಳ್ ಹೇಳಿದಂತೆ ಯಡಿಯೂರಪ್ಪ ನಾಯಕತ್ವ ಬದಲಾಯಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಪಕ್ಷದ ಬಹುತೇಕ ಎಲ್ಲ ಶಾಸಕರು ಅವರ ನಾಯಕತ್ವವಕ್ಕೆ ಬೆಂಬಲ ಸೂಚಿಸಿದ್ದಾರೆ ಎಂದರು.  ಎಲ್ಲಾ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತಿರುವಾಗ ಯತ್ನಾಳ್ ಇಂತಹ ಹೇಳಿಕೆ ಕೊಡುವುದು ಸರಿಯೇ ಎಂದು ಪ್ರಶ್ನಿಸಿದರು.

ಮಾಜಿ ಪ್ರದಾನಿ ಅಟಲ್ ಬಿಹಾರ್ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದೀರಿ ನಿಮ್ಮ ಬಗ್ಗೆ ವೈಯಕ್ತಿಕವಾಗಿ ತಮಗೆ ತುಂಬಾ ಗೌರವವಿದೆ. ಸುಖಾಸುಮ್ಮನೆ ಇಂತಹ ಹೇಳಿಕೆ ಕೊಟ್ಟು ದುರಂತ ನಾಯಕರಾಗದೇ ಏನೇ ಸಮಸ್ಯೆ ಇದ್ದರೂ ಪಕ್ಷದ ಚೌಕಟ್ಟಿನಲ್ಲೇ ಮಾತನಾಡಬೇಕು. ಶಿಸ್ತು ಉಲ್ಲಂಘಿಸಿದರೆ ಕ್ರಮ ಜರುಗಿಸುವುದು ಅನಿವಾರ್ಯ. ಈಗಲೂ ಕೂಡ ಯತ್ನಾಳ್ ಲಕ್ಷ್ಮಣರೇಖೆ ದಾಟಬಾರದು ಎಂದು ಮನವಿ ಮಾಡಿದರು.