ನೂತನ ಸಚಿವರೊಬ್ಬರ ಹಗರಣದ ಸಾಕ್ಷಿಯೊಂದಿಗೆ ದೆಹಲಿಗೆ ತೆರಳಿದ ರೇಣುಕಾಚಾರ್ಯ..!

Spread the love

ಬೆಂಗಳೂರು,ಜ.14- ಸಂಪುಟಕ್ಕೆ ನೂತನವಾಗಿ ಸೇರ್ಪಡೆಯಾದ ಸಚಿವರೊಬ್ಬರ ಹಗರಣ ಕುರಿತ ದಾಖಲೆಗಳನ್ನು ಕೇಂದ್ರ ವರಿಷ್ಠರಿಗೆ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ತಲುಪಿಸಿರುವುದು ಆಡಳಿತ ರೂಢ ಬಿಜೆಪಿಯಲ್ಲಿ ಭಾರೀ ಬಿರುಗಾಳಿಯನ್ನೇ ಎಬ್ಬಿಸಿದೆ. ಇಂದು ಬೆಳ್ಳಂಬೆಳಗ್ಗೆ ದೆಹಲಿಗೆ ತೆರಳಿದ ರೇಣುಕಾಚಾರ್ಯ, ಪಕ್ಷದ ಪ್ರಮುಖರೊಬ್ಬರನ್ನು ರಹಸ್ಯವಾಗಿ ಭೇಟಿ ಮಾಡಿ ಸಂಪುಟಕ್ಕೆ ಸೇರ್ಪಡೆಯಾಗಿರುವ ನೂತನ ಸಚಿವರೊಬ್ಬರ ಹಗರಣಗಳ ದಾಖಲೆಗಳನ್ನು ನೀಡಿದ್ದಾರೆ ಎನ್ನಲಾಗಿದೆ.

ಭ್ರಷ್ಟಾಚಾರ ರಹಿತ ಆಡಳಿತ ನೀಡುವುದಾಗಿ ವಾಗ್ದಾನ ಮಾಡಿರುವ ಬಿಜೆಪಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಇಂತಹವರನ್ನು ಸಂಪುಟಕ್ಕೆ ತೆಗೆದುಕೊಂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದ್ದಾರೆ ಎಂದು ತಿಳಿದು ಬಂದಿದೆ. ಇದಕ್ಕೂ ಮುನ್ನ ನವದೆಹಲಿಗೆ ತೆರಳುವ ಮುನ್ನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ಸಚಿವ ಸಿ.ಪಿ.ಯೋಗೇಶ್ವರ್ ವಿರುದ್ಧ ಕೆಂಡಕಾರಿದರು. ಬ್ಲ್ಯಾಕ್‍ಮೇಲ್ ಮಾಡಿದವರಿಗೆ, ನಾಯಕತ್ವ ಬದಲಾವಣೆ ಮಾಡಲು ಹೊರಟವರಿಗೆ ಮಂತ್ರಿಗಿರಿ ಕೊಟ್ಟಿದ್ದಾರೆ ಎಂದು ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

ಯಾವುದೇ ಹಿರಿಯ ನಾಯಕರ ಭೇಟಿಗೆ ಸಮಯ ಕೇಳಿಲ್ಲ. ಸಿಕ್ಕ ನಾಯಕರನ್ನು ಭೇಟಿಯಾಗಿ ಮಾತನಾಡಿಕೊಂಡು ಬರುವೆ. ನಾನು ಎಂದಿಗೂ ಪಕ್ಷ ಸಂಘಟನೆ ವಿರುದ್ಧವಾಗಲೀ, ನಾಯಕತ್ವದ ಬಗ್ಗೆಯಾಗಲೀ ಮಾತನಾಡಿಲ್ಲ. 6ಕ್ಕಿಂತ ಹೆಚ್ಚು ಸಲ ಗೆದ್ದವರನ್ನು ಬಿಟ್ಟು ನಾಯಕತ್ವ ಬದಲಾವಣೆಗಾಗಿ ಓಡಾಡುತ್ತಿದ್ದವರಿಗೆ, ಶಾಸಕರಲ್ಲಿ ವಿಷಬೀಜ ಬಿತ್ತಿ ಹುಳಿಹಿಂಡಲು ಯತ್ನಿಸಿದವರಿಗೆ ಮಣೆ ಹಾಕಿದ್ದಾರೆ ಎಂದು ಬೇಸರ ತೋಡಿಕೊಂಡರು.

ಯಡಿಯೂರಪ್ಪ ಮತ್ತು ನರೇಂದ್ರ ಮೋದಿ ಅವರ ಮುಖ ನೋಡಿ ವಿವಿಧ ಪಕ್ಷಗಳ ಶಾಸಕರು ಬಿಜೆಪಿಗೆ ಬಂದರು. ಸಿ.ಪಿ.ಯೋಗೇಶ್ವರ್ ಮುಖ ನೋಡಿ ಎಂ.ಟಿ.ಬಿ.ನಾಗರಾಜ್ ಮತ್ತು ಆರ್.ಶಂಕರ್ ಬರಲಿಲ್ಲ. ಪಕ್ಷಕ್ಕೆ, ಸರ್ಕಾರಕ್ಕೆ ಯೋಗೇಶ್ವರ್ ಕೊಡುಗೆ ಏನು ಎಂದು ಅವರು ಪ್ರಶ್ನಿಸಿದರು. ತಮ್ಮ ಕ್ಷೇತ್ರದಲ್ಲಿಯೇ ಅವರಿಗೆ ಗೆಲ್ಲಲು ಆಗಲಿಲ್ಲ. ಲೋಕಸಭೆ ಚುನಾವಣೆ, ರಾಮನಗರ ಉಪಚುನಾವಣೆಯಲ್ಲಿ ತಾವು ಸ್ಪರ್ಧಿಸದೇ ಬೇರೆಯವರನ್ನು ನಿಲ್ಲಿಸಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡರು. ಮೆಗಾಸಿಟಿ ಯೋಜನೆಯಲ್ಲಿ ದೊಡ್ಡ ಹಗರಣ ಆಗಿದೆ. ನಮ್ಮ ನಾಯಕರಿಗೆ ಈ ಬಗ್ಗೆ ದೂರು ಹೇಳುವೆ. ಸಮಯ ಬಂದಾಗ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದರು.

ಕೇವಲ ಒಬ್ಬರಿಂದ ಬಿಜೆಪಿ ಸರ್ಕಾರ ರಚನೆಯಾಗಿಲ್ಲ. ಎಲ್ಲಾ ಶಾಸಕರು ಒಗ್ಗಟ್ಟಾಗಿದ್ದರಿಂದ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೆ. ಸಂಪುಟ ವಿಸ್ತರಣೆ ವೇಳೆ ಸಮಾನ ಅವಕಾಶ ನೀಡಬೇಕಿತ್ತು ಎಂದು ಅಸಮಾಧಾನ ಹೊರ ಹಾಕಿದರು. ಏನು ಇಲ್ಲದ ವೇಳೆ ಪಕ್ಷದ ಟಿಕೆಟ್ ನೀಡ ಯಡಿಯೂರಪ್ಪನವರು ನನ್ನನ್ನು ಬೆಳೆಸಿದರು. ಆದರೆ, ನಿನ್ನೆ ರಚನೆಯಾದ ಸಂಪುಟ ವಿಸ್ತರಣೆಯಲ್ಲಿ ಮಧ್ಯಕರ್ನಾಟಕ ಹಾಗೂ ದಾವಣಗೆರೆ ಜಿಲ್ಲೆಯ ಯಾರಿಗಾದರೂ ಅವಕಾಶ ಕೊಡಬೇಕೆಂದು ಮನವಿ ಮಾಡಿಕೊಳ್ಳಲಾಗಿತ್ತು ಎಂದರು.

ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಿಗೆ ಮಾತ್ರ ಸಂಪುಟ ಸೀಮಿತವಾಗಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಹಾಗೂ ಕರಾವಳಿ ಭಾಗಕ್ಕೂ ಅನ್ಯಾಯವಾಗಿದೆ. ಸಚಿವ ಸ್ಥಾನ ಸಿಗದೆ ನನಗೂ ನೋವಾಗಿದೆ. ಸಂಘಟನೆಯಿಂದ ಮೇಲೆ ಬಂದವನು ನಾನು. ಯಡಿಯೂರಪ್ಪ ನಾಯಕತ್ವದ ಅಥವಾ ಪಕ್ಷದ ಬಗ್ಗೆಯಾಗಲಿ ಎಂದೂ ನಾನು ಮಾತನಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಯಡಿಯೂರಪ್ಪ ಅವರು ನನಗೆ ತಂದೆ ಸಮಾನ, ಪಕ್ಷ ತಾಯಿ ಸಮಾನ. ನನಗೆ ನೋವಾಗಿರುವುದನ್ನು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದೇನೆ. ಪಕ್ಷ, ಸಂಘಟನೆ ಮತ್ತು ನಾಯಕತ್ವದ ವಿರುದ್ಧ ನಮ್ಮ ಅಸಮಾಧಾನವಿಲ್ಲ. ಸೂಕ್ತ ಕಾಲದಲ್ಲಿ ಎಲ್ಲದಕ್ಕೂ ಉತ್ತರ ಕೊಡುತ್ತೇನೆ ಎಂದು ಹೇಳಿ ದೆಹಲಿಗೆ ಪ್ರಯಾಣ ಬೆಳೆಸಿದರು.

Facebook Comments