ಬೆಂಗಳೂರು,ಜು.22- ಸೋನಿಯಾ ಗಾಂಧಿ, ಮತ್ತು ರಾಹುಲ್ ಗಾಂಧಿ ಹೆಸರಿನಲ್ಲಿ ಕಾಂಗ್ರೆಸ್ ಪಕ್ಷದವರು ಮೂರು ನಾಲ್ಕು ತಲೆಮಾರಿಗಾಗುವಷ್ಟು ಹಣ ಮಾಡಿಕೊಂಡಿದ್ದಾರೆ ಎಂದು ಶಾಸಕ ರಮೇಶ್‍ಕುಮಾರ್ ಅವರ ಹೇಳಿಕೆಗೆ ಬದ್ದರಾಗಿ ಕೂಡಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ತಮ್ಮ ರಾಜೀನಾಮೆ ನೀಡಬೇಕೆಂದು ಎಂ.ಪಿ.ರೇಣುಕಾಚಾರ್ಯ ಒತ್ತಾಯಿಸಿದರು.
ರಮೇಶ್‍ಕುಮಾರ್ ಅವರು ಬಾಯಿ ತಪ್ಪಿ ಈ ಹೇಳಿಕೆ ನೀಡಿಲ್ಲ. ಅವರ ಮನಸ್ಸಿನಲ್ಲಿ ಏನಿತ್ತೋ ಅದನ್ನೇ ಹೇಳಿದ್ದಾರೆ. ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್ ನಾಯಕರು ಹೋರಾಟ ನಡೆಸುತ್ತಿದ್ದಾರೆ. ಮೂರ್ನಾಲ್ಕು ತಲೆಮಾರಿಗೆ ಆಗುವಷ್ಟು ಎಂದರೆ ನೀವು ಎಷ್ಟು ಭ್ರಷ್ಟಾಚಾರ ನಡೆಸಿರಬಹುದು ಎಂದು ಪ್ರಶ್ನಿಸಿದರು.
ಈ ಕುರಿತು ಮೊದಲು ನೀವು ಆತ್ಮಾವಲೋಕನ ಮಾಡಿಕೊಳ್ಳಲಿ ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದರು. ರಮೇಶ್‍ಕುಮಾರ್ ಏನೇ ಹೇಳೀದರೂ ಅದಕ್ಕೆ ಒಂದು ತೂಕವಿರುತ್ತದೆ. ಅವರು ಸುಖಾಸುಮ್ಮನೆ ಈ ಮಾತನ್ನು ಹೇಳಿಲ್ಲ. ಬಿಜೆಪಿ ವಿರುದ್ಧ ಹೋರಾಟ ನಡೆಸುವ ತಾಕತ್ತಿದ್ದರೆ ಮೊದಲು ಈ ಹೇಳಿಕೆಗೆ ಉತ್ತರ ಕೊಡಿ ಎಂದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ರದ್ದುಪಡಿಸಿ ಪ್ರಕರಣವನ್ನು ನ್ಯಾಯಾಲಯಗಳು ನಿರಾಕರಿಸಲಾಗಿದೆ. ದೇಶದ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರೇನೂ ಆಕಾಶದಿಂದ ಇಳಿದಿದ್ದಾರ. ತನಿಖೆಗೆ ಅಡ್ಡಿಪಡಿಸಿ ಪ್ರತಿಭಟನೆ ನಡೆಸುವುದು ಕಾಂಗ್ರೆಸ್ ಪಕ್ಷಕ್ಕೆ ಶೋಭೆ ತರುವುದಿಲ್ಲ ಎಂದರು.
ನ್ಯಾಷನಲ್ ಹೆರಾಲ್ಡ್ ಹಗರಣ ನಡೆದಿಯೋ ಇಲ್ಲವೋ ಎಂಬುದನ್ನು ನ್ಯಾಯಾಲಯಗಳು ನಿರ್ಧರಿಸುತ್ತದೆ. ಆದರೆ ತನಿಖೆಯೇ ಮಾಡಬಾರದೆಂದು ಹೇಳುವುದು ಎಷ್ಟರಮಟ್ಟಿಗೆ ಸರಿ. ನಿಮ್ಮ ಕಾಲದಲ್ಲಿ ಏನೇನು ನಡೆದಿತ್ತು ಗೊತ್ತಿಲ್ಲವೇ ಎಂದು ರೇಣುಕಾಚಾರ್ಯ ಹರಿಹಾಯ್ದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್ ಷಾ ಕೂಡ ತನಿಖೆಯನ್ನು ಎದುರಿಸಿದ್ದಾರೆ. ಆಗ ಅವರು ಈ ರೀತಿ ಹಾದಿ ರಂಪಾಟ, ಬೀದಿ ರಂಪಾಟ ಮಾಡಿರಲಿಲ್ಲ. ಗಾಂಧಿ ಕುಟುಂಬಕ್ಕೆ ಮತ್ತು ಬೇರೆಯವರಿಗೆ ಪ್ರತ್ಯೇಕ ಸಂವಿಧಾನವಿದೆಯೇ ಎಂದು ಪ್ರಶ್ನಿಸಿದರು.
ಅಧಿಕಾರ ಹಿಡಿಯಬೇಕೆಂಬ ಹಪಾಹಪಿಗೆ ಬಿದ್ದಿರುವ ಕಾಂಗ್ರೆಸ್ ಜಾತಿ ಜಾತಿಗಳ ನಡುವೆ ವಿಷ ಬೀಜ ಬಿತ್ತುತ್ತಿದೆ. ಜಾತ್ಯತೀತ ಎಂದು ಹೇಳಿಕೊಳ್ಳುವ ಕಾಂಗ್ರೆಸ್‍ನವರೇ ಜಾತಿ ಒಡಕು ಮೂಡಿಸುತ್ತಿದ್ದಾರೆ ಎಂದರು.
ಬಿಜೆಪಿ ಎಂದಿಗೂ ಓಲೈಕೆ ರಾಜಕಾರಣ ಮಾಡುವುದಿಲ್ಲ. ಎಲ್ಲ ಸಮಾಜವನ್ನು ಸಮನಾಗಿ ಕಂಡು ಸರ್ಕಾರ ನಡೆಸುತ್ತಿದೆ. ಕಾಂಗ್ರೆಸ್‍ನವರು ಯಾವುದೇ ಕಾರಣಕ್ಕೂ ಮುಂದಿನ ಬಾರಿಯೂ ಅಕಾರಕ್ಕೆಬರುವುದಿಲ್ಲ. ಕೂಸು ಹುಟ್ಟುವ ಮುನ್ನವೇ ಕುಲಾವಿ ಎಂಬಂತೆ ಹಗಲುಗನಸು ಕಾಣುವುದು ಬೇಡ ಎಂದು ಹೇಳಿದರು.