ಬೆಂಗಳೂರು,ಸೆ.29- ಸಿದ್ದರಾಮಯ್ಯನವರು ಹಿರಿಯರು, ಅಪಾರ ಅನುಭವಸ್ಥರು. ಅವರು ಸಿಎಂ ಆಗಿದ್ದಾಗ 175 ಪಿಎಫ್‍ಐ ಕಾರ್ಯಕರ್ತರ ಮೇಲಿನ ಕೇಸ್‍ಗಳನ್ನು ವಾಪಸ್ ಪಡೆದುಕೊಂಡರು ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.
ಯಾವ ಕಾರಣಕ್ಕೆ ಕೇಸ್ ವಾಪಸ್ ಪಡೆದರು ಎಂದು ಪ್ರಶಸ್ನಿಸಿದ ಅವರು,ಆದರೆ, ಅದರ ಪರಿಣಾಮ ಮಾತ್ರ ಹಿಂದೂ, ಬಿಜೆಪಿ ಕಾರ್ಯಕರ್ತರ ಮೇಲಾಗಿ ಕೊಲೆಯಾಯಿತು ಎಂದರು. ಸಿದ್ದರಾಮಯ್ಯ ಅಲ್ಪಸಂಖ್ಯಾತರ ವೋಟ್ ಬ್ಯಾಂಕ್ ಮಾಡಿಕೊಳ್ಳುತ್ತಿದ್ದಾರೆ ಟೀಕಿಸಿದ ಅವರು, ಹಿಂದುತ್ವಕ್ಕೆ ಮೊದಲು ತನ್ನನ್ನು ಸಮರ್ಪಿಸಿಕೊಂಡ ಸಂಸ್ಥೆ ಆರ್‍ಎಸ್‍ಎಸ್ ದೇಶ ವಿರೋಧಿ ಚಟುವಟಿಕೆ ಕಂಡು ಬಂದಾಗ ಅದರ ವಿರುದ್ಧ ದನಿ ಎತ್ತ್ತಿದೆ. ಕೋವಿಡ್ ಬಂದಾಗ ಜನರ ರಕ್ಷಣೆಗೆ ಬಂದಿದ್ದು ಆರ್‍ಎಸ್‍ಎಸ್, ಸಿದ್ದರಾಮಯ್ಯ ಅಲ್ಲ ಎಂದು ಗುಡುಗಿದರು.
ಆರ್‍ಎಸ್‍ಎಸ್ ವಿರುದ್ಧ ದಾಖಲೆ ಇದ್ದರೆ ಬಿಡುಗಡೆ ಮಾಡಿ. ಒಂದೇ ಒಂದು ವಿರೋಧಿ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದರೆ ಸಾಕ್ಷಿ ಕೊಡಿ. ತಾಕತ್ ಇದ್ದರೆ ಆರ್‍ಎಸ್‍ಎಸ್ ಬ್ಯಾನ್ ಮಾಡಿ ನೋಡಿ ಎಂದು ಸವಾಲು ಹಾಕಿದರು. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಮಾಡುತ್ತಿರುವುದು ಭಾರತ್ ಜೋಡೊ ಯಾತ್ರೆಯಲ್ಲ ಭಾರತ್ ತೋಡೊ ಯಾತ್ರೆ. ರಾಹುಲ್ ಗಾಂಧಿಗೆ ಪ್ರಬುದ್ದತೆ ಇಲ್ಲ, ಅವರಿನ್ನು ಎಳಸು, ಕಾಮಿಡಿ ಪೀಸ್ ಎಂದು ವ್ಯಂಗ್ಯವಾಡಿದರು.
ನಿಮ್ಮ ಪಕ್ಷ ಅಖಂಡ ಭಾರತವನ್ನು ಒಡೆದು ಹಾಕಿದೆಯಾ, ಭಾರತದಲ್ಲಿ ಐಕ್ಯತೆ ಇಲ್ಲವೇ? ದೇಶದ ಎಲ್ಲ ಭಾಗವನ್ನು ಬಿಟ್ಟುಕೊಟ್ಟಿದ್ದು ಕಾಂಗ್ರೆಸ್. ಕಾಂಗ್ರೆಸ್ ಏನಾದರೂ ಅಧಿಕಾರದಲ್ಲಿದ್ದರೆ ಕಾಶ್ಮೀರವನ್ನು ಬಿಟ್ಟು ಕೊಡುತ್ತಿದ್ದರು ಎಂದು ಲೇವಡಿ ಮಾಡಿದರು. ಕಾಂಗ್ರೆಸ್‍ನ ಧುರೀಣ ಗುಲಾಂ ನಭಿ ಅಜಾದ್ ಪಕ್ಷ ತೊರೆದಿದ್ದಾರೆ. ಇದರಿಂದಲೇ ಗೊತ್ತಾಗುತ್ತದೆ ಕಾಂಗ್ರೆಸ್‍ನಲ್ಲಿನ ಐಕ್ಯತೆ ಎಂದು ಆರೋಪಿಸಿದ್ದಾರೆ.
ಭಾರತ್ ಜೋಡೊ ಯಾತ್ರೆ ಸಂಪೂರ್ಣ ವಿಫಲವಾಗಲಿದೆ. ನಿಮ್ಮ ಒಡೆದ ಮನೆಯನ್ನು ಸರಿ ಮಾಡೋಕೆ ನಿಮಗೆ ಆಗುತ್ತಿಲ್ಲ. ನಿಮ್ಮ ಕುರ್ಚಿಯನ್ನು ಗಟ್ಟಿ ಮಾಡಿಕೊಳ್ಳಲು ಆಗುತ್ತಿಲ್ಲ. ಕರ್ನಾಟಕದಲ್ಲಿ ನೀವು ಎಲ್ಲೆಲ್ಲಿ ಕಾಲಿಡುತ್ತೀರೋ ಅಲ್ಲೆಲ್ಲ ಜನ ತಕ್ಕ ಉತ್ತರ ಕೊಡುತ್ತಾರೆ ಎಂದು ಎಚ್ಚರಿಸಿದರು.
ಡಿ.ಕೆ.ಶಿವಕುಮಾರ್ ಬಿಜೆಪಿಗೆ ಯಾವ ಲೆಕ್ಕ, ಉಪ್ಪು ತಿಂದವನು ನೀರು ಕುಡಿಯಲೇಬೇಕು. ನೀವು ಯಾರು ಎಂದು ಬಿಜೆಪಿ ನಿಮ್ಮನ್ನ ಟಾರ್ಗೆಟ್ ಮಾಡಬೇಕು ಎಂದು ಪ್ರಶ್ನಿಸಿದರು. ಸದ್ಯ ಬೊಮ್ಮಾಯಿ ಅಧಿಕಾರ ಗಟ್ಟಿಯಾಗಿದೆ. ಈಶ್ವರಪ್ಪ, ಜಾರಕಿಹೊಳಿ ಯಾರು ಅಸಮಾಧಾನ ಹೊಂದಿಲ್ಲ. ಕೆಲವರಿಗೆ ಎರಡ್ಮೂರು ಖಾತೆಗಳಿದೆ. ಖಾಲಿ ಇರುವ ಸಚಿವ ಸ್ಥಾನ ಭರ್ತಿ ಮಾಡಬೇಕು. ನನಗೆ ಮಾತ್ರ ಎಂದು ಕೇಳುತ್ತಿಲ್ಲ. 6 ಖಾತೆಗಳು ಖಾಲಿ ಇವೆ. ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದರು.
ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಹಗಲು ರಾತ್ರಿ ಕೆಲಸ ಮಾಡಿದ್ದೇನೆ. ಬಿಎಸ್‍ವೈ ಮುಖ್ಯಮಂತ್ರಿಯಾದಾಗ ನನಗೆ ಸಚಿವ ಸ್ಥಾನ ಕೊಡಬೇಕಿತ್ತು. ಆದರೆ ಕೊಟ್ಟಿಲ್ಲ. ನಾನು ಬಂಡಾಯ ಎದ್ನಾ,ಬಿಎಸ್‍ವೈ ವಿರುದ್ದ ಮಾತನಾಡಿದ್ನಾ!? ಎಂದು ಪ್ರಶ್ನಿಸಿದರು.
ನಾನು ಸಚಿವಸ್ಥಾನದ ಆಕಾಂಕ್ಷಿಯಲ್ಲ ನಾನು ಶಾಸಕನಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಗಳ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದೇನೆ. ನನ್ನ ಕ್ಷೇತ್ರದ ಜನತೆ ನನ್ನ ದೇವರು ನನಗೆ ಯಾವುದೇ ಅಸಮಾಧಾನ ಇಲ್ಲ ಆದ್ರೆ ನನಗೆ ಅನ್ಯಾಯವಾಗಿರೋದು ನಿಜ. ನನ್ನ ಕರ್ತವ್ಯ ನಾನು ಮಾಡಿದ್ದೇನೆ ಎಂದರು.