ಸವದಿಗೆ ಡಿಸಿಎಂ ಪಟ್ಟ: ಸೋಮಲಿಂಗಪ್ಪ ಗರಂ

Spread the love

ಬಳ್ಳಾರಿ,ಆ.27- ಲಕ್ಷ್ಮಣ ಸವದಿ ಅವರಿಗೆ ಉಪಮುಖ್ಯಮಂತ್ರಿ ನೀಡಿರುವುದಕ್ಕೆ ಸಿರಗುಪ್ಪ ಶಾಸಕ ಸೋಮಲಿಂಗಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಕ್ಷ್ಮಣ ಸವದಿ ಶಾಸಕರಾಗಿಲ್ಲ, ಆದರೂ ಅವರಿಗೆ ಸಚಿವ ಸ್ಥಾನ ಕೊಟ್ಟಿದ್ದಾರೆ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಡಿಸಿಎಂ ಪಟ್ಟವನ್ನು ಕಟ್ಟಿದ್ದಾರೆ. ಇದು ಯಾವ ನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಪಕ್ಷದಲ್ಲಿ ಹಿರಿಯ ಶಾಸಕರು ಬಹಳಷ್ಟು ಮಂದಿ ಇದ್ದಾರೆ. ಅವರಿಗೆ ಸಚಿವ ಸ್ಥಾನ ಕೊಡಬಹುದಿತ್ತು. ಅದು ಬಿಟ್ಟು ಅದ್ಯಾವ ಕಾರಣಕ್ಕಾಗಿ ಸವದಿಗೆ ಎರಡೂ ಸ್ಥಾನಗಳನ್ನು ಕೊಡಲಾಗಿದೆ. ಇದನ್ನು ನಾನು ನೇರವಾಗಿಯೇ ವಿರೋಧಿಸುತ್ತೇನೆ ಎಂದು ಹೇಳಿದರು.

ನಾನು ಹಿರಿಯ ಶಾಸಕ, ಅನುಭವಿ ರಾಜಕಾರಣಿಯಾಗಿದ್ದೇನೆ ರಾಜಕೀಯವಾಗಿ ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇನೆ.ಪಕ್ಷ ಕಟ್ಟಲು ಶ್ರಮಿಸಿದ್ದೇನೆ. ನನ್ನಂತಹ ಪ್ರಾಮಾಣಿಕರು ಬಿಜೆಪಿಯಲ್ಲಿ ಬಹಳಷ್ಟು ಜನ ಇದ್ದಾರೆ. ನಮಗ್ಯಾರಿಗೂ ಆದ್ಯತೆ ನೀಡದೆ. ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ಜೊತೆಗೆ ಉಪಮುಖ್ಯಮಂತ್ರಿ ಪಟ್ಟ ಕಟ್ಟಿರುವುದು ಸರಿಯಲ್ಲ. ಇದರಿಂದ ಪ್ರಾಮಾಣಿಕರಿಗೆ ಅನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.