ಸೌಮ್ಯಾರೆಡ್ಡಿ ವಿರುದ್ಧ FIR ದಾಖಲಿಸಿ ಬಿಜೆಪಿಯಿಂದ ಸೇಡಿನ ರಾಜಕಾರಣ : ಕಾಂಗ್ರೆಸ್ ಪ್ರತಿಭಟನೆ

ಬೆಂಗಳೂರು, ಜ.23- ಶಾಸಕಿ ಸೌಮ್ಯಾರೆಡ್ಡಿ ವಿರುದ್ಧ ಎಫ್‍ಐಆರ್ ದಾಖಲಿಸುವ ಮೂಲಕ ಬಿಜೆಪಿ ಸರ್ಕಾರ ಸೇಡಿನ ರಾಜಕಾರಣ ಮುಂದುವರಿಸಿದೆ ಎಂದು ಕಾಂಗ್ರೆಸ್ ಕಿಡಿಕಾರಿದೆ. ರೈತರ ಹಕ್ಕಿಗಾಗಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಶಾಸಕಿ ಸೌಮ್ಯಾರೆಡ್ಡಿ ಅವರನ್ನು ಭದ್ರತೆಯಲ್ಲಿದ್ದ ಪೊಲೀಸರೇ ಎಳೆದಾಡಿದ್ದಾರೆ. ಆದರೆ, ಅದನ್ನು ಮರೆಮಾಚಿ ಸುಳ್ಳು ಆರೋಪಗಳನ್ನು ಹೊರಿಸಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿದೆ.

ಬಿಜೆಪಿ ಸರ್ಕಾರದಲ್ಲಿ ನಡೆದಿರುವ ಭ್ರಷ್ಟಾಚಾರ ಹಾಗೂ ಆಂತರಿಕ ಕಲಹವನ್ನು ಮುಚ್ಚಿಹಾಕುವ ಪ್ರಯತ್ನಗಳು ನಡೆಯುತ್ತಿದ್ದು, ಇದರ ನಡುವೆ ನ್ಯಾಯಯುತ ಹೋರಾಟಕ್ಕಿಳಿದು ರೈತರ ಪರವಾಗಿ ದನಿ ಎತ್ತಿದ ಶಾಸಕಿ ಸೌಮ್ಯಾರೆಡ್ಡಿ ಅವರನ್ನು ಗುರಿಯಾಗಿಸಿಕೊಂಡು ಎಫ್‍ಐಆರ್ ದಾಖಲಿಸಿರುವುದು ಸರಿಯಲ್ಲ ಎಂದು ಇಂದು ರೇಸ್‍ಕೋರ್ಸ್ ಬಳಿಯ ಕಾಂಗ್ರೆಸ್ ಭವನದ ಗಾಂಧಿಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆಯಲ್ಲಿ ಮುಖಂಡರಾದ ಕವಿಕ ಮಾಜಿ ಅಧ್ಯಕ್ಷ ಎಸ್.ಮನೋಹರ್, ಜಿ.ಜನಾರ್ಧನ್, ಎ.ಆನಂದ್, ಎಲ್.ಜಯಸಿಂಹ, ಎಂ.ಎ ಸಲೀಮ್, ಈ.ಶೇಖರ್, ಬಿಟಿಎಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗೋವರ್ಧನ್ ರೆಡ್ಡಿ , ಎಸ್.ಆನಂದ್, ಹರೀಶ್ ಬಾಬು, ರಾಮಕೃಷ್ಣ, ಪ್ರಕಾಶ್, ಜಗನಾಥ್, ಆದಿಶೇಷ, ಮಹೇಶ್, ಪುಟ್ಟರಾಜು, ಉಮೇಶ್ ಮತ್ತು ಹಲವಾರು ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.