ರಾಜೀನಾಮೆ ನೀಡಿದ ಶಿಕ್ಷಕಿ ಮನೆಗೆ ಸುರೇಶ್ ಕುಮಾರ್ ಭೇಟಿ,  ಸಾಂತ್ವನ

Social Share

ಬೆಂಗಳೂರು, ಜ.16- ನಗರದ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ‌ ಮಾಡುತ್ತಿದ್ದ ಯುವತಿಯೊಬ್ಬರನ್ನು ಆಕೆಯದಲ್ಲದ ತಪ್ಪಿಗೆ ಕೋಮು ವಿವಾದಕ್ಕೆ ಎಳೆದು ಸುಖಾಸುಮ್ಮನೆ ಆರೋಪಿಸಿ ಅನಗತ್ಯ ಗೊಂದಲ ಎಬ್ಬಿಸಿದ ಕಾರಣ, ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಆಕೆಯ ಮನೆಗೆ ನೆನ್ನೆ ತಡರಾತ್ರಿ ಮಾಜಿ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಸಾಂತ್ವನಿಸಿ ಧೈರ್ಯ ತುಂಬಿದ್ದಾರೆ.
ಕೆಳಮಧ್ಯಮ ಕುಟುಂಬದ, ಮನೆಯ ಆಧಾರ ಸ್ಥಂಭವಾದ ಯುವತಿ ಹೊಂದಿದ್ದ ಭವಿಷ್ಯದ ಕುರಿತಾದ ಆತಂಕ, ತನ್ನದಲ್ಲದ ತಪ್ಪಿಗೆ ಎದುರಿಸಬೇಕಾದ‌ ಪರಿಣಾಮಗಳ ಬಗೆಗಿನ‌ ಭಯದ ಕುರಿತು ಆಕೆಗೆ ಧೈರ್ಯ ತುಂಬಿದ ಸುರೇಶ್ ಕುಮಾರ್, ಆಕೆಯೊಂದಿಗೆ ತಾವಿದ್ದೇವೆಂಬ ಭರವಸೆ ತುಂಬಿದ್ದಾರೆ.
ಸಂಬಂಧಪಟ್ಟವರೊಂದಿಗೆ ಸ್ಥಳದಲ್ಲೇ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಆಕೆಗೆ ಅನ್ಯಾಯ ಆಗಬಾರದು ಎಂದು ತಿಳಿಹೇಳಿ, ಆಕೆಗೆ ತಮ್ಮ ಸಂಪೂರ್ಣ ಸಹಕಾರದ ಮಾರ್ಗದರ್ಶನವನ್ನೂ ನೀಡಿದ್ದಾರೆ. “ತಪ್ಪು ಗ್ರಹಿಕೆ ಹಾಗೂ ಸಮೂಹಸನ್ನಿ ಯಿಂದ ಅಮಾಯಕರ ಜೀವನ ಹೇಗೆ ಸಂಪೂರ್ಣ ನಲುಗಿ  ಹೋಗುತ್ತದೆ ಎಂಬುದಕ್ಕೆ ಈ ಶಿಕ್ಷಕಿಯ ಕುಟುಂಬವೇ ಸಾಕ್ಷಿ” ಎಂದು ಸುರೇಶ್ ಕುಮಾರ್ ವಿಷಾದ ವ್ಯಕ್ತ‌ಪಡಿಸಿದ್ದಾರೆ.
ಸಾಮಾಜಿಕ‌ ಜಾಲತಾಣದಲ್ಲಿನ ಅವರ ಪೋಸ್ಟ್ ಗೆ ವ್ಯಾಪಕ‌ಪ್ರಶಂಸೆ ವ್ಯಕ್ತವಾಗಿದ್ದು, ಅವರ ಈ‌ ಸಹಜ ನಡವಳಿಕೆಯು ಸಮಾಜದಲ್ಲಿ ಹಿಂದಿನಿಂದಲೂ ಎಷ್ಟು ಪರಿಣಾಮಕಾರಿಯಾಗಿದೆ ಎಂಬ ಕುರಿತಂತೆ ಹಲವು ಪತ್ರಕರ್ತರು, ಪ್ರಭಾವಿತರಾದವರು ತಮ್ಮ ಸ್ವಂತ ಅನುಭವಗಳನ್ನೂ ದಾಖಲಿಸಿದ್ದಾರೆ. ಹಲವಾರು ಜನ‌ ಆ ನೊಂದ‌ ಶಿಕ್ಷಕಿಯ ಸಹಾಯಕ್ಕೆ ಮುಂದೆ ಬರುತ್ತೇವೆಂದಿದ್ದಾರೆ.

Articles You Might Like

Share This Article