Tuesday, April 23, 2024
Homeರಾಜಕೀಯಬಿಜೆಪಿಯಲ್ಲಿ ಯತ್ನಾಳ್ ಈಗ ಏಕಾಂಗಿ..!

ಬಿಜೆಪಿಯಲ್ಲಿ ಯತ್ನಾಳ್ ಈಗ ಏಕಾಂಗಿ..!

ಬೆಂಗಳೂರು,ಡಿ.26- ಸ್ವಪಕ್ಷೀಯರ ವಿರುದ್ಧವೇ ಆಗಾಗ್ಗೆ ಬೆಂಕಿ ಉಗುಳುವ ಕೇಂದ್ರದ ಮಾಜಿ ಸಚಿವ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಹುತೇಕ ಏಕಾಂಗಿಯಾಗಿದ್ದಾರೆ. ಅಲ್ಲದೆ ಯತ್ನಾಳ್ ಜೊತೆ ಕೈಜೋಡಿಸಿ ತಮ್ಮ ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಮುಂದಾಗಿದ್ದ ಮಾಜಿ ಸಚಿವ ವಿ.ಸೋಮಣ್ಣ ಕೂಡ ಪಕ್ಷದೊಳಗೆ ನಿಧಾನವಾಗಿ ನಿರ್ಲಕ್ಷ್ಯಗೊಳಪಡುತ್ತಿದ್ದಾರೆ.

ಅದರಲ್ಲೂ ಪ್ರತಿದಿನ ಮಾಧ್ಯಮಗಳ ಮುಂದೆ ಯಡಿಯೂರಪ್ಪ ಅವರ ಕುಟುಂಬವನ್ನು ಅತಿಯಾಗಿ ಟೀಕಿಸುವ ಯತ್ನಾಳ್ ಹೇಳಿಕೆಗಳನ್ನು ಯಾರೊಬ್ಬರೂ ಪಕ್ಷದೊಳಗೆ ಗಂಭೀರವಾಗಿ ತೆಗೆದುಕೊಳ್ಳಬಾರದೆಂದು ಕೇಂದ್ರ ನಾಯಕರೇ ಸೂಚನೆ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ವಿಧಾನಸಭೆಯ ಪ್ರತಿಪಕ್ಷದ ನಾಯಕನ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಯತ್ನಾಳ್‍ಗೆ ಪಕ್ಷದೊಳಗೆ ಯಾವುದೇ ಸ್ಥಾನಮಾನ ಸಿಗದಿರುವುದು ಭಾರೀ ಹಿನ್ನಡೆ ಎಂದೇ ಹೇಳಲಾಗುತ್ತಿದೆ. ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡ ನಂತರ ಸಕ್ರಿಯಗೊಂಡಿದ್ದ ಯತ್ನಾಳ್ ತನ್ನನ್ನು ವಿಧಾನಸಭೆಯ ಪ್ರತಿಪಕ್ಷದ ನಾಯಕನಾಗಿ ವರಿಷ್ಠರು ಮಾಡಲಿದ್ದಾರೆ ಎಂಬ ಲೆಕ್ಕಾಚಾರ ಕೈಕೊಟ್ಟಿತು.

ಇಲ್ಲಿ ಯಡಿಯೂರಪ್ಪ ತಮ್ಮ ಆಪ್ತ ವಲಯದ ಆರ್.ಅಶೋಕ್ ಅವರನ್ನು ಆಯ್ಕೆ ಮಾಡಿದ ನಂತರ ಯತ್ನಾಳ್‍ಗೆ ಎಲ್ಲಿಯೂ ಕೂಡ ಸ್ಥಾನಮಾನ ಸಿಗದಂತೆ ವ್ಯವಸ್ಥಿತವಾಗಿ ಮೂಲೆಗುಂಪು ಮಾಡಿದ್ದು ಬಿಎಸ್‍ವೈ. ಇದೀಗ ವಿಧಾನಸಭೆಯ ಉಪನಾಯಕನನ್ನಾಗಿ ಅರವಿಂದ್ ಬೆಲ್ಲದ್ ಅವರನ್ನು ಆಯ್ಕೆ ಮಾಡುವಂತೆ ಪರೋಕ್ಷವಾಗಿ ಯಡಿಯೂರಪ್ಪ ವರಿಷ್ಠರಿಗೆ ಸೂಚಿಸಿ ಇಲ್ಲೂ ಕೂಡ ಯತ್ನಾಳ್‍ಗೆ ಮುಖಭಂಗ ಉಂಟು ಮಾಡಿದರು.

ಹೀಗೆ ಹಂತ ಹಂತವಾಗಿ ಯತ್ನಾಳ್ ಅವರನ್ನು ನಿರ್ಲಕ್ಷ ಮಾಡುವಲ್ಲಿ ಬಿಎಸ್‍ವೈ ಯಶಸ್ವಿಯಾಗಿದ್ದಾರೆ. ವೈಯಕ್ತಿಕ ಕೆಲಸಕ್ಕೆ ನಾನು ದೆಹಲಿಗೆ ಹೋಗಿದ್ದೇನೆ ಎಂದು ಹೇಳಿದಾಗಲೇ ಅವರಿಗೆ ಭಾರೀ ಹಿನ್ನಡೆ ಉಂಟಾಗಿತ್ತು. ಏಕೆಂದರೆ ಬಿಎಸ್‍ವೈ ಕುಟುಂಬದ ವಿರುದ್ಧ ದೆಹಲಿಗೆ ದೂರು ನೀಡಲು ಅವರು ತೆರಳಿದ್ದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹಸಚಿವ ಅಮಿತ್ ಷಾ ಅವರನ್ನು ಭೇಟಿ ಮಾಡುವ ಉದ್ದೇಶವಿತ್ತು..

3 ಹೊಸ ಕ್ರಿಮಿನಲ್ ನ್ಯಾಯ ಮಸೂದೆಗಳಿಗೆ ರಾಷ್ಟ್ರಪತಿ ಅಂಕಿತ

ನಾಲ್ಕು ದಿನ ದೆಹಲಿಯಲ್ಲಿ ಠಿಕ್ಕಾಣಿ ಹೂಡಿದರೂ ಅಪ್ಪಿತಪ್ಪಿಯೂ ವರಿಷ್ಠರು ಭೇಟಿಗೆ ಸಮಯಾವಕಾಶವನ್ನು ನೀಡಲಿಲ್ಲ. ಕೊನೆಗೆ ಬಂದ ದಾರಿಗೆ ಸುಂಕವಿಲ್ಲದಂತೆ ಬರಿಗೈಯಲ್ಲಿ ಹಿಂತಿರುಗುವಂತಾಯಿತು. ಯಡಿಯೂರಪ್ಪ ಕುಟುಂಬದ ವಿರುದ್ಧ ಅವರು ಎಷ್ಟೇ ಆರೋಪಗಳನ್ನು ಮಾಡಿದರೂ ಅದನ್ನು ನಿರ್ಲಕ್ಷಿಸುವುದೇ ಒಳಿತು ಎಂದು ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ.

ಇನ್ನು ನಮ್ಮನ್ನು ಮಾತುಕತೆಗೆ ದೆಹಲಿಗೆ ಬರುವಂತೆ ವರಿಷ್ಠರು ಸೂಚನೆ ನೀಡಿದ್ದಾರೆ ಎಂದು ಮಾಜಿ ಸಚಿವ ವಿ.ಸೋಮಣ್ಣ ಹೇಳಿ ಮೂರು ವಾರ ಕಳೆದಿದೆ. ಈಗಲೂ ವರಿಷ್ಠರು ಕರೆದಿರುವ ಬಗ್ಗೆ ಯಾವುದೇ ಖಚಿತ ಮಾಹಿತಿ ಇಲ್ಲ. ಅಲ್ಲಿಗೆ ಒಂದಂತೂ ದಿಟವಾಗುತ್ತಿರುವುದು ಏನೆಂದರೆ ಪ್ರತಿದಿನ ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಿರುವವರನ್ನು ಬಿಜೆಪಿ ವರಿಷ್ಠರು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂಬುದಕ್ಕೆ ಈ ಬೆಳವಣಿಗೆಗಳೇ ನಿದರ್ಶನವಾಗಿದೆ.

RELATED ARTICLES

Latest News