ಅತ್ತ ಬಜೆಟ್‍ ಸಿದ್ಧತೆ, ಇತ್ತ ಕ್ಷೇತ್ರಾನುದಾನ ಬಳಸದ ಸೋಮಾರಿ ಶಾಸಕರು

Social Share

ಬೆಂಗಳೂರು,ಜ.30- ಅತ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡನೆಗೆ ಸಿದ್ದತೆ ನಡೆಸುತ್ತಿದ್ದರೆ ಇತ್ತ ಕ್ಷೇತ್ರ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗಿದ್ದ ಅನುದಾನವನ್ನು ಬಳಕೆ ಮಾಡಿಕೊಳ್ಳುವಲ್ಲಿ ಶಾಸಕರು ನಿರಾಸಕ್ತಿ ಹೊಂದಿದ್ದಾರೆ.

ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ (ಶಾಸಕರ ನಿಧಿ) ಯಡಿ ಸಿಗುವ ನಿಧಿಯು ಪ್ರತಿ ಶಾಸಕರಿಗೆ ಸಿಗುವ ಪ್ರಮುಖ ಅನುದಾನವಾಗಿದೆ. ಕ್ಷೇತ್ರಾಭಿವೃದ್ಧಿ ಯೋಜನೆಯಡಿ ಶಾಸಕರು ಶಿಫಾರಸು ಮಾಡುವ ಯೋಜನೆಗಳಿಗೆ ಜಿಲ್ಲಾಧಿಕಾರಿ ಖಾತೆಯಿಂದ ಹಣ ಬಿಡುಗಡೆ ಮಾಡಲಾಗುತ್ತದೆ. ಸರ್ಕಾರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ (ಶಾಸಕರ ನಿಧಿ) ವಾರ್ಷಿಕ 2 ಕೋಟಿ ರೂ. ಅನುದಾನ ನೀಡುತ್ತದೆ.

ಶಾಸಕರ ನಿಧಿಯ ಅನುದಾನ ನೇರವಾಗಿ ಶಾಸಕರ ಖಾತೆಗೆ ಹೋಗುವುದಿಲ್ಲ. ಆ ಹಣ ಜಿಲ್ಲಾಧಿಕಾರಿಗಳ ಪಿ.ಡಿ. (ವೈಯಕ್ತಿಕ ಠೇವಣಿ) ಖಾತೆಗೆ ಹೋಗುತ್ತದೆ. ಶಾಸಕರು ತಮ್ಮ ಕ್ಷೇತ್ರಗಳಲ್ಲಿ ಸಮುದಾಯ ಭವನ, ಗ್ರಾಮೀಣ ರಸ್ತೆ, ಶಾಲೆ, ಕಾಲೇಜು, ಅಂಗನವಾಡಿ ಕಟ್ಟಡ, ಆಸ್ಪತ್ರೆ ಕಟ್ಟಡ, ಚರಂಡಿ, ತುರ್ತು ಕುಡಿಯುವ ನೀರು, ಬೀದಿ ದೀಪ, ಗ್ರಂಥಾಲಯ, ಬಸ್ ತಂಗುದಾಣ ಸೇರಿದಂತೆ ವಿವಿಧ ಜನೋಪಯೋಗಿ ಕೆಲಸಗಳಿಗೆ ಈ ನಿಧಿಯನ್ನು ಬಳಸಬಹುದಾಗಿದೆ.

ಹೀಗೆ ಕ್ಷೇತ್ರಾಭಿವೃದ್ಧಿ ಯೋಜನೆಯಡಿ ಶಾಸಕರು ಶಿಫಾರಸು ಮಾಡುವ ಯೋಜನೆಗಳಿಗೆ ಜಿಲ್ಲಾಧಿಕಾರಿ ಖಾತೆಯಿಂದ ಹಣ ಬಿಡುಗಡೆ ಆಗುತ್ತದೆ. ಪ್ರತಿ ವರ್ಷ ಜೂನ್ ತಿಂಗಳ ಒಳಗೆ ಎಲ್ಲ ಶಾಸಕರು ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದ ತಲಾ 2 ಕೋಟಿವರೆಗಿನ ಪ್ರಸ್ತಾವನೆಗಳನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು ಮತ್ತು ಪ್ರಸ್ತಾವಿತ ಕಾಮಗಾರಿಯನ್ನು ಎರಡು ವರ್ಷದ ಒಳಗೆ ಪೂರ್ಣಗೊಳಿಸಬೇಕಾಗಿದೆ. ಆದರೆ ಮಂಜೂರಾದ ಹಣವನ್ನು ಕ್ಷೇತ್ರದ ಅಭಿವೃದ್ಧಿಗೆ ಬಳಕೆ ಮಾಡುವಲ್ಲಿ ಶಾಸಕರು ಹಿಂದುಳಿದಿದ್ದಾರೆ.

ಬಿಬಿಎಂಪಿ ಆರೋಗ್ಯ ಕೇಂದ್ರಗಳಲ್ಲಿ ಔಷಧಿ ಕೊರತೆ

ಜನಪ್ರತಿನಿಧಿಗಳು ನಿಗದಿತ ಸಮಯದಲ್ಲಿ ಕಾಮಗಾರಿಗಳ ಕ್ರಿಯಾಯೋಜನೆ ಸಲ್ಲಿಸಲು ನಿರಾಸಕ್ತಿ ತೋರುತ್ತಿರುವುದು, ಶಾಸಕರು ಶಿಫಾರಸು ಮಾಡಿದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಚುನಾವಣೆ ಇನ್ನೇನು ಹೊಸ್ತಿಲಲ್ಲಿ ಇದ್ದರೂ ಕ್ಷೇತ್ರಾಭಿವೃದ್ಧಿ ಯೋಜನೆಗಳ ಅನುಷ್ಠಾನಕ್ಕೆ ವೇಗ ಸಿಗದೇ ಇರುವುದು ದುರಂತವೇ ಸರಿ.

ಬಜೆಟ್ ವರ್ಷ ಅಂತ್ಯವಾಗಲು ಇನ್ನೇನು ಎರಡು ತಿಂಗಳು ಮಾತ್ರ ಉಳಿದಿದೆ. ಆದರೆ ಶಾಸಕರ ಕ್ಷೇತ್ರಾಭಿವೃದ್ಧಿ ನಿಯಡಿ ಯೋಜನೆಗಳ ಪ್ರಗತಿ ಮಾತ್ರ ನೀರಸವಾಗಿದೆ. ಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಜನವರಿವರೆಗೆ ಕ್ಷೇತ್ರಾಭಿವೃದ್ಧಿ ನಿಯಡಿ ಪ್ರಗತಿ ಕಂಡಿದ್ದು, ಕೇವಲ 17.62%.30 ಜಿಲ್ಲೆಗಳಿಗೆ ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಡಿ ಈ ಬಾರಿ ಒಟ್ಟು 1,292 ಕೋಟಿ ರೂ. ಹಂಚಿಕೆಯಾಗಿದೆ.

ಈ ಬಜೆಟ್ ವರ್ಷದಲ್ಲಿ ಒಟ್ಟು 600 ಕೋಟಿ ರೂ. ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ ಹಂಚಿಕೆಯಾಗಿದ್ದರೆ, ಆರಂಭಿಕ ಶಿಲ್ಕು 692.26 ಕೋಟಿ ರೂ. ಇತ್ತು. ಆ ಮೂಲಕ 2022-23 ಸಾಲಿನಲ್ಲಿ ಒಟ್ಟು 1,292 ಕೋಟಿ ರೂ. ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಡಿ ಹಂಚಿಕೆಯಾಗಿದೆ.

ಅಬ್ಬರದ ಪ್ರಚಾರಕ್ಕೆ ಬಿಜೆಪಿ ಸಜ್ಜು, ಮೋದಿ-ಯೋಗಿ ಸರಣಿ ರ‍್ಯಾಲಿಗೆ ಸಿದ್ಧತೆ

ಯೋಜನಾ ಇಲಾಖೆ ನೀಡಿದ ಅಂಕಿ ಅಂಶದಂತೆ ಜನವರಿ ಅಂತ್ಯದವರೆಗೆ ಶಾಸಕರ ನಿಯಡಿ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ. ಈವರೆಗೆ ಕ್ಷೇತ್ರಾಭಿವೃದ್ಧಿ ನಿಧಿಯಡಿಯ ವಿವಿಧ ಕಾಮಗಾರಿಗಳಿಗೆ 227.65 ಕೋಟಿ ರೂ. ವೆಚ್ಚವಾಗಿದೆ. ಅಂದರೆ ಒಟ್ಟು ಹಂಚಿಕೆ ಮೊತ್ತದ ಮುಂದೆ ಈವರೆಗೆ ಪ್ರಗತಿ ಕಂಡಿದ್ದು 17.62% ಮಾತ್ರ.

ಚಿಕೆಯಾದ ಅನುದಾನ ಒಂದೆಡೆ ಬಿಡುಗಡೆನೂ ಆಗಿಲ್ಲ, ಇತ್ತ ವೆಚ್ಚ ಆಗಿರುವುದು ಎಳ್ಳಷ್ಟು. ಇದು ಶಾಸಕರು ಕ್ಷೇತ್ರಾಭಿವೃದ್ಧಿ ನಿಧಿ ಯೋಜನೆಯಡಿಯ ಕಾಮಗಾರಿಗಳತ್ತ ತೋರಿರುವ ನಿರಾಸಕ್ತಿಗೆ ಹಿಡಿದ ಕೈಗನ್ನಡಿಯಾಗಿದೆ.
ಜಿಲ್ಲಾವಾರು ಶಾಸಕರ ನಿಧಿ ಬಳಕೆ ಪ್ರಗತಿ ಹೇಗಿದೆ?

ದಾವಣಗೆರೆ 34.65%, ಮಂಡ್ಯ 10.10%, ಕೊಪ್ಪಳ 12.02%, ಕೋಲಾರ 12.29%, ಯಾದಗಿರಿ 0%, ಕಲಬುರ್ಗಿ 16.22%, ಚಿತ್ರದುರ್ಗ 20.02%, ಹಾವೇರಿ 21.35%, ರಾಮನಗರ 12.74%, ಬಳ್ಳಾರಿ 9.17%, ಚಾಮರಾಜನಗರ 27.01%, ಬೆಳಗಾವಿ 27.24%, ರಾಯಚೂರು 14.39%, ಗದಗ 20.30%, ಕೊಡಗು 8.98% ಮಾತ್ರ ಶಾಸಕರ ನಿಧಿ ಅನುದಾನ ಖರ್ಚು ಮಾಡಲಾಗಿದೆ.

ಸಾಲ ತೀರಿಸಲು ಹಣ ಕಳ್ಳತನ ಕಳ್ಳತನ ಮಾಡಿದ್ದ ಆಟೋ ಚಾಲಕನ ಬಂಧನ

ಇನ್ನು ಶಿವಮೊಗ್ಗ 19.93%, ಧಾರವಾಡ 10.09%, ಉ.ಕನ್ನಡ 15.78%, ಚಿಕ್ಕಮಗಳೂರು 27.97%, ಚಿಕ್ಕಬಳ್ಳಾಪುರ 15.87%, ಬೀದರ್ 23.88%, ತುಮಕೂರು 25.50%, ಬೆಂಗಳೂರು ನಗರ 11.34%, ಉಡುಪಿ 23.72%, ಬೆಂಗಳೂರು ಗ್ರಾಮಾಂತರ 28.34%, ಮೈಸೂರು 20.87%, ವಿಜಯಪುರ 26.37%, ಬಾಗಲಕೋಟೆ 10.82%, ದ.ಕನ್ನಡ 25.31%, ಹಾಸನ 13.64% ಪ್ರಮಾಣದಲ್ಲಿ ಶಾಸಕರ ನಿಧಿ ಬಳಕೆ ಪ್ರಗತಿಯಾಗಿದೆ.

MLAs, Budget, development, grant,

Articles You Might Like

Share This Article