ತಿರುಪತಿ, ಜ.14- ಇಲ್ಲಿನ ವಿಮಾನ ನಿಲ್ದಾಣ ಮತ್ತು ಸಿಬ್ಬಂದಿಯ ವಸತಿ ಗೃಹಗಳ ನಿವಾಸಿಗಳು ನೀರು ಪೂರೈಕೆಯಲ್ಲಿನ ಅಡಚಣೆಯಿಂದಾಗಿ ಪರದಾಡುವಂತಾಯಿತು. ರೇಣಿಗುಂಟ ಏರ್‌ಪೋರ್ಟ್ ಮ್ಯಾನೇಜರ್ ಸುನಿಲ್ ಮತ್ತು ತಿರುಪತಿ ಉಪಮೇಯರ್ ಅಭಿನಯ ರೆಡ್ಡಿ ಅವರ ನಡುವಿನ ವಿವಾದ ಇದಕ್ಕೆ ಕಾರಣ ಎನ್ನಲಾಗಿದೆ. ಅಭಿನಯ ರೆಡ್ಡಿ ಆಂಧ್ರ ಪ್ರದೇಶದ ಶಾಸಕ ಕರುಣಾಕರರೆಡ್ಡಿ ಅವರ ಪುತ್ರ.
ಏರ್‌ಪೋರ್ಟ್ ಅಧಿಕಾರಿಗಳು ಅಭಿನಯ ರೆಡ್ಡಿಗೆ ವಿಮಾನ ನಿಲ್ದಾಣ ಪ್ರವೇಶಾವಕಾಶ ನಿರಾಕರಿಸಿದರೆನ್ನಲಾಗಿದೆ. ಇದರಿಂದ ಕೆರಳಿದ ಅಭಿನಯ ರೆಡ್ಡಿ ವಿಮಾನ ನಿಲ್ದಾಣ ಮತ್ತು ಅದಕ್ಕೆ ಸಂಬಂಧಿಸಿದ ಪ್ರದೇಶಗಳಿಗೆ ನೀರು ಪೂರೈಕೆ ಸ್ಥಗಿತಗೊಳಿಸಿದರು ಎಂದು ಆರೋಪಿಸಲಾಗಿದೆ.
ಅಭಿನಯರೆಡ್ಡಿ ಮತ್ತು ಅವರ ತಂದೆ ಆಡಳಿತಾರೂಢ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‍ಆರ್‍ಸಿಪಿ) ನಾಯಕರಾಗಿದ್ದಾರೆ. ರೇಣುಗುಂಟ ವಿಮಾನ ನಿಲ್ದಾಣವು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿದ್ದು, ಏರ್‌ಪೋರ್ಟ್ ಅಥಾರಿಟಿ ಆಫ್ ಇಂಡಿಯಾ (ಎಎಐ) ಇದರ ನಿರ್ವಹಣೆ ಮಾಡುತ್ತದೆ.
