ಶಾಸಕರು, ಸಭಾಪತಿ, ಸ್ಪೀಕರ್ ವೇತನ ಭತ್ಯೆ ಹೆಚ್ಚಳ

Social Share

ಬೆಂಗಳೂರು, ಫೆ.22- ಶಾಸಕರು, ಸಭಾಧ್ಯಕ್ಷರು, ಸಭಾಪತಿ ಅವರ ವೇತನ ಭತ್ಯೆ ಪರಿಷ್ಕರಣೆಗೆ ಅವಕಾಶ ಮಾಡಿಕೊಡುವ ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ-2022 ಹಾಗೂ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ-2022ಕ್ಕೆ ವಿಧಾನ ಸಭೆಯಲ್ಲಿಂದು ಒಪ್ಪಿಗೆ ದೊರೆಯಿತು.
ವಿಧಾನಮಂಡಳದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ ಪರಿಷ್ಕರಣೆಯಿಂದ ವಾರ್ಷಿಕ 67 ಕೋಟಿ ರೂ. ಹೆಚ್ಚುವರಿ ವೆಚ್ಚ ಉಂಟಾಗಲಿದೆ. ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕದಿಂದ 25.40 ಕೋಟಿ ರೂ. ಆರ್ಥಿಕ ಹೊರೆಯಾಗಲಿದೆ. ಮುಖ್ಯಮಂತ್ರಿ ಪರವಾಗಿ ವಿಧಾನಸಭೆಯಲ್ಲಿಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ವಿಧೇಯಕ ಮಂಡಿಸಿದರು.
ಜೀವನ ನಿರ್ವಹಣಾ ವೆಚ್ಚದಲ್ಲಿ ಗಣನೀಯ ಹೆಚ್ಚಳವಾಗಿದೆ. ಹೀಗಾಗಿ ವಿಧಾನಮಂಡಳದವರ ಸಂಬಳ, ನಿವೃತ್ತಿ ವೇತನಗಳ ಮತ್ತು ಭತ್ಯೆಗಳ ಅನಿಯಮ 1956ನ್ನು 1957ರ ಕರ್ನಾಟಕ ಅನಿಯಮ-2ನ್ನು ತಿದ್ದುಪಡಿ ಮಾಡುವ ಮೂಲಕ ಸಂಸದೀಯ ಕಾರ್ಯನಿರ್ವಾಹಕರ ಶಾಸಕರ ಸಂಬಳ ಭತ್ಯೆಗಳನ್ನು ಹಾಗೂ ಕೆಲವು ಇತರೆ ಪ್ರಯೋಜನಗಳನ್ನು ಹೆಚ್ಚಿಸುವ ಉದ್ದೇಶವನ್ನು ಹೊಂದಿದೆ.
ಹಾಗೆಯೇ ಮುಖ್ಯಮಂತ್ರಿಗಳ, ಮಂತ್ರಿಗಳ, ರಾಜ್ಯಮಂತ್ರಿಗಳ, ಉಪಮಂತ್ರಿಗಳ ಸಂಬಳ ಭತ್ಯೆಯನ್ನು ದೀರ್ಘಕಾಲದಿಂದ ಪರಿಷ್ಕರಿಸಿಲ್ಲ. ಹೀಗಾಗಿ ಮನೆ ಬಾಡಿಗೆ, ಸಂಬಳ, ವಾಹನ ಭತ್ಯೆ ಇತ್ಯಾದಿಗಳ ಪರಿಷ್ಕರಣೆಗಾಗಿ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ ಅನಿಯಮ 1956ರಲ್ಲಿ ತಿದ್ದುಪಡಿ ಮಾಡಲು ಈ ವಿಧೇಯಕ ತರಲಾಗಿದೆ ಎಂದು ಸಚಿವರು ತಿಳಿಸಿದರು.
ಕಾಂಗ್ರೆಸ್ ಶಾಸಕರ ಧರಣಿ, ಗದ್ದಲದ ನಡುವೆ ವಿಧೇಯಕ ಮಂಡಿಸಲಾಯಿತು. ಗದ್ದಲದ ನಡುವೆ ಧ್ವನಿಮತದ ಎರಡೂ ವಿಧೇಯಕಗಳಿಗೆ ಪ್ರತ್ಯೇಕವಾಗಿ ಅಂಗೀಕಾರ ದೊರೆಯಿತು. ಸಭಾಪತಿ, ಸಭಾಧ್ಯಕ್ಷರಿಗೆ ಸಂಬಳ ಒಂದು ತಿಂಗಳಿಗೆ 50 ಸಾವಿರದಿಂದ 75 ಸಾವಿರ ರೂ.ಗಳಿಗೆ ಪರಿಷ್ಕರಿಸಲಾಗುತ್ತಿದೆ.
ಒಂದು ವರ್ಷಕ್ಕೆ 3 ಲಕ್ಷ ರೂ.ಗಳ ಆತಿಥ್ಯ ಭತ್ಯೆಯನ್ನು ನಾಲ್ಕು ಲಕ್ಷ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ವಾಹನದ ಇಂಧನ ಭತ್ಯೆಯನ್ನು ಒಂದು ಸಾವಿರ ಲೀಟರ್ ಬದಲಾಗಿ 2000 ಲೀಟರ್‍ಗೆ ಹೆಚ್ಚಿಸಲಾಗಿದೆ. ವಿರೋಧ ಪಕ್ಷದ ನಾಯಕರು ಸರ್ಕಾರಿ ಮುಖ್ಯ ಸಚೇತಕರಿಗೆ ವೇತನ ಭತ್ಯೆಗಳು ಹಾಗೆ ವಿಧಾನಸಭೆ ಮತ್ತು ಪರಿಷತ್‍ನ ಸದಸ್ಯರ ವೇತನ ಭತ್ಯೆಗಳನ್ನು ಪರಿಷ್ಕರಣೆಗೆ ಈ ವಿಧೇಯಕ ಅವಕಾಶ ಮಾಡಿಕೊಡಲಿದೆ.
ಮುಖ್ಯಮಂತ್ರಿಯವರ ಸಂಬಳ ಪ್ರತಿ ತಿಂಗಳು 50 ಸಾವಿರ ರೂ.ಗಳಿಂದ 75 ಸಾವಿರ ರೂ.ಗಳಿಗೆ, ಆತಿಥ್ಯ ಭತ್ಯೆಯನ್ನು 3 ಲಕ್ಷದಿಂದ 4 ಲಕ್ಷ ರೂ.ಗಳಿಗೆ ಇಂಧನ ಭತ್ಯೆಯನ್ನು ದುಪ್ಪಟ್ಟು ಮಾಡಲಾಗಿದೆ. ಅದೇ ರೀತಿ ಸಚಿವರು, ರಾಜ್ಯಸಚಿವರು ಮತ್ತು ಮಂತ್ರಿಗಳು ಸಂಬಳ, ಭತ್ಯೆ ಹೆಚ್ಚಳಕ್ಕೆ ವಿಧೇಯಕದಲ್ಲಿ ಅವಕಾಶ ಮಾಡಿಕೊಡಲಾಗಿದೆ.

Articles You Might Like

Share This Article